ಉಡುಪಿ: ಅಸ್ವಸ್ಥಗೊಂಡ ಯುವತಿಗೆ ನೆರವಾದ ಖಾಸಗಿ ಬಸ್​ ಚಾಲಕ, ನಿರ್ವಾಹಕ

| Updated By: ವಿವೇಕ ಬಿರಾದಾರ

Updated on: Aug 05, 2024 | 1:39 PM

ಉಡುಪಿಯ ಖಾಸಗಿ ಸಂಸ್ಥೆಯ ಬಸ್​​ನ ಚಾಲಕ ಮತ್ತು ನಿರ್ವಾಹಕನ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಿರ್ವದಿಂದ ಉಡುಪಿ ನಗರಕ್ಕೆ ಬರುತ್ತಿದ್ದ ಬಸ್​ನಲ್ಲಿ ಯುವತಿ ಅಸ್ವಸ್ಥಗೊಂಡಿದ್ದಳು. ಕೂಡಲೆ ಚಾಲಕ ಮತ್ತು ನಿರ್ವಾಹಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಡುಪಿ, ಆಗಸ್ಟ್​ 05: ಅಸ್ವಸ್ಥಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಖಾಸಗಿ ಬಸ್ (Private Bus) ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ಮಾನವೀಯತೆ ಮೆರೆದಿದ್ದಾರೆ. ಚಾಲಕ ಮತ್ತು ನಿರ್ವಾಹಕನ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು (ಆ.05) ಬೆಳಗ್ಗೆ ನವೀನ್​ ಎಂಬ ಹೆಸರಿನ ಖಾಸಗಿ ಬಸ್​ ಶಿರ್ವ್​ದಿಂದ ಉಡುಪಿಗೆ (Udupi) ಬರುತ್ತಿತ್ತು. ಈ ಬಸ್​ನಲ್ಲಿ ಬರುತ್ತಿದ್ದ ಓರ್ವ ಯುವತಿ ಇದಕ್ಕಿದ್ದಂತೆ ಬಸ್​ನಲ್ಲೇ ವಾಂತಿ ಮಾಡಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದಳು.

ಕೂಡಲೆ ಚಾಲಕ ಶಶಿಕಾಂತ್​ ಬಸ್​ ಅನ್ನು ಟಿಎಂಎ ಪೈ ಆಸ್ಪತ್ರೆಗೆ ಕಡೆಗೆ ತಿರುಗಿಸಿದರು. ‌ಬಸ್​ ಅನ್ನು ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಳಿಕ ತೆಗೆದುಕೊಂಡು ಹೋಗಿ ಯುವತಿಯನ್ನು ದಾಖಲಿಸಿದರು. ತಕ್ಷಣ ಯುವತಿಗೆ ಪ್ರಥಮ ಚಿಕಿತ್ಸೆಗೆ ನೀಡಲಾಯಿತು. ಈ ವಿಚಾರವನ್ನು ಯುವತಿಯ ಮನೆಯವರಿಗೆ ತಿಳಿಸಲಾಯಿತು. ಪೋಷಕರು ಆಸ್ಪತ್ರೆಗೆ ಬರುವ ತನಕ ಯುವತಿಯ ಚಿಕಿತ್ಸೆಗೆ ಚಾಲಕ ಹಾಗೂ ನಿರ್ವಾಹಕ ಸಹಕಾರ ನೀಡಿದರು. ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬ್ರಹ್ಮಾವರ: ಐಟಿ ದಾಳಿ ಮಾದರಿಯಲ್ಲಿ ದರೋಡೆಗೆ ಯತ್ನ, ದೂರು ದಾಖಲು

ವಿದ್ಯಾರ್ಥಿನಿಗೆ ಬಸ್ಸೇ ಎಮರ್ಜೆನ್ಸಿ ವಾಹನವಾಯ್ತು!

ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಕೂಳೂರು ಮಾರ್ಗದಲ್ಲಿ ಸಾಗುತ್ತಿದ್ದ ಬಸ್​​ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡಿದ್ದವು. ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್​ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದ್ದರು.

ಬಸ್​​ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು ಕೇವಲ 6 ನಿಮಿಷಗಳಲ್ಲಿ 6 ಕಿಲೋಮೀಟರ್ ದೂರ ಕ್ರಮಿಸಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿದ್ದರು. ಸಂದರ್ಭವನ್ನು ಅರಿತುಕೊಂಡು ತಕ್ಷಣವೇ ಬಸ್ಸನ್ನು ಆಸ್ಪತ್ರೆಯತ್ತ ಚಲಾಯಿಸಿದ ಕಾರಣ ವಿದ್ಯಾರ್ಥಿನಿಯನ್ನು ರಕ್ಷಿಸಲು ಸಾಧ್ಯವಾಗಿತ್ತು. ಪರಿಣಾಮವಾಗಿ ವಿದ್ಯಾರ್ಥಿನಿಯ ಜೀವ ಉಳಿಯಿತು. ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಗೆ ಮತ್ತು ಮಾನವೀಯತೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ