ಬ್ರಹ್ಮಾವರ: ಐಟಿ ದಾಳಿ ಮಾದರಿಯಲ್ಲಿ ದರೋಡೆಗೆ ಯತ್ನ, ದೂರು ದಾಖಲು
ಉಡುಪಿ ಜಿಲ್ಲೆಯಲ್ಲಿ ಖತರ್ನಾಕ್ ಗ್ಯಾಂಗ್ ಒಂದು ಆ್ಯಕ್ಟಿವ್ ಆಗಿದೆ. ಐಟಿ ಅಧಿಕಾರಿಗಳ ಮಾದರಿಯಲ್ಲಿ ಮನೆಯ ಮೇಲೆ ದಾಳಿ ಮಾಡಿ, ದರೋಡೆ ಮಾಡುತ್ತಿದೆ. ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕವಿತಾ ಎಂಬುವರ ನಿವಾಸಕ್ಕೆ ಇದೇ ಗ್ಯಾಂಗ್ ನುಗ್ಗಿತ್ತು. ಆದರೆ ದರೋಡೆ ಯತ್ನ ವಿಫಲಗಿದೆ.
ಉಡುಪಿ, ಜುಲೈ 29: ಬ್ರಹ್ಮಾವರ (Brahmavara) ತಾಲೂಕಿನ ಮಣೂರು ಗ್ರಾಮದ ಕವಿತಾ (34) ಎಂಬುವರ ನಿವಾಸಕ್ಕೆ ಸುಮಾರು 6-8 ಜನರು ನುಗ್ಗಿ ದಾಂಧಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 25ರ ಬೆಳಗ್ಗೆ 8.30ರ ಸುಮಾರಿಗೆ ಯಾರೋ ಕವಿತಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಕವಿತಾ ಅವರು 9 ಗಂಟೆ ಸುಮಾರಿಗೆ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ.
ಬಳಿಕ, ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್ ಇನ್ ಸೆಕ್ಯುರಿಟಿಯು ಕವಿತಾ ಅವರಿಗೆ ಕರೆ ಮಾಡಿದ್ದಾರೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶೀಸಿದ್ದರು. ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದರು.
ಇದನ್ನೂ ಓದಿ: ಹಳೆಯ ಪೈಪ್, ಲಾರಿ ಚಸ್ಸಿಯಲ್ಲೇ ಸಿದ್ದವಾಯ್ತು ಸೇತುವೆ; ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪರಿಕಲ್ಪನೆಗೆ ಜನರು ಫಿದಾ
ಆದರೆ, ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಹೋದರು. ಹೋಗುವಾಗ ಗೇಟ್ಗೆ ಹಾನಿ ಮಾಡಿದ್ದಾರೆ ಎಂದು ಸೈನ್ ಇನ್ ಸೆಕ್ಯೂರಿಟಿ ಮಾಹಿತಿ ನೀಡಿದ್ದಾರೆ. ತಂಡ ಐಟಿ ಅಧಿಕಾರಿಗಳಂತೆ ಮನೆಗೆ ಆಗಮಿಸಿತ್ತು. ಜೊತೆಯಲ್ಲಿ ಓರ್ವ ಪೊಲೀಸ್ ಪೇದೆಯೂ ಇದ್ದ ಎಂಬ ಮಾಹಿತಿ ಗೊತ್ತಾಗಿದೆ. ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೈನ್ ಇನ್ ಸೆಕ್ಯೂರಿಟಿ ಕುಂದಾಪುರ ವ್ಯಾಪ್ತಿಯಲ್ಲಿ ಹಲವು ಮನೆ ಕಳ್ಳತನವನ್ನು ವಿಫಲಗೊಳಿಸಿದೆ. ಸಿಸಿಟಿವಿ ಅಳವಡಿಸಿರುವ ಮನೆಗೆ 24 ಗಂಟೆಯೂ ಭದ್ರತೆ ನೀಡಲಾಗುತ್ತದೆ. ಯಾವುದೇ ಅನಪೇಕ್ಷಿತ ವಿಚಾರದ ಬಗ್ಗೆ ಸೈನ್ ಇನ್ ಸೆಕ್ಯೂರಿಟಿ ಅಲರ್ಟ್ ಮಾಡುತ್ತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Mon, 29 July 24