ಉಡುಪಿ ನರಹಂತಕ ಆರೋಪಿ ಪ್ರವೀಣ್ ಚೌಗಲೆಗೆ ಜೀವ ಭಯ! ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ: ಏನಿದು ಬೆಳವಣಿಗೆ?
Udupi quadruple murder case: ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಹಾಡಹಗಲೇ ಕೊಂದ ಆರೋಪಿ ಪ್ರವೀಣ್ ಚೌಗಲೆಗೆ ಜೀವ ಭಯ ಉಂಟಾಗಿದೆ. ಹಾಗಾಗಿ ಅವನನ್ನು ಉಡುಪಿಯ ಸಬ್ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ.
ಉಡುಪಿಯ (Udupi) ನೇಜಾರಿನಲ್ಲಿ ನಡೆದ ನಾಲ್ವರ ಕಗ್ಗೊಲೆ (Udupi quadruple murder) ಪ್ರಕರಣದ ಆರೋಪಿ ಪತ್ತೆಯಾದರೂ, ನೊಂದ ಕುಟುಂಬವಾಗಲಿ ಉಡುಪಿಯ ಜನತೆಯಾಗಲಿ ಈ ದುರ್ಘಟನೆಯನ್ನು ಮರೆತಿಲ್ಲ. ಇಂದಿಗೂ ಸಾಲು ಸಾಲು ಗಣ್ಯರು ಬಂದು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆ ಆರೋಪಿ ಪ್ರವೀಣ್ ಚೌಗಲೆಯನ್ನು( Praveen Chogle ) ಉಡುಪಿಯ ಸಬ್ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ (Parappana Agrahara Jail in Bengaluru) ಸ್ಥಳಾಂತರ ಮಾಡಲಾಗಿದೆ.
ದೀಪಾವಳಿಯ ದಿನ ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಹಾಡಹಗಲೇ ಕೊಂದ ಆರೋಪಿ ಪ್ರವೀಣ್ ಚೌಗಲೆಗೆ ಜೀವ ಭಯ ಉಂಟಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಈತನನ್ನು ಉಡುಪಿಯ ಸಬ್ ಜೈಲಿಗೆ ರವಾನಿಸಲಾಗಿತ್ತು. ಆದರೆ ಈ ಜೈಲಿನಲ್ಲಿ ಈತನಿಗೆ ಭದ್ರತೆ ನೀಡುವುದು ಸವಾಲಾಗಿದೆ. ಸಹಕೈದಿಗಳೇ ಈ ಪಾಪಿಯನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುವ ಸಾಧ್ಯತೆ ಇದೆ. ಸೀಮಿತ ವ್ಯವಸ್ಥೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸುವುದು ಕಷ್ಟಸಾಧ್ಯ. ಹಾಗಾಗಿ ಸದ್ಯ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಡಿಸೆಂಬರ್ 5ರ ತನಕ ಈತನಿಗೆ ನ್ಯಾಯಾಂಗ ಬಂಧನವಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಈ ನಡುವೆ ಸಮಾಜದ ಗಣ್ಯರು, ಧರ್ಮ ಗುರುಗಳು, ರಾಜಕಾರಣಿಗಳು ಪ್ರತಿದಿನ ಎಂಬಂತೆ ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ, ಧೈರ್ಯ ಹೇಳಲು ಬರುತ್ತಿದ್ದಾರೆ. ಮೊದಲೇ ಆಘಾತದಲ್ಲಿರುವ ಕುಟುಂಬ ಈ ನಿರಂತರ ಭೇಟಿಯಿಂದ ಸುಸ್ತಾಗಿದೆ. ಈವತ್ತು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಭೇಟಿ ಕೊಟ್ಟಿದ್ದರು. ಈ ವೇಳೆ ಘಟನೆಯನ್ನು ವಿವರಿಸುತ್ತಾ ನೊಂದ ಕುಟುಂಬದ ಯಜಮಾನ ನೂರ್ ಮಹಮ್ಮದ್ ಸ್ಥಳದಲ್ಲೇ ಕುಸಿದು ಬಿದ್ದರು. ತನ್ನ ಕುಟುಂಬದ ನಾಲ್ವರನ್ನು ಕಳೆದುಕೊಂಡ ನೂರ್ ಮಹಮ್ಮದ್ ಇನ್ನೂ ಕೂಡ ತೀವ್ರ ಆಘಾತದಲ್ಲಿದ್ದಾರೆ.
ಈ ದುರ್ಘಟನೆ ವಿದೇಶಗಳಲ್ಲಿ ಕೆಲಸ ಮಾಡುವ ಅನೇಕರನ್ನು ಕಂಗೆಡಿಸಿದೆ. ಸ್ವಂತ ಊರಿನಲ್ಲಿ ಉಳಿದಿರುವ ಏಕಾಂಗಿ ಕುಟುಂಬಗಳ ಭದ್ರತೆಯ ಬಗ್ಗೆ ದುಡಿಯಲೆಂದು ವಿದೇಶಗಳಿಗೆ ಹೋದವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಊರಿನಲ್ಲಿರುವ ತಮ್ಮ ಕುಟುಂಬದ ಬಗ್ಗೆ ಅನಿವಾಸಿ ಕನ್ನಡಿಗರಿಗೆ ಆತಂಕ ಉಂಟಾಗಿದೆ ಎಂದು ಸ್ವತಹ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಆರತಿ ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ನೀತಿ, ಸಚಿವಾಲಯ ಸ್ಥಾಪನೆಗೆ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.ಹೊರ ದೇಶದಲ್ಲಿರುವವರ ಕುಟುಂಬಗಳ ಸುರಕ್ಷತೆಗೆ ಈ ಮೂಲಕ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಆರೋಪಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ಆಗಬೇಕು ಮತ್ತು ಈ ಪ್ರಕರಣದ ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕವಾಗಬೇಕು ಅನ್ನೋ ಕುಟುಂಬದ ಒತ್ತಾಯಕ್ಕೆ ಸರಕಾರ ಸ್ಪಂದಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Thu, 30 November 23