ಉಡುಪಿ, ಮೇ 8: ಮಂಗಳೂರಿನ ನಂತರ ಇದೀಗ ಉಡುಪಿಯಲ್ಲಿಯೂ (Udupi) ನೀರಿನ ಪಡಿತರ (Water ration) ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರೊಂದಿಗೆ ಈ ವ್ಯವಸ್ಥೆ ಪರಿಚಯಿಸಿದ ಎರಡನೇ ನಗರವಾಗಿ ಉಡುಪಿ ಗುರುತಿಸಿಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇಂದಿನಿಂದ (ಬುಧವಾರ) ನೀರಿನ ಪಡಿತರ ವ್ಯವಸ್ಥೆ ಜಾರಿಯಾಗುತ್ತಿದ್ದು, ನಗರ ನೀರು ಪೂರೈಸುವ ಬಜೆ ಅಣೆಕಟ್ಟೆಯಲ್ಲಿ (Baje Dam) ನೀರು ತೃಪ್ತಿಕರ ಮಟ್ಟ ತಲುಪುವವರೆಗೆ ಜಾರಿಯಲ್ಲಿರಲಿದೆ ಎಂದು ಉಡುಪಿ ನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಉಡುಪಿ ನಗರದ ಏಕೈಕ ನೀರಿನ ಮೂಲವಾಗಿರುವ ಬಜೆಯಲ್ಲಿ ಸ್ವರ್ಣಾ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟೆ ಪ್ರಸ್ತುತ 3.25 ಮೀಟರ್ನಷ್ಟು ನೀರಿನ ಸಂಗ್ರಹ ಹೊಂದಿದೆ. ಅದರ ಸಂಗ್ರಹ ಸಾಮರ್ಥ್ಯ 6.30 ಮೀಟರ್ ಇದ್ದು, ಸದ್ಯ ಇರುವ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.
ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಸಾಮಾನ್ಯ ಮಟ್ಟಕ್ಕೆ ಮರಳುವವರೆಗೆ ನೀರಿನ ಪಡಿತರ ಜಾರಿಯಲ್ಲಿರಲಿದೆ. ಇದನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ತುಂಬೆ ಅಣೆಕಟ್ಟೆಯಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾಗಿರುವ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ಮಂಗಳೂರು ಮಹಾನಗರ ಪಾಲಿಕೆಯು ಶನಿವಾರ ನೀರಿನ ಪಡಿತರವನ್ನು ಪ್ರಾರಂಭಿಸಿತ್ತು.
ಪಡಿತರ ಅಂದಕೂಡಲೇ, ತಕ್ಷಣಕ್ಕೆ ಬೇರೆಯೇ ನೆನಪಾಗಬಹುದು. ಆದರೆ, ನೀರಿನ ಪಡಿತರ ಎಂದರೆ ಹಾಗಲ್ಲ. ತೀವ್ರ ಕೊರತೆ, ಬಿಕ್ಕಟ್ಟು ಇದ್ದಾಗ ದೈನಂದಿನ ನೀರಿನ ಬಳಕೆಯಲ್ಲಿ ಕಡಿತ ಮಾಡುವಂತೆ ಸೂಚಿಸುವುದು, ಪೂರೈಕೆಗೆ ಮಿತಿ ಹೇರುವುದು, ಪರ್ಯಾ ದಿನಗಳಲ್ಲಿ ಮಾತ್ರ ಪೂರೈಕೆ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವುದೇ ನೀರಿನ ಪಡಿತರೀಕರಣ. ನೀರಿನ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಅಥವಾ ಪೂರೈಕೆ ಒತ್ತಡವನ್ನು ಕಡಿಮೆ ಮಾಡುವ ಕ್ರಮಗಳನ್ನು ನೀರಿನ ಪಡಿತರ ಒಳಗೊಂಡಿರುತ್ತದೆ.
ಉದಾಹರಣೆಗೆ, ಮಂಗಳೂರಿನಲ್ಲಿ ನಗರದ ದಕ್ಷಿಣ ಮತ್ತು ಸುರತ್ಕಲ್ ಪ್ರದೇಶಗಳಿಗೆ ಪ್ರತಿದಿನದ ಬದಲು ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಶನಿವಾರ ಘೋಷಿಸಿತ್ತು.
ಇದನ್ನೂ ಓದಿ: ಬಿಸಿಲಿಗೆ ಬಳಲಿದ್ದ ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ
ನಗರದಲ್ಲಿ ಮೇ ಅಂತ್ಯದವರೆಗೆ ಸಾಕಷ್ಟು ನೀರು ಇದ್ದರೂ ಮುಂಜಾಗ್ರತಾ ಕ್ರಮವಾಗಿ ಪಡಿತರ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Wed, 8 May 24