ಬಿಸಿಲಿಗೆ ಬಳಲಿದ್ದ ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ
ವಾತಾವರಣದಲ್ಲಿನ ಉಷ್ಣತೆ ಕೇವಲ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನು ಕೂಡ ಕಾಡುತ್ತಿದೆ. ಅದರಲ್ಲೂ ಕೊಟ್ಟಿಗೆಯಿಂದ ಹೊರಗೆ ತಿರುಗಾಡುವ ಹಸುಗಳು ನೀರಿಗಾಗಿ ಸಂಕಟಪಡುತ್ತಿವೆ. ಗೋಪಾರ್ಟಿ ಹೆಸರಲ್ಲಿ ಗೋ ಸೇವೆ ನಡೆಸುತ್ತಿರುವ ಯುವಕರ ತಂಡವೊಂದು ನೀಲಾವರ ಗೋಶಾಲೆಯ ಬಳಲಿದ ಹಸುಗಳಿಗೆ ಕೆ.ಜಿಗಟ್ಟಲೆ ಕಲ್ಲಂಗಡಿ ಕೊಟ್ಟು, ಸಾರ್ಥಕತೆ ಮೆರೆದಿದ್ದಾರೆ.
ಉಡುಪಿ, ಮೇ.01: ಅನಾಥ ಹಸುಗಳ ಆಪ್ತರಕ್ಷಕ ಈ ನೀಲಾವರ ಗೋಶಾಲೆ. ಉಡುಪಿ(Udupi) ಜಿಲ್ಲೆಯಲ್ಲಿ ಪೇಜಾವರ ಮಠಾಧೀಶರ ನಡೆಸುವ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿವೆ. ಸೆಖೆಯಿಂದ ಸಂಕಟ ಪಡುತ್ತಿರುವ ಗೋವುಗಳಿಗೆ ಯುವಕರ ತಂಡದವರು 3,000 ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟಿದ್ದಾರೆ. ಗೋಶಾಲೆಗೆ ಬಂದು ಕಲ್ಲಂಗಡಿ(Watermelon) ಗಳನ್ನು ತಾವೇ ಕೈಯಾರೆ ಕೊಯ್ದು, ತುಂಡು ಮಾಡಿ ಗೋವುಗಳ ಬಾಯಿಗೆ ಕೊಟ್ಟು ಸಂಭ್ರಮಿಸಿದ್ದಾರೆ. ಬಿಸಿಲಿಗೆ ಬಳಲಿದ್ದ ಗೋವುಗಳು ಈ ಸಿಹಿ ನೀರಿನ ಹಣ್ಣುಗಳನ್ನು ತಿಂದು ಖುಷಿಪಟ್ಟವು.
ಗೋ ಸೇವೆ ನಡೆಸುತ್ತಿದೆ ಈ ತಂಡ
ಇದೊಂದು ಅಪರೂಪದ ಯುವಕರ ತಂಡ. ರಘುನಂದನ್ ಹೆಬ್ಬಾರ್ ಎಂಬವರ ನೇತೃತ್ವದಲ್ಲಿ, ಈ ತಂಡ ಗೋ ಸೇವೆ ನಡೆಸುತ್ತಿದೆ. ಯುಗಾದಿ ಗೋಪಾರ್ಟಿ ಹೆಸರಲ್ಲಿ, ಗೋವುಗಳಿಗೆ ಕಾಲ ಕಾಲಕ್ಕೆ ತಿನ್ನಲು ಕೊಡುತ್ತಾ ಬಂದಿದ್ದಾರೆ. ನೀಲಾವರ ಗೋಶಾಲೆಯೂ ಸೇರಿದಂತೆ ಪರಿಸರದ ಹತ್ತಾರು ಗೋಶಾಲೆಗಳಿಗೆ ಈ ತಂಡ ಭೇಟಿ ನೀಡುತ್ತದೆ. ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿ ವಾಪಸ್ ಬರುತ್ತದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ಗಿರಿ: ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ
ಪ್ರತಿಯೊಬ್ಬರೂ ಕೂಡ ಗೋಸೇವೆ ನಡೆಸಬೇಕು ತಿಂಗಳ ಗಳಿಕೆಯಲ್ಲಿ ಒಂದು ಸಣ್ಣ ಮೊತ್ತವನ್ನು ಪರಿಸರದಲ್ಲಿ ಅಡ್ಡಾಡುವ ಗೋವುಗಳ ಹಿತರಕ್ಷಣೆಗೆ ಬಳಸಬೇಕು ಎನ್ನುವುದು ಇವರ ಆಶಯವಾಗಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿ ಬಿದ್ದ ಅನಾಥ ಹಸುಗಳಿಗೆ ನೀಲಾವರ ಗೋಶಾಲೆಯೇ ಆಶ್ರಯ ತಾಣವಾಗಿದೆ. ಪಾರ್ಟಿ ಹೆಸರಲ್ಲಿ ಮೋಜು ಮಸ್ತಿ ಮಾಡುವ ಜನರು ಈ ರೀತಿಯ ಗೋಪಾರ್ಟಿ ನಡೆಸಿದರೆ, ಮನಸ್ಸಿಗೂ ಸಂತೋಷ, ಗೋವುಗಳಿಗೂ ಸಂಭ್ರಮ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ