ಬೆಂಗಳೂರು: ಅಮೆರಿಕಕ್ಕೆ ತೆರಳಲು ವೀಸಾ (US Visa) ಪಡೆಯಬೇಕಿದ್ದರೆ ಈಗ ಚೆನ್ನೈಯಲ್ಲಿರುವ ಅಮೆರಿಕ ಕಾನ್ಸುಲೇಟ್ (America Consulates) ಅಥವಾ ರಾಯಭಾರ ಕಚೇರಿಗೆ ತೆರಳಿ ಸಂದರ್ಶನ ಹಾಗೂ ಇತರ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಅದರ ಅಗತ್ಯವಿಲ್ಲ. ಬೆಂಗಳೂರಿನಲ್ಲೇ ವೀಸಾ ಪಡೆಯುವ ಪ್ರಕ್ರಿಯೆಗಳನ್ನು ಪೂರೈಸಬಹುದು! ಹೌದು, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸದಾಗಿ ದೂತಾವಾಸ ಕಚೇರಿ ಆರಂಭಿಸುವುದಾಗಿ ಅಮೆರಿಕ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಅಲ್ಲಿನ ಸರ್ಕಾರ ಈ ಘೋಷಣೆ ಮಾಡಿದೆ. ಇದರೊಂದಿಗೆ, ಕನ್ನಡಿಗರ ಬಹುದಿನಗಳ ಕನಸೊಂದು ನನಸಾಗುವ ಕಾಲ ಸನ್ನಿಹಿತವಾಗಿದೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲಿದೆ. ಅದೇ ರೀತಿ ಭಾರತ ಸಿಯಾಟಲ್‌ನಲ್ಲಿ ಕಚೇರಿ ತೆರೆಯಲಿದ್ದು, ಜನರ ನಡುವಿನ ಬಾಂಧವ್ಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷ ಅಮೆರಿಕವು ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 1,25,000 ವೀಸಾಗಳನ್ನು ನೀಡಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷವೊಂದರಲ್ಲೇ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ಅತಿದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಿ ಭಾರತೀಯ ವಿದ್ಯಾರ್ಥಿ ಸಮುದಾಯ ಹೊರಹೊಮ್ಮಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ಅಮೆರಿಕ ಉದ್ದೇಶಿಸಿದೆ. ಭಾರತವು 2023 ರಲ್ಲಿ ಸಿಯಾಟಲ್‌ನಲ್ಲಿ ದೂತಾವಾಸ ಕಚೇರಿ ತೆರೆಯುವುದನ್ನು ಅಮೆರಿಕ ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ರಾಯಭಾರ ಕಚೇರಿಯು ಬೆಂಗಳೂರಿನಲ್ಲಿ ಆರಂಭವಾಗಲು ಕಾರಣೀಕರ್ತರಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ. ಬೆಂಗಳೂರಿನಲ್ಲಿ ರಾಯಭಾರಿ ಕಚೇರಿಯ ಸ್ಥಾಪನೆಯ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದ್ದರು.
ಇದನ್ನೂ ಓದಿ: ಬೈಡನ್ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ವಜ್ರದ ಉಡುಗೊರೆ ಅಂತಿಂಥದ್ದಲ್ಲ, ಏನಿದರ ವಿಶೇಷ?
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿಯನ್ನು ಸ್ಥಾಪಿಸುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ಮತ್ತು ಕೇಂದ್ರ ವಿದೇಶಾಂಗ ಸಚಿವರಾದ ಜೈಶಂಕರ್ ಅವರಿಗೆ ಧನ್ಯವಾದಗಳು. ಸಾವಿರಾರು ಅಂತರಾಷ್ಟ್ರೀಯ ಕಂಪನಿಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮತ್ತು ಐಟಿ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿಗೆ ಇದು ಬೇಕೆಂಬುದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಇದರಿಂದ ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯವಾಗಲಿದೆ ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.
Thank PM Sri @narendramodi Ji and EAM Sri @DrSJaishankar for getting a US Consulate in Bengaluru.
As India’s fastest growing city and IT powerhouse with thousands of international companies, it was a long pending ask.
This will help lakhs of Kannadigas & our city. https://t.co/XlPB5DecUf
— Tejasvi Surya (@Tejasvi_Surya) June 22, 2023
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿಯನ್ನು ಸ್ಥಾಪಿಸಲು ಸೂರ್ಯ ಅವರು ವಿದೇಶಾಂಗ ಸಚಿವರಾದ ಜೈಶಂಕರ್ ಅವರ ಮೂಲಕ ಅಮೆರಿಕದ ವಿದೇಶಾಂಗ ಇಲಾಖೆಗೆ ಮಾರ್ಚ್ 24 ರಂದು ಮನವಿ ಮಾಡಿದ್ದರು. ಆಗ, ಜೈಶಂಕರ್ ಅವರು, ಮುಂದಿನ ಬಾರಿ ನಾನು ಆ್ಯಂಟನಿ ಬ್ಲಿಂಕನ್ ಅವರನ್ನು ಭೇಟಿಯಾದಾಗ, ನಿಮ್ಮ ಈ ಮನವಿಯನ್ನು, ನಿಮ್ಮಷ್ಟೇ ಬಲವಾಗಿ ಅವರ ಬಳಿ ಮಂಡಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Thu, 22 June 23