ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಚಾರಿ ಪೊಲೀಸರು ಸದಾ ಅರಿವು ಮೂಡಿಸುತ್ತಿರುತ್ತಾರೆ. ಅದರಲ್ಲೂ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಟ್ರಾಫಿಕ್ ರೂಲ್ಸ್ ಬಗ್ಗೆ ಜನಸಾಮಾನ್ಯರನ್ನು ಎಚ್ಚರಿಸುತ್ತಿರುತ್ತಾರೆ.. ಏನೇ ಅಪ್ಡೇಟ್ಸ್ ಇದ್ದರೂ ಕೊಡುತ್ತಾರೆ. ಅಲ್ಲಿ ಪ್ರಶ್ನೆ ಕೇಳುವ ಸಾರ್ವಜನಿಕರಿಗೂ ಉತ್ತರ ನೀಡುತ್ತಾರೆ. ಹಾಗೇ, ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸರು ನಿನ್ನೆ ವಾಹನಗಳ ನಂಬರ್ಪ್ಲೇಟ್ಗೆ ಸಂಬಂಧಪಟ್ಟ ಒಂದು ನಿಯಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಈ ನಿಯಮದ ಪ್ರಕಾರ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದೆ ಇದ್ದರೆ, ದಂಡ ಬೀಳುತ್ತದೆ ಎಂಬುದನ್ನೂ ತಿಳಿಸಿದ್ದಾರೆ.
ಕಾರಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸರು, ವಾಹನಗಳ ನಂಬರ್ ಪ್ಲೇಟ್ ಹಿಂಭಾಗ ಹಾಗೂ ಮುಂಭಾಗಗಳಲ್ಲಿ ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಪೊಲೀಸರು ಈಗ ಹೇಳಿದ ನಿಯಮದ ಪ್ರಕಾರ, ನಿಮ್ಮ ನಾಲ್ಕು ಚಕ್ರದ ವಾಹನದ ಮುಂಭಾಗದ ನಂಬರ್ ಪ್ಲೇಟ್ ಆಯತ ಆಕಾರದಲ್ಲಿ ಇದ್ದು, ಒಂದೇ ಸಾಲಿನಲ್ಲಿ ನಂಬರ್ ಇರಬೇಕು. ಹಾಗೇ ಹಿಂಭಾಗದ ನಂಬರ್ ಪ್ಲೇಟ್ ಚೌಕ ಆಕಾರದಲ್ಲಿದ್ದು, ಎರಡು ಸಾಲಿನಲ್ಲಿ ನಂಬರ್ ಇರಬೇಕು. ಇದೇ ಪ್ರಕಾರದಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು, ದಂಡ ತುಂಬುವುದನ್ನು ತಪ್ಪಿಸಿಕೊಳ್ಳಿ ಎಂದು ಬರೆದಿದ್ದಾರೆ. ಹಾಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳು ಕಡ್ಡಾಯ ಎಂದೂ ತಿಳಿಸಿದ್ದಾರೆ. ಇಷ್ಟು ದಿನ ಬಹುತೇಕ ನಾಲ್ಕು ಚಕ್ರದ ವಾಹನಗಳಿಗೆ ಎರಡೂ ಕಡೆಯಲ್ಲೂ ಒಂದೇ ಲೈನಿನಲ್ಲಿ, ಉದ್ದನೆಯ ನಂಬರ್ ಪ್ಲೇಟ್ ಇರುತ್ತಿತ್ತು. ಆದರೀಗ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸರು ಹೇಳಿರುವ ಪ್ರಕಾರ, ಹಿಂಬದಿಯ ನಂಬರ್ ಪ್ಲೇಟ್ ಚೌಕ ಆಕಾರದಲ್ಲಿಯೇ ಇರಬೇಕಿದೆ.
ಕನ್ನಡದಲ್ಲಿ ಇರಬಹುದಾ?
ಈ ಹಿಂದೆಯೇ ಹೊರತರಲಾದ ನಿಯಮದ ಪ್ರಕಾರ ಯಾವ ವಾಹನಗಳ ನಂಬರ್ ಪ್ಲೇಟ್ಗಳು ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಇರುವಂತಿಲ್ಲ. ಹಾಗೊಮ್ಮೆ ಇದ್ದರೂ ಜತೆಗೆ ಇಂಗ್ಲಿಷ್ ಅಕ್ಷರಗಳಲ್ಲೂ ನಮೂದಿತವಾಗಿರಲೇಬೇಕು. ಇಲ್ಲದೆ ಇದ್ದರೆ ದಂಡ ಬೀಳುವುದು ಗ್ಯಾರಂಟಿ. ಕಳೆದ ವರ್ಷ ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬನಿಗೆ ಇದೇ ಕಾರಣಕ್ಕೆ ಪೀಣ್ಯ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು. ಆ ಸವಾರ ಬೈಕ್ನ ನಂಬರ್ ಪ್ಲೇಟ್ನಲ್ಲಿ ಅಚ್ಚಕನ್ನಡದಲ್ಲಿ ಅಂಕಿಗಳನ್ನು ಬರೆಸಿಕೊಂಡಿದ್ದರು. ಕನ್ನಡದಲ್ಲಿ ನೋಂದಣಿ ಫಲಕ ಹೊಂದಿದ ಬೈಕ್ ಸವಾರನಿಗೆ ಫೈನ್ ಹಾಕಿದ್ದಕ್ಕೆ ವಿರೋಧವೂ ವ್ಯಕ್ತವಾಗಿತ್ತು.
ಇದೀಗ ಮತ್ತೆ ನಾಗರಿಕರೊಬ್ಬರು ಬೆಂಗಳೂರು ಟ್ರಾಫಿಕ್ ಪೊಲೀಸರ ಟ್ವೀಟ್ಗೆ ರಿಪ್ಲೈ ಮಾಡಿ, ಸಾರ್ವಜನಿಕರು ನೋಂದಣಿ ಫಲಕದ ಮೇಲೆ ಕನ್ನಡ ಅಕ್ಷರಗಳು, ಅಂಕಿಗಳನ್ನು ಬಳಸಬಹುದೇ? ಇದನ್ನು ಪ್ರಮಾಣಿತ ಎಂದು ಪರಿಗಣಿಸುತ್ತೀರಾ? ದಯವಿಟ್ಟು ಸ್ಪಷ್ಟಪಡಿಸಿ ಎಂದು ಹೇಳಿದ್ದಾರೆ.. ಹಾಗೇ ಇನ್ನೊಬ್ಬರು ಟ್ವೀಟ್ ಮಾಡಿ, ನಾವು ಕನ್ನಡ ಮತ್ತು ಇಂಗ್ಲಿಷ್ ಎರಡೂ ಅಕ್ಷರ, ಅಂಕಿಗಳನ್ನು ಬಳಸಬಹುದಾ ಎಂದು ಪ್ರಶ್ನಿಸಿದ್ದಾರೆ. ಇವರಿಬ್ಬರಿಗೂ ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್ ಪೊಲೀಸರು, ಬಳಸಬಹುದು ಎಂದಿದ್ದಾರೆ. ಅಂದರೆ ಇನ್ನು ಮುಂದೆ ಕನ್ನಡದಲ್ಲಿ ಮಾತ್ರ ಅಂಕಿ-ಅಕ್ಷರಗಳು ಇದ್ದರೂ ಮಾನ್ಯ ಮಾಡುತ್ತಾರಾ? ಅಥವಾ ಮೊದಲಿನಿಂತೆ ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿಸಿಕೊಂಡರೆ, ಅದರಲ್ಲಿ ಇಂಗ್ಲಿಷ್ ಅಕ್ಷರ-ಅಂಕಿಗಳನ್ನು ನಮೂದಿಸುವುದು ಕಡ್ಡಾಯವಾ ಎಂದು ಸ್ಪಷ್ಟವಾಗಿಲ್ಲ.
Use standard number plate to avoid fine.#BengluruCityTrafficPolice #BTP #trafficrules #BTPAwareness #FollowTrafficRules #Bengaluru pic.twitter.com/q0Bg8yRWtJ
— BengaluruTrafficPolice (@blrcitytraffic) March 24, 2021
Can the public use Kannada letters and numbers ? Is that considered standard or not? Pl clarify???@blrcitytraffic https://t.co/G5fS80mv62
— Lakshmisha Lakshman (@Lakkilakshman) March 24, 2021
Published On - 12:49 pm, Thu, 25 March 21