ಕಾರವಾರ, ಅ.23: ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ ಇಂದು ಡೆಂಗ್ಯೂಗೆ (Dengue) ಮತ್ತೊಬ್ಬರು ಬಲಿಯಾಗಿದ್ದು ಇಡೀ ಜಿಲ್ಲೆಯಲ್ಲಿ ಆತಂಕ ಆವರಿಸಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಎರಡನೇ ಬಲಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಮೀರಾನ್ ಸಾದಾ(77) ಎಂಬುವವರು ಡೆಂಗ್ಯೂ ಜ್ವರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Mangaluru Hospital) ಚಿಕಿತ್ಸೆ ಪಡೆಯುತ್ತಿದ್ದ ಮೀರಾನ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ.
ನಿನ್ನೆಯಷ್ಟೇ (ಅ.22) ಡೆಂಗ್ಯೂ ಜ್ವರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ ಎಂದು ವರದಿಯಾಗಿತ್ತು. ಇಂದು ಚಿಕತ್ಸೆ ಫಲಿಸದೆ ಮತ್ತೊಬ್ಬರು ಪ್ರಾಣ ಬಿಟ್ಟಿದ್ದಾರೆ. ನಿನ್ನೆ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24) ಎಂಬ ಹದಿಹರೆಯದ ಯುವಕ ಡೆಂಗ್ಯೂಗೆ ಪ್ರಾಣ ಕಳೆದುಕೊಂಡಿದ್ದ. ಮೃತ ಗೋವಿಂದ ಸಾಗರಶ್ರೀ ಬೋಟ್‌ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಒಂದು ವಾರದಿಂದ ಗೋವಿಂದನಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾನೆ.
ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಇಬ್ಬರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಸದ್ಯ ಅವರು ಸಹ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಟ್ಕಳ ಬಂದರಿನಲ್ಲಿ ಶುಚಿತ್ವ ಇಲ್ಲದ ಕಾರಣ ಹೆಚ್ಚು ಸೊಳ್ಳೆಗಳ ಉತ್ಪತ್ತಿಯಾಗುತಿದ್ದು, ಈ ಭಾಗದಲ್ಲಿ ಹಲವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಡೆಂಗ್ಯೂ ತಡೆಯಲು ಜಿಲ್ಲಾಡಳಿತ ಹರಸಾಹಸ; ವೈರಲ್ ಫಿವರ್ನಿಂದ ಜಿಲ್ಲಾಸ್ಪತ್ರೆ ಫುಲ್
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ. ಈ ರೋಗದ ಲಕ್ಷಣ ನಾಲ್ಕರಿಂದ ಏಳು ದಿನವರೆಗೆ ಕಂಡುಬರುತ್ತದೆ. ಸಾಮಾನ್ಯ ಜ್ವರ, ಸ್ನಾಯು ಮತ್ತು ಬೆನ್ನು ನೋವು ಕಂಡು ಬರುತ್ತದೆ. ತೀವ್ರತರ ರೋಗ ಹೊಂದಿರುವವರಲ್ಲಿ ಡೆಂಗ್ಯೂ ಹೆಮರಾಜಿಕ್ ಅಥವಾ ಆಘಾತ ಸಿಂಡ್ರೋಮ್ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಡೆಂಗ್ಯೂ ಪತ್ತೆಯ ಪರೀಕ್ಷೆ ಎನ್ಎಸ್1 ಅನ್ನು ಪಡೆಯಬಹುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ