ಪರಿಸರ ಸ್ನೇಹಿ ಕಡಲಾಮೆಗಳ ಸಂರಕ್ಷಣೆ: ಆಮೆ ಗೂಡು ಕುರಿತು ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ಸಹಾಯಧನ

| Updated By: ಸಾಧು ಶ್ರೀನಾಥ್​

Updated on: Feb 07, 2024 | 11:10 AM

ಈಗಾಗಲೇ ಕಾರವಾರ ವಿಭಾಗದ ದೇವಬಾಗ್ ವಿಭಾಗದಲ್ಲಿ ಸುಮಾರು 26 ಕಡೆ ಕಡಲಾಮೆಗಳು ಮೊಟ್ಟೆಯನ್ನ ಇಟ್ಟಿದ್ದು 1,500ಕ್ಕೂ ಅಧಿಕ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸಲಾಗಿದೆ. ಅಲ್ಲದೇ ಆಮೆಯ ಗೂಡುಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು ಇದರಿಂದ ಸಾರ್ವಜನಿಕರಿಂದಲೂ ಇದೀಗ ಕಡಲಾಮೆ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ.

ಪರಿಸರ ಸ್ನೇಹಿ ಕಡಲಾಮೆಗಳ ಸಂರಕ್ಷಣೆ: ಆಮೆ ಗೂಡು ಕುರಿತು ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ಸಹಾಯಧನ
ಸಂರಕ್ಷಣೆಗಾಗಿ ಆಮೆ ಗೂಡು ಕುರಿತು ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ಸಹಾಯಧನ
Follow us on

ಕಡಲಾಮೆಗಳು (coral reefs) ಅತ್ಯಂತ ಪರಿಸರ ಸ್ನೇಹಿ ಜೀವಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಅವು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರಿವೆ. ಅವುಗಳ ಸಂತತಿಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಮುಂದಾಗಿದ್ದು, ಆಮೆಯ (turtle) ಮೊಟ್ಟೆಗಳನ್ನ ಸಂರಕ್ಷಿಸುವ (Conservation) ಕೆಲಸವನ್ನ ಆರಂಭಿಸಿದೆ. ಹೀಗೆ ಸಂರಕ್ಷಿಸಲಾಗಿದ್ದ ಮೊಟ್ಟೆಗಳು ಇದೀಗ ಮರಿಗಳಾಗಿ ಹೊರಬಂದಿದ್ದು ಅವುಗಳನ್ನ ನಿನ್ನೆ ಮಂಗಳವಾರ ಸಮುದ್ರಕ್ಕೆ ಸೇರಿಸುವ ಕಾರ್ಯವನ್ನ ಮಾಡಲಾಯಿತು. ಪುಟ್ಟ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಸಮುದ್ರ ಸೇರುತ್ತಿರುವ ಆಮೆಯ ಮರಿಗಳು. ಈ ಪುಟಾಣಿ ಕಡಲಜೀವಿಗಳನ್ನ ನೋಡೋದಕ್ಕೆ ಕುತೂಹಲದಿಂದ ಸುತ್ತುವರೆದಿರುವ ಜನ. ಅರೇ ಇಷ್ಟೊಂದು ಮುದ್ದಾದ ಆಮೆಯ ಮರಿಗಳು ಕಂಡುಬಂದಿದ್ದು ಎಲ್ಲಿ ಅಂತೀರಾ. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ (Karwar) ತಾಲ್ಲೂಕಿನ ದೇವಬಾಗ್ ಕಡಲತೀರದಲ್ಲಿ.

ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ವತಿಯಿಂದ ದೇವಬಾಗ್ ಕಡಲತೀರದಲ್ಲಿ ಆಲಿವ್ ರಿಡ್ಲಿ ಪ್ರಭೇದದ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸಿಡಲಾಗಿದ್ದು ಆ ಮೊಟ್ಟೆಗಳು ಮರಿಗಳಾಗಿ ಹೊರಬಂದಿವೆ. ಈ ನಿಟ್ಟಿನಲ್ಲಿ ಸಂರಕ್ಷಿಸಲ್ಪಟ್ಟ ಆಮೆಯ ಮರಿಗಳನ್ನ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸುವ ಕೆಲಸವನ್ನ ಅರಣ್ಯ ಇಲಾಖೆ ಹಾಗೂ ಕಡಲ ತೀರ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮಾಡಿದ್ದಾರೆ.

ದೇವಬಾಗ್ ಕಡಲತೀರದಲ್ಲಿ ಕಳೆದ ಡಿಸೆಂಬರ್ ನಲ್ಲಿ 100 ಕ್ಕೂ ಹೆಚ್ಚು ಆಲಿವ್ ರಿಡ್ಲಿ ಕಡಲಾಮೆಗಳು ಒಟ್ಟು 26 ಕಡೆ ಮೊಟ್ಟೆಗಳನ್ನ ಇಟ್ಟಿದ್ದು ಎಲ್ಲವನ್ನೂ ಅರಣ್ಯ ಇಲಾಖೆ ಗೇಜ್ ಗಳನ್ನ ಹಾಕಿ ಸಂರಕ್ಷಿಸಿ ಇಟ್ಟಿತ್ತು. ನಿನ್ನೆ ಸುಮಾರು 70 ಆಮೆಮರಿಗಳು ಮೊಟ್ಟೆ ಒಡೆದು ಹೊರ ಬಂದಿದ್ದು ಅವುಗಳನ್ನ ಸಮುದ್ರಕ್ಕೆ ಬಿಡಲಾಯಿತು.

ಇನ್ನು ಕಡಲಾಮೆಗಳಲ್ಲಿ 7 ಪ್ರಭೇದಗಳಿದ್ದು ರಾಜ್ಯದ ಕಡಲ ತೀರದಲ್ಲಿ 3 ಬಗೆಯ ಕಡಲಾಮೆಗಳನ್ನ ಗುರುತಿಸಲಾಗಿದೆ. ಅವುಗಳಲ್ಲಿ ಆಲಿವ್ ರಿಡ್ಲೇ ಕಡಲಾಮೆ ಮಾತ್ರ ಕಡಲತೀರದಲ್ಲಿ ಮೊಟ್ಟೆ ಇಡುವ ಪ್ರಭೇದವಾಗಿದೆ. ಕಡಲಾಮೆಗಳ ಸಂತತಿ ಅಳಿವಿನ ಅಂಚಿನಲ್ಲಿರುವ ಕಾರಣದಿಂದ ಜಿಲ್ಲೆಯ ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಕೋಸ್ಟಲ್ ಮರೈನ್ ಎಂಡ್ ಇಕೋ ಸಿಸ್ಟಮ್ ಎನ್ನುವ ವಿಭಾಗವನ್ನ ರೂಪಿಸಿದೆ.

ಇದರಡಿ ಈಗಾಗಲೇ ಕಾರವಾರ ವಿಭಾಗದ ದೇವಬಾಗ್ ವಿಭಾಗದಲ್ಲಿ ಸುಮಾರು 26 ಕಡೆ ಕಡಲಾಮೆಗಳು ಮೊಟ್ಟೆಯನ್ನ ಇಟ್ಟಿದ್ದು 1,500ಕ್ಕೂ ಅಧಿಕ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸಲಾಗಿದೆ. ಅಲ್ಲದೇ ಆಮೆಯ ಗೂಡುಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು ಇದರಿಂದ ಸಾರ್ವಜನಿಕರಿಂದಲೂ ಇದೀಗ ಕಡಲಾಮೆ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ.

ಇನ್ನು ಕಡಲಾಮೆಗಳು ಕಡಲ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ರಕ್ಷಣೆ ಅತ್ಯಗತ್ಯವಾಗಿದೆ. ಹೀಗೆ ಸಂರಕ್ಷಿಸಲ್ಪಟ್ಟ ಆಮೆಯ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನ ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಸಮುದ್ರಕ್ಕೆ ಬಿಟ್ಟಿದ್ದರಿಂದ ಹಲವು ಅಧಿಕಾರಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹ ಆಗಮಿಸಿದ್ದು ಆಮೆಯ ಮರಿಗಳು ಸಮುದ್ರದತ್ತ ಹೆಜ್ಜೆ ಹಾಕುವುದನ್ನ ನೋಡಿ ಸಂತಸಪಟ್ಟರು.

ಇದನ್ನೂ ಓದಿ: Rose Day 2024 Date: ರೋಸ್ ಡೇ ಯಾವಾಗ?; ಅದರ ಇತಿಹಾಸ, ಮಹತ್ವದ ಬಗ್ಗೆಯೂ ನಿಮಗೆ ಗೊತ್ತಿರಲಿ

ಕಳೆದ ವರ್ಷ ಕರಾವಳಿ ಭಾಗದಲ್ಲಿ ಒಂದೂವರೆ ಲಕ್ಷ ಆಮೆಗಳನ್ನು ರಕ್ಷಿಸಿ ಬಿಡಲಾಗಿತ್ತು. ಇದೀಗ ಹಲವು ಕಡೆ ಆಮೆ ಮೊಟ್ಟೆಗಳು ಪತ್ತೆಯಾಗುತಿದ್ದು ಅಳಿವಿನ ಅಂಚಿನಲ್ಲಿರುವ ಕಡಲಾಮೆ ಸಂತತಿಯನ್ನ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಾರ್ವಜನಿಕರೂ ಸಹ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ ಕಡಲಾಮೆ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗೋದ್ರಲ್ಲಿ ಅನುಮಾನವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ