ಉತ್ತರ ಕನ್ನಡ: ಸೇತುವೆ ಇಲ್ಲದೆ ಸಂಪರ್ಕ ಕಡಿತ; ಗಾಯಗೊಂಡ ರೈತನನ್ನು 15 ಕಿಮೀ ಹೊತ್ತುಕೊಂಡೇ ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 27, 2023 | 10:18 PM

ಭಾರತ ಸ್ವಾತಂತ್ರ ಹೊಂದಿ 76 ವರ್ಷಗಳು ಕಳೆದರೂ ಇನ್ನೂ ಸಹ ರಸ್ತೆ ಸಂಪರ್ಕವಿಲ್ಲದ ಗ್ರಾಮಗಳು ಇವೆ ಅಂದರೆ, ಅಚ್ಚರಿಯಾಗದೇ ಇರೋದಿಲ್ಲ. ಹೀಗೆ ರಸ್ತೆ ಸಮಸ್ಯೆಯಿದ್ದ ಗ್ರಾಮವೊಂದರಿಂದ ಗಾಯಾಳು ಓರ್ವನನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.

ಉತ್ತರ ಕನ್ನಡ: ಸೇತುವೆ ಇಲ್ಲದೆ ಸಂಪರ್ಕ ಕಡಿತ; ಗಾಯಗೊಂಡ ರೈತನನ್ನು 15 ಕಿಮೀ ಹೊತ್ತುಕೊಂಡೇ ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು
ಗಾಯಗೊಂಡ ರೈತ
Follow us on

ಉತ್ತರ ಕನ್ನಡ, ಆ.27: ಹೀಗೆ ಆಸ್ಪತ್ರೆಯ ಹಾಸಿಗೆಯಲ್ಲಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಮಲಗಿರುವ ವ್ಯಕ್ತಿ ಉಮೇಶ ಗೌಡ ಎಂಬುವವರು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕೆಂದಗಿ ಗ್ರಾಮದ ಇವರು ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕತ್ತಿ ಜಾರಿದ ಪರಿಣಾಮ ಕಾಲಿಗೆ ಗಂಭೀರ ಗಾಯಗೊಂಡಿದ್ದರು. ಆದರೆ, ಭಾರೀ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ನಾಲ್ಕು ಹಳ್ಳಗಳಿಂದಾಗಿ ಜಲದಿಗ್ಭಂದನ ಉಂಟಾಗಿದ್ದು, ಆಸ್ಪತ್ರೆಗೆ ತೆರಳಲಾಗದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ನಾಲ್ಕೈದು ದಿನಗಳ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಈ ವೇಳೆ ಗ್ರಾಮಸ್ಥರು ಒಟ್ಟಾಗಿ ಜೋಳಿಗೆ ಮೂಲಕ ಗಾಯಗೊಂಡಿದ್ದ ಉಮೇಶ್​​ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸುಮಾರು 15 ಕಿಮೀ ದೂರ ಕಾಡಿನ ಹಾದಿಯಲ್ಲಿ ನಡೆದುಕೊಂಡು ಕರೆತಂದಿದ್ದಾರೆ.

ಬಳಿಕ ಹಟ್ಟಿಕೇರಿ ಗ್ರಾಮದಿಂದ ವಾಹನದ ಮೂಲಕ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು ರಸ್ತೆಯಿಲ್ಲದ ಪರಿಣಾಮ ಗಾಯಗೊಂಡು ವಾರದ ಬಳಿಕ ಆಸ್ಪತ್ರೆಗೆ ಸೇರುವಂತಾಗಿದೆ. ಇನ್ನು ಕೆಂದಗಿ ಗ್ರಾಮವು ದಟ್ಟ ಕಾಡಿನ ನಡುವೆ ಇದ್ದು, ಏನೇ ಅಗತ್ಯ ವಸ್ತುಗಳು ಬೇಕಿದ್ದರೂ ಸಹ 18 ಕಿಮೀ ದೂರದ ಹಟ್ಟಿಕೇರಿ ಗ್ರಾಮಕ್ಕೆ ಆಗಮಿಸಬೇಕು. ಗ್ರಾಮಕ್ಕೆ ತೆರಳಬೇಕಂದ್ರೆ ಸೂಕ್ತ ರಸ್ತೆ ಇಲ್ಲವಾಗಿದ್ದು, ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನು ದಾಟಿಯೇ ಬರಬೇಕಾದ ಪರಿಸ್ಥಿತಿಯಿದೆ.

ಇದನ್ನೂ ಓದಿ:ಕಾರವಾರಕ್ಕೆ ಬಂತು ಹೊಸ ಆಕರ್ಷಣೆ​! ಪ್ರವಾಸಿಗರು ಸುರಂಗದ ಮೂಲಕ ಸಂಚರಿಸಬಹುದು, ಮೇಲಿಂದ ಠಾಗೋರ್ ಕಡಲ ತೀರ ನೋಡಿ ಆನಂದಿಸಬಹುದು!

ಮಳೆಗಾಲದಲ್ಲಂತೂ ಗ್ರಾಮಸ್ಥರ ಪಾಡು ಹೇಳತೀರದಾಗಿದ್ದು, ಹಳ್ಳಗಳು ತುಂಬಿ ಹರಿಯುವ ಸಂದರ್ಭದಲ್ಲಿ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ. ಹೀಗಾಗಿಯೇ ಗ್ರಾಮದಲ್ಲಿನ ವಿದ್ಯಾರ್ಥಿಗಳು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶಾಲೆಗೆ ತೆರಳಲಾಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮದ ಹಳ್ಳಗಳಿಗೆ ಸೇತುವೆ ನಿರ್ಮಿಸಿಕೊಟ್ಟಲ್ಲಿ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.

ಒಟ್ಟಾರೆ ದೇಶ ಚಂದ್ರನ ಮೇಲೆ ತಲುಪಿದರೂ ಸಹ ಇದುವರೆಗೂ ರಸ್ತೆ ಸಂಪರ್ಕವಿಲ್ಲದ ಕುಗ್ರಾಮಗಳಲ್ಲಿ ಜನರು ಬದುಕುವಂತಾಗಿರೋದು ನಿಜಕ್ಕೂ ದುರಂತವೇ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಗ್ರಾಮಕ್ಕೆ ಕನಿಷ್ಠ ಸಂಪರ್ಕ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ