ಬೇಲೆಕೇರಿ ಬಂದರಿನಲ್ಲಿರುವ ಗ್ರಾನೈಟ್​ಗೆ ವಾರಸುದಾರರೇ ಇಲ್ಲ! ಹರಾಜಿನ ಮೂಲಕ ಖಜಾನೆ ತುಂಬಲು ಸರ್ಕಾರದ ಪ್ಲ್ಯಾನ್

| Updated By: ಗಣಪತಿ ಶರ್ಮ

Updated on: Nov 06, 2024 | 9:56 AM

ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಇನ್ನುಳಿದ ಏಳು ಜನರು ಜೈಲು ಪಾಲಾಗುತ್ತಿರುವ ಬೆನ್ನಲ್ಲೇ, ಬೇಲೆಕೇರಿ ಬಂದರು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಆಕ್ರಮ ಅದಿರು ಸಾಗಾಟ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆಯೇ ಬೇಲೆಕೇರಿ ಬಂದರಿನಲ್ಲಿರುವ ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಗ್ರಾನೈಟ್​ಗೆ ವಾರಸುದಾರರೇ ಇಲ್ಲವಾಗಿದ್ದಾರೆ. ಸದ್ಯ ಗಣಿ ಇಲಾಖೆಯೇ ಗ್ರಾನೈಟ್ ವಶಪಡಿಸಿಕೊಂಡು ಹರಾಜು ಹಾಕಲು ಮುಂದಾಗಿದೆ.

ಬೇಲೆಕೇರಿ ಬಂದರಿನಲ್ಲಿರುವ ಗ್ರಾನೈಟ್​ಗೆ ವಾರಸುದಾರರೇ ಇಲ್ಲ! ಹರಾಜಿನ ಮೂಲಕ ಖಜಾನೆ ತುಂಬಲು ಸರ್ಕಾರದ ಪ್ಲ್ಯಾನ್
ಬೇಲೆಕೇರಿ ಬಂದರಿನಲ್ಲಿರುವ ಗ್ರಾನೈಟ್​ಗೆ ವಾರಸುದಾರರೇ ಇಲ್ಲ!
Follow us on

ಕಾರವಾರ, ನವೆಂಬರ್ 6: ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಕಬ್ಬಿಣದ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ ಪ್ರಕಟವಾದ ಬೆನ್ನಲ್ಲೇ, ಬೇಲೆಕೇರಿ ಬಂದರಿನ ಮೂಲಕ ಈ ಹಿಂದೆ ಆಕ್ರಮ ಸಾಗಾಟ ಮಾಡುತ್ತಿದ್ದ ದಂಧೆಕೋರರಿಗೆ ಭಯ ಉಂಟಾಗಿದೆ. ಕಾರವಾರದಲ್ಲಿ ಅದಿರಿನ ಜೊತೆ ಅಮೂಲ್ಯವಾದ ಗ್ರಾನೈಟ್​​ಗಳು ಚೈನಾ, ತೈವಾನ್, ಇಸ್ರೇಲ್ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತಿದ್ದವು. ಹೀಗೆ ರಫ್ತು ಮಾಡಲೆಂದು ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ ವಿಧದ ವಿವಿಧ ಮಾದರಿಯ ಕೋಟ್ಯಂತರ ರೂಪಾಯಿ ಬೆಲೆಯ ಗ್ರಾನೈಟ್ ಕಲ್ಲುಗಳು ಇದೀಗ ಅನಾಥವಾಗಿ ಬಿದ್ದಿವೆ. ಇದು ತಮ್ಮದೆಂದು ಹೇಳಿಕೊಳ್ಳಲು ವಾರಸುದಾರರು ಮುಂದೆ ಬರುತ್ತಿಲ್ಲ. ಸುಮಾರು 10 ಕ್ಕೂ ಹೆಚ್ಚು ವರ್ಷಗಳ ಕಾಲ ಬಂದರಿನಲ್ಲಿ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅದಿರಿನ ಜತೆ ರಫ್ತಾಗುತ್ತಿದ್ದ ಗ್ರಾನೈಟ್

ಸುಮಾರು 20 ವರ್ಷದ ಹಿಂದೆ ಹಲವು ಕಂಪನಿಗಳು ಗ್ರಾನೈಟ್​​ಗಳನ್ನು ಅದಿರಿನ ಜೊತೆಯಲ್ಲಿ ವಿದೇಶಕ್ಕೆ ರಫ್ತು ಮಾಡುತ್ತಿದ್ದವು. ಇದಕ್ಕಾಗಿ ಕಾರವಾರ ಬಂದರಿನ ಜಾಗವನ್ನು ಕೂಡ ಬಂದರು ಇಲಾಖೆಯಿಂದ ಬಾಡಿಗೆ ಪಡೆಯಲಾಗಿತ್ತು. ಎಲ್ಲಿ ಅಕ್ರಮ ಅದಿರು ಪ್ರಕರಣ ಮುನ್ನೆಲೆಗೆ ಬಂದಿತೋ ಗ್ರಾನೈಟ್ ಉದ್ಯಮಕ್ಕೂ ಇದರ ಬಿಸಿ ತಟ್ಟಿತ್ತು. ಹೀಗಾಗಿ ಕಾರವಾರದ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 820 ಗ್ರಾನೈಟ್ ಕಲ್ಲುಗಳು ಬಂದರಿನಲ್ಲೇ ಉಳಿದಿದ್ದವು. ಇದರ ಜೊತೆ ಬಂದರು ಇಲಾಖೆಗೆ ಪಾವತಿ ಮಾಡಬೇಕಾದ ಬಾಡಿಗೆ ಸಹ ಪಾವತಿ ಮಾಡದೇ ಕಂಪನಿಗಳು ದೂರವಾಗಿದ್ದವು. ಇನ್ನು ಜಾಗದ ಕೊರತೆಯಿಂದ ಇಲಾಖೆ ಈ ಹಿಂದೆ ಸಂಗ್ರಹಿಸಿದ್ದ ಅದಿರನ್ನು ಕೋರ್ಟ್ ಆದೇಶದ ಪ್ರಕಾರ ಹರಾಜು ಹಾಕಲಾಗಿತ್ತು.

ಅನಾಥವಾದ ಗ್ರ್ಯಾನೈಟ್​ಗಳು!

20 ವರ್ಷಗಳು ಕಳೆದಿದ್ದರಿಂದ ಎಕರೆಗಟ್ಟಲೇ ಜಾಗದಲ್ಲಿ ತುಂಬಿದ್ದ ಈ ಗ್ರಾನೈಟ್ ಅನ್ನು ಸಹ ಖಾಲಿ ಮಾಡಬೇಕಿದ್ದು ಇದರ ಮಾಲೀಕರು ಯಾರ್ಯಾರು ಇದ್ದಾರೆ ಎಂಬ ಬಗ್ಗೆ ದಾಖಲೆ ಕಲೆಹಾಕಿದಾಗ ಗಣೇಶ್ ಷಿಪಿಂಗ್ ಕಂಪನಿಯ ಹೆಸರು ಮಾತ್ರ ಸಿಕ್ಕಿದೆ. ಉಳಿದ ಕಂಪನಿಗಳ ದಾಖಲೆಗಳೇ ಇರಲಿಲ್ಲ. ಹೀಗಾಗಿ ಬಂದರು ಇಲಾಖೆ ಸಹ ತೆರವು ಗೊಳಿಸಲು ಈ ಕಂಪನಿಗೆ ನೋಟಿಸ್ ನೀಡಿತ್ತು. ಆದರೇ ಈ ಕಂಪನಿ ಸಹ ಈ ಗ್ರಾನೈಟ್ ನಮ್ಮದು ಎಂದು ಕ್ಲೈಮ್ ಮಾಡಲಿಲ್ಲ .ಹೀಗಾಗಿ ಇವುಗಳ ಮೌಲ್ಯ ಸಾಂದ್ರತೆ ಮಾಪನ ಮಾಡಿ ಹರಾಜು ಹಾಕುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿದೆ. ಯಾರೂ ತಮ್ಮದೆಂದು ಹೇಳದ ಹಿನ್ನಲೆಯಲ್ಲಿ ಒಟ್ಟು 820 ಗ್ರಾನೈಟ್​ಗಳ ಅಳತೆ ಸಾಂದ್ರತೆಯ ಪರೀಕ್ಷೆ ಮಾಡಿದ್ದು ಕೋಟಿಗಟ್ಟಲೇ ಬೆಲೆ ಬಾಳುವ ಈ ಗ್ರಾನೈಟ್ ನನ್ನು ಶೀಘ್ರದಲ್ಲೇ ಹರಾಜು ಹಾಕಲು ಇಲಾಖೆ ಮುಂದಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕಿ ಆಶಾ ತಿಳಿಸಿದ್ದಾರೆ.

ಇದನ್ನೂ ಓದಿ: ಸತೀಶ್ ಸೈಲ್​ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ

ಕೋಟಿಗಟ್ಟಲೆ ಬೆಲೆ ಬಾಳುವ ಈ ಗ್ರಾನೈಟ್​​ಗಳ ಮೂಲ ವಾರಸುದಾರರು ಯಾರು ಎಂಬ ಪ್ರಶ್ನೆ ಎದ್ದಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಂದರಿನಲ್ಲಿ ಗ್ರಾನೈಟ್ ಸಂಗ್ರಹಿಸಿಟ್ಟು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಲಾಗುತಿತ್ತಾ ಎಂಬ ಅನುಮಾನ ಮೂಡಿದೆ. ತನಿಖೆಯಿಂದ ನಿಜಾಂಶ ಹೊರಬರಬೇಕಿದೆ. ಒಟ್ಟಿನಲ್ಲಿ ಇದೀಗ ವಾರಸುದಾರರು, ದಾಖಲೆ ಇಲ್ಲದ ಕೋಟಿ ಮೌಲ್ಯದ ಗ್ರಾನೈಟ್​​ಗಳು ಹರಾಜು ಪ್ರಕ್ರಿಯೆ ಮೂಲಕ ಸರ್ಕಾರದ ಖಜಾನೆಗೆ ಹಣ ತುಂಬಲಿವೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ