ಉತ್ತರ ಕನ್ನಡ, ಡಿ.24: ಜಿಲ್ಲೆಯ ಕಾರವಾರ(Karwar) ತಾಲ್ಲೂಕಿನ ಅಮದಳ್ಳಿ ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನ ಪ್ರತಿವರ್ಷ ನಡೆಸಲಾಗುತ್ತದೆ. ಹಾಲಕ್ಕಿ ಬುಡಕಟ್ಟು ಸಮಾಜದ(Halakki Community)ವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನ ದಿಂಡಿ ಜಾತ್ರೆಯೆಂದೇ ಕರೆಯುತ್ತಾರೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಇಲ್ಲಿನ ವಿಶೇಷ. ಬ್ರಿಟೀಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನ ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟೀಷರ ದಬ್ಬಾಳಿಕೆಯನ್ನ ತಿಳಿಸಲು ಇಂಗ್ಲೀಷ್ ಭಾಷೆ ಬರದ ಹಿನ್ನಲೆ ಹಾಲಕ್ಕಿ ಸಮುದಾಯವರು ‘ಹಗರಣ ಉತ್ಸವ’ದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟೀಷರಿಗೆ ತಿಳಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು, ಪ್ರತಿವರ್ಷ ದಿಂಡಿ ಉತ್ಸವದಲ್ಲಿ ಆಕರ್ಷಣೆ ಉಂಟುಮಾಡುತ್ತವೆ.
ಬ್ರೀಟಿಷ್ ಕಾಲದಿಂದಲೂ ಹಾಲಕ್ಕಿ ಸಮುದಾಯದವರಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಾಲಕ್ಕಿ ಹಗರಣವನ್ನು ಇಂದಿಗೂ ಚಾಚು ತಪ್ಪದೆ ಆಚರಣೆ ಮಾಡುತ್ತಿದ್ದಾರೆ. ಇನ್ನು ಕಾಡು ಜನರ ವೇಭೂಷಣದಲ್ಲಿ ಬಂದ ಜನರು ನೆರೆದವರನ್ನು ರಂಜಿಸುವ ಪ್ರಯತ್ನ ನಡೆಸಿದರು. ಇದಲ್ಲದೆ ಸಿಂಹ, ಬಾವಲಿ, ವಿವಿಧ ಬೃಹತ್ ಪ್ರಾಣಿಗಳ ಟ್ಯಾಬೊ ಜನರ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ ಯಕ್ಷಗಾನ, ಅಯ್ಯಪ್ಪಸ್ವಾಮಿ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನ ಮಾಡಲಾಯಿತು.
ಇದನ್ನೂ ಓದಿ:ಮುಳ್ಳಿನ ರಾಶಿ ಮೇಲೆ ಬಿದ್ದು ಒದ್ದಾಡೋ ಗ್ರಾಮದ ಜನರು; ವಿಶಿಷ್ಟ ಮುಳ್ಳಿನ ಜಾತ್ರೆಯ ಝಲಕ್ ಇಲ್ಲಿದೆ
ಈ ಹಿಂದೆ ಬ್ರೀಟಿಷರ ಕ್ರೌರ್ಯ, ದಬ್ಬಾಳಿಕೆಯನ್ನು ವ್ಯಕ್ತಪಡಿಸಲು ಭಾಷೆ ಬಾರದ ಹಾಲಕ್ಕಿ ಸಮುದಾಯದವರು, ಈ ರಿತಿ ಅಣಕು ಪ್ರದರ್ಶನಗಳ ಮೂಲಕ ಖಂಡಿಸಿ, ಆಂಗ್ಲರ ಕಿವಿ ಹಿಂಡುತ್ತಿದ್ದರು. ಅಂದಿನಿಂದಲೂ ಹಾಲಕ್ಕಿ ಸಮುದಾಯದವರು ಹಗರಣವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.ಇದು ಕೇವಲ ಒಂದು ಗಂಟೆ ಪ್ರದರ್ಶನ ಎಂದು ಕಂಡರೂ, ಈ ಪ್ರದರ್ಶನದ ಹಿಂದೆ ಯುವಕರು ತಿಂಗಳಿಗೂ ಹೆಚ್ಚು ಕಾಲ ಸಮಯವನ್ನು ಈ ಮಾದರಿಗಳ ತಯಾರಿಕೆಗೆ ಬಳಸುತ್ತಾರೆ. ಒಂದು ಮಾದರಿಯ ಪ್ರಾಣಿ ತಯಾರಿಸಲು 25-35 ಸಾವಿರ ಖರ್ಚಾಗುತ್ತದೆ. ಆದರೆ, ಇದನ್ನು ನಾವು ಯಾರ ಬಳಿಯೂ ಬೇಡುವುದಿಲ್ಲ. ಸರ್ಕಾರ ಇಂತಹ ಜನಪದ ಉತ್ಸವವನ್ನು ಪ್ರೋತ್ಸಾಹಿಸಬೇಕು. ಅಂದಾಗ ಇಂತಹ ಪ್ರದರ್ಶನಗಳಿಗೆ ಇನ್ನಷ್ಟು ಉತ್ಸಾಹ ದೊರೆಯುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ವಿವಿಧ ಬಗ್ಗೆ ಅಣುಕು ಪ್ರದರ್ಶನವನ್ನ ಪ್ರದರ್ಶಿಸುವ ಮೂಲಕ ಅಮದಳ್ಳಿ ಗ್ರಾಮದಲ್ಲಿ ನಡೆಯುವ ದಿಂಡಿ ಜಾತ್ರೆ ವಿಶೇಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಂದಿಗೂ ತಮ್ಮ ಸಂಪ್ರದಾಯವನ್ನ ಉಳಿಸಲು ಹಾಲಕ್ಕಿ ಸಮುದಾಯವರು ಮಾಡುತ್ತಿರುವ ಈ ಹಗರಣ ಉತ್ಸವ ನಿಜಕ್ಕೂ ಶ್ಲಾಘನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ