ಮುನ್ನೆಲೆಗೆ ಬಂದ ಧರ್ಮ ದಂಗಲ್: ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

ನೂರು ವರ್ಷಗಳಿಗೂ ಅಧಿಕ ಕಾಲದಿಂದ ನಡೆದುಕೊಂಡು ಬಂದಿರುವ ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆ ಮಕರ ಸಂಕ್ರಮಣ ಕಾಲದಲ್ಲಿ ನಡೆಯುತ್ತದೆ. ಇದೇ ಹೊತ್ತಲ್ಲಿ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

ಮುನ್ನೆಲೆಗೆ ಬಂದ ಧರ್ಮ ದಂಗಲ್: ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ
ಸಿದ್ದೇಶ್ವರ ಜಾತ್ರೆ ಸಂಗ್ರಹ ಚಿತ್ರ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಆಯೇಷಾ ಬಾನು

Updated on: Dec 19, 2023 | 10:15 AM

ವಿಜಯಪುರ, ಡಿ.19: ಹಿಜಾಬ್ (Hijab) ವಿಚಾರ ಬಳಿಕ ಹಲಾಲ್, ಜಟಕಾ ಕಟ್ ಸೇರಿದಂತೆ ರಾಜ್ಯದಲ್ಲಿ ಧರ್ಮ ದಂಗಲ್ ಶುರುವಾಗಿತ್ತು. ಇದೀಗ ವಿಜಯಪುರ ನಗರದಲ್ಲಿ ಧರ್ಮ ದಂಗಲ್ (Dharma Dangal) ವಿಚಾರ ಮತ್ತೇ ಮುನ್ನಲೆಗೆ ಬಂದಿದೆ. ಸಂಕ್ರಮಣ ಸಮಯದಲ್ಲಿ ನಡೆಯುವ ಶ್ರೀ ಸಿದ್ದೇಶ್ವರ ಜಾತ್ರೆಗೂ (Siddeshwara Jatre) ಮುನ್ನ ಧರ್ಮ ದಂಗಲ್ ವಿಚಾರ ಚರ್ಚೆಗೆ ಬಂದಿದೆ.‌ ಮುಂಬರುವ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಹಿಂದೂಪರ ಸಂಘಟನೆಗಳಿಂದ ಕೇಳಿ ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಹಿಜಾಬ್ ವಿಚಾರ ಭಾರಿ ಧರ್ಮ ದಂಗಲ್​ಗೆ ಕಾರಣವಾಗಿತ್ತು. ಹಿಂದೂಗಳ ದೇವಸ್ಥಾನದ ಆವರಣ, ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ನಿರ್ಬಂಧದ ಕೂಗು ಹೇಳಿಬಂದಿತ್ತು.‌ ಈಗ ಮತ್ತೇ ವಿಜಯಪುರ ಜಿಲ್ಲೆಯಲ್ಲಿ ಈ ಕೂಗು ಕೇಳಿ ಬಂದಿದೆ. ನೂರು ವರ್ಷಗಳಿಗೂ ಅಧಿಕ ಕಾಲದಿಂದ ನಡೆದುಕೊಂಡು ಬಂದಿರುವ ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆ ಮಕರ ಸಂಕ್ರಮಣ ಕಾಲದಲ್ಲಿ ನಡೆಯುತ್ತದೆ. 2024ರ ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯೋ ಸಿದ್ದೇಶ್ವರ ಜಾತ್ರೆಗೆ ಸಿದ್ದತೆಗಳು ಆರಂಭವಾಗಿವೆ. ಇದೇ ಹೊತ್ತಲ್ಲಿ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

ನಗರದ ಸಿದ್ದೇಶ್ವರ ದೇವಸ್ಥಾನ ಎದುರು‌ ಜಮಾಯಿಸಿ ಈ ಬಾರಿಯ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದ್ದಾರೆ. ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಸಿದ್ದೇಶ್ವರ ಸಂಸ್ಥೆಯ ‌ನೇತೃತ್ವದಲ್ಲಿ ನಡೆಯುತ್ತದೆ. ಮತ್ತೊಂದೆಡೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಎಲ್ಲಾ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸುತ್ತೇವೆ. ಅವರೂ ಸಹ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆಂಬ ಭರವಸೆ ಇದೆ ಎಂದು ಶ್ರೀರಾಮ ಸೇನೆ ಹಾಗೂ ಇತರೆ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧರ್ಮ ದಂಗಲ್​; ಅನ್ಯಧರ್ಮಿಯರ ವ್ಯಾಪಾರ ನಿಷೇಧಕ್ಕೆ ಆಗ್ರಹಿಸಿದ ಹಿಂದೂ ಸಂಘಟನೆಗಳು

ಇತ್ತೀಚಿಗೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ನಡೆಯುವ ಹಿಂದೂ ಜಾತ್ರೆ ಉತ್ಸವಗಳಲ್ಲಿ ಹಿಂದೂ ವ್ಯಾಪಾರಿಗಳನ್ನು ಹೊರತು ಪಡಿಸಿ ಅನ್ಯ ಕೋಮಿನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಿಲ್ಲ. ಅದೇ ರೀತಿ ನಗರದಲ್ಲಿ ನಡೆಯುವ ಶ್ರೀಸಿದ್ಧೇಶ್ವರ ಸಂಕ್ರಮಣ ಜಾತ್ರೆಯಲ್ಲಿಯೂ ಕೂಡ ಅದೇ ರೀತಿಯ ನಿರ್ಧಾರ ಕೈಗೊಳ್ಳಬೇಕಾದುದು ಅತ್ಯಂತ ಮಹತ್ವದ್ದಾಗಿದೆ ಎಂದು ವಿವಿಧ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಮುಸ್ಲಿಮರು ಈ ದೇಶದ ಕಾನೂನಿಗೆ ಗೌರವ ನೀಡುತ್ತಿಲ್ಲ, ಈ ನೆಲದ ಸಂಸ್ಕೃತಿಗೆ ಬೆಲೆ ಕೊಡುತ್ತಿಲ್ಲ ಮತ್ತು ಮೇಲಿಂದ ಮೇಲೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೃತ್ಯಗಳನ್ನು ಎಸಗುತ್ತಿದ್ದಾರೆ. ಗೋವುಗಳನ್ನು ಕೊಂದು ತಿನ್ನುವ ಹಾಗೂ ನಮ್ಮ ಹಿಂದೂ ಸಹೋದರಿಯರನ್ನ ಲವ್ ಜಿಹಾದ್ ಹೆಸರಿನಲ್ಲಿ ಮೋಸದಿಂದ ಮತಾಂತರಿಸಿ ದುರ್ಬಳಕೆ ಮಾಡುವ, ಕೊಲೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಶ್ರೀ ಸಿದ್ಧೇಶ್ವರ ಸಂಸ್ಥೆಯು ಮುಂದೆ ನಡೆಯುವ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಒಂದು ವೇಳೆ ನೀಡಿದರೆ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇಂಥದ್ದೇ ವಿಚಾರದಲ್ಲಿ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ‌ ಮಹಾಸಂಘ ಮತ್ತು ಹಿಂದೂ ಜನ ಜಾಗೃತಿ ಸಂಘ ಅನ್ಯಮತೀಯರಿಗೆ ಹಿಂದೂಗಳ ದೇವಸ್ಥಾನ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ನಿರ್ಬಂಧಿಸುವ ಅಂಗೀಕಾರ ಮಾಡಿದ್ದನ್ನು ಸಹ ಪ್ರಸ್ತಾಪ ಮಾಡಿದ್ದಾರೆ.‌

ಕಳೆದ 2019 ರಿಂದ ಮಹಾಮಾರಿ‌ ಕೊರೊನಾ ಹಾಗೂ 2023ರ ಜನವರಿ 2 ರಂದು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನರಾದ ಕಾರಣ ಪ್ರಸಕ್ತ ವರ್ಷ ಜಾತ್ರೆ ನಡೆದಿರಲಿಲ್ಲ. ಈ‌ ಬಾರಿ 2024ರ ಜನವರಿಯಲ್ಲಿ ನಡೆಯೋ ಜಾತ್ರೆಗೆ ಹಲವು ದಿನಗಳು ಬಾಕಿ ಇರುವಾಗಲೇ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂಬ ಕೂಗು ಎದ್ದಿದೆ.‌ ಈ ವಿಚಾರದಲ್ಲಿ ನಗರದ ಶಾಸಕ ಯತ್ನಾಳ್, ಜಿಲ್ಲಾಡಳಿತ ಹಾಗೂ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ