ಕಾರವಾರ: ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಕುರಿತು ನಾನು ಪ್ರಸ್ತಾಪ ಮಾಡಿಲ್ಲ ಎಂದು ಶಿವರಾಮ ಹೆಬ್ಬಾರ್ (Shivaram Hebbar) ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಅಂಕೋಲಾದಲ್ಲಿ ಅವರು ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತಾಡಲು ನಾನು ಉಸ್ತುವಾರಿ ಸಚಿವನಲ್ಲ. ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವ ಅವಶ್ಯಕತೆ ಇದೆ. ಜಿಲ್ಲೆ ವಿಭಜನೆ ಕುರಿತು ಜಿಲ್ಲೆಯ ಶಾಸಕರ ಜೊತೆ ಚರ್ಚಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯ. ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು ಎಂದು ಶಿವರಾಂ ಹೆಬ್ಬಾರ್ ಹೇಳಿದರು.
ಈ ವಿಷಯ ನನಗೆ ಗೊತ್ತಿಲ್ಲ
ವಿಶ್ವನಾಥ ಅವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಿರುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ, ಪತ್ರಿಕೆಯಲ್ಲಿ ಓದಿದ್ದೆನೆ. ನನ್ನ ಸ್ನೇಹಿತರು ಅವರೊಂದಿಗೆ ಈ ವಿಚಾರದ ಕುರಿತು ನಾನು ಮಾತನಾಡಿಲ್ಲ. ಅವರ ಮನವೊಲಿಸಲು ನಾನು ಯಾವುದೇ ಮುಂದಾಳತ್ವನ್ನ ವಹಿಸಿಕೊಳ್ಳಲ್ಲ. ಅವರು ಹಿರಿಯರು ನಿಶ್ಚಿತವಾಗಿ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು. ಇನ್ನು ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ಕೊಡುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ್ದು, ಈ ವಿಷಯದ ಬಗ್ಗೆ ಹೈಕಮಾಂಡ ನಿರ್ಧಾರ ಮಾಡಲಿದೆ ಎಂದು ಸಚಿವರು ನುಣಚಿಕೊಂಡರು.
ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇಗುಲದಲ್ಲಿ ವಸ್ತ್ರಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ
ಪ್ರತ್ಯೇಕ ಜಿಲ್ಲೆ ವಿಭಜನೆ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ
ಈ ವಿಚಾರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯದ ವಿವಿಧ ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಿದೆ. ಘಟ್ಟ ಮೇಲಿನ ತಾಲೂಕುಗಳನ್ನು ಒಳಗೊಂಡ ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇದೆ. ಈ ಬಗ್ಗೆ ಸಾರ್ವಜನಿಕರು ನನ್ನ ಹಾಗೂ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ಜಿಲ್ಲೆ ಬೇಡಿಕೆ ಸಂಬಂಧ ಈಗಾಗಲೇ ಸಿಎಂ ಬೊಮ್ಮಾಯಿ ಅವರ ಬಳಿ ಚರ್ಚಿಸಲಾಗಿದೆ. ಪ್ರತ್ಯೇಕ ಜಿಲ್ಲೆಗೆ ಸಚಿವ ಹೆಬ್ಬಾರ್ ಅವರ ಸಹಕಾರವೂ ಮುಖ್ಯ. ಈ ಕುರಿತಾಗಿ ಮತ್ತೊಮ್ಮೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.