ಟಿಕೆಟ್ ಕೈ ತಪ್ಪುತ್ತಿದ್ದಂತೆ ಫುಲ್ ಸೈಲೆಂಟ್; ಅಮಿತ್​ ಶಾ ಕರೆ ಮಾಡಿದ್ರು ಸ್ವೀಕರಿಸದ ಅನಂತ್​ ಕುಮಾರ್​ ಹೆಗಡೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 17, 2024 | 10:32 PM

ಸಂಸದ ಅನಂತ್​ ಕುಮಾರ್​ ಹೆಗಡೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿ ಹಿಂದೂತ್ವದ ಫೈರ್ ಬ್ರ್ಯಾಂಡ್ ಎಂದು ಕರೆಯಲ್ಪಟ್ಟಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ರಾಜಕೀಯದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ತನ್ನದೆ ಆದ ವೋಟ್ ಬ್ಯಾಂಕ್ ಹೊಂದಿರುವ ಅನಂತ್​ ಕುಮಾರ್​ ಮನವೋಲಿಸಲು ಕಮಲ ಕಲಿಗಳು ಯಾವೆಲ್ಲ ಸರ್ಕಸ್ ಮಾಡಿದ್ರು. ಅದಕ್ಕೆ ಹೆಗಡೆ ಪ್ರತಿಕ್ರಿಯೆ ಏನಿತ್ತು? ಈಗ ಅವರು ಏನ್ ಮಾಡುತ್ತಿದ್ದಾರೆ ಅಂತೀರಾ? ಈ ಸ್ಟೋರಿ ಓದಿ.

ಟಿಕೆಟ್ ಕೈ ತಪ್ಪುತ್ತಿದ್ದಂತೆ ಫುಲ್ ಸೈಲೆಂಟ್; ಅಮಿತ್​ ಶಾ ಕರೆ ಮಾಡಿದ್ರು ಸ್ವೀಕರಿಸದ ಅನಂತ್​ ಕುಮಾರ್​ ಹೆಗಡೆ
ಅನಂತ್​ ಕುಮಾರ್​ ಹೆಗಡೆ
Follow us on

ಉತ್ತರ ಕನ್ನಡ, ಏ.17: ಮಾತಾಡಿದ್ರೆ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತ್​ ಕುಮಾರ್​​ ಹೆಗಡೆ (Anantkumar Hegde), ಅದೇ ಮಾತಿನ ದಾಟಿಯ ಮೂಲಕ ಜನ ಮಣ್ಣನೆ ಗಳಿಸಿ ಆರು ಬಾರಿ ಬಿಜೆಪಿ ಸಂಸದನಾಗಿದ್ದರು. ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ಅವರು, ಡಿಸೆಂಬರ್​ನಿಂದ ಮಾರ್ಚ್​ವರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಚುನಾವಣೆಗೆ ಪ್ರಚಾರ ಆರಂಭ ಮಾಡಿದ್ದರು. ಆದ್ರೆ, ಕೊನೆಯ ಹಂತದಲ್ಲಿ ಟಿಕೆಟ್ ಮಿಸ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿದೆ. ಹೀಗಾಗಿ ಮುನಿಸಿಕೊಂಡಿರುವ ಅನಂತ್​ ಕುಮಾರ್​, ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದೆ, ಒಂದೇ ಒಂದು ಹೇಳಿಕೆಯನ್ನ ಕೊಡದೆ ಫುಲ್ ಸೈಲೆಂಟ್ ಆಗಿದ್ದಾರೆ.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಂತ್​ ಕುಮಾರ್​ ಸೈಲೆಂಟ್ ಆಗಿದ್ದುಕೊಂಡು ಪರೋಕ್ಷವಾಗಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರೂ ಎಂಬ ಮಾತಿದೆ. ಈಗ ಮತ್ತೆ ಅವರು ಸೈಲೆಂಟ್​ಗೆ ಸರಿದಿದ್ದು, ಕಮಲ ಅಭ್ಯರ್ಥಿ ಕಾಗೇರಿ ಸೇರಿದಂತೆ ಇನ್ನೂಳಿದ ನಾಯಕರಿಗೂ ಟೆನ್ಷನ್ ತಂದಿಟ್ಟಿದೆ. ಅವರ ಭೇಟಿಗೆ ಅವಕಾಶ ಕೊಡಿ ಎಂದು ಕಾಗೇರಿ ಕರೆ ಮಾಡಿ ಕೇಳಿದರೂ ಸರಿಯಾಗಿ ಪ್ರತಿಕ್ರಿಯಿಸದೆ ಇದುವರೆಗೂ ಭೇಟಿಗೂ ಅವಕಾಶ ಕೊಟ್ಟಿಲ್ಲ. ಹೇಗಾದರೂ ಮಾಡಿ ಅನಂತ್​ ಕುಮಾರ್​ ಮುನಿಸು ತಣ್ಣಗಾಗಿಸಲು ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಹರತಾಳು ಹಾಲಪ್ಪ, ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಹಿಂದೂ ಫೈರ್​​ ಬ್ರ್ಯಾಂಡ್​ಗೆ ಹಿನ್ನಡೆ: ಅನಂತ್​ಕುಮಾರ್ ಹೆಗಡೆಗೆ ತಲೆನೋವಾದ ಸ್ವಪಕ್ಷದ ನಾಯಕರ ನಡೆ

ಇನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ , ಆರ್ ಎಸ್ ಎಸ್ ಮುಖ್ಯಸ್ತರು ಸೇರಿದಂತೆ ಕೆಲವರು ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದ್ರೆ, ಅನಂತ್​ ಕುಮಾರ್​ ಇವರ ಯಾರ ಕರೆಯನ್ನ ಸ್ವಿಕರಿಸದೆ ಸೈಲೆಂಟ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ.  ಬಿಜೆಪಿ ರಾಷ್ಟ್ರೀಯ ನಾಯಕರ ಕರೆಯನ್ನೆ ಸ್ವಿಕರಿಸದೆ ಮೊಂಡುತನ ತೋರಿದ ಅನಂತ್​ ಕುಮಾರ್​, ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.

ಈಗ ಸದ್ಯ ತಾಯ್ನೆಲದ ಸೇವೆಯಲ್ಲಿ ಶಿರ್ಷಿಕೆ ಅಡಿ ಕದಂಬ ಪುಸ್ತಕ ಬರೆಯುತ್ತಿರುವ ಅನಂತ್​ ಕುಮಾರ್​​ ಹೆಗಡೆ, ತಮ್ಮ ಜೀವನದಲ್ಲಿ ಅನುಭವಿಸಿದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಕುರಿತಾದ ವಿಷಯಗಳನ್ನ ಈ ಪುಸ್ತಕದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ತಾನು ಬರೆಯುತ್ತಿರುವ ಪುಸ್ತಕದ ಒಂದೊಂದು ಪುಟವನ್ನ ತನ್ನ ಫೆಸ್​ ಬುಕ್ ಪೇಜ್​ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ಕೈ ನಾಯಕ ಬಿಕೆ ಹರಿಪ್ರಸಾದ್​ ವ್ಯಂಗ್ಯ ಮಾಡಿದ್ದಾರೆ.


ಒಟ್ಟಾರೆಯಾಗಿ ರಾಜಕೀಯದಿಂದ ದೂರ ಉಳಿದಿರುವ ಸಂಸದ ಅನಂತ್​ ಕುಮಾರ್​ ಹೆಗಡೆ. ಪುಸ್ತಕ ಬರೆಯುವುದರ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ರಾಜಕೀಯದಿಂದ ಸಂಪೂರ್ಣವಾಗಿ ವಿಮುಕ್ತರಾಗ್ತಾರಾ? ಎಂಬುವುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Wed, 17 April 24