
ಕಾರವಾರ, ಡಿಸೆಂಬರ್ 10: ತಂಬಾಕು ಕೊಟ್ಟಿಲ್ಲವೆಂದು ಜೈಲು ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಕೈದಿಗಳ ಗ್ಯಾಂಗ್ನ ಮತ್ತಿಬ್ಬರು ಇದೀಗ ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ದಾಂಧಲೆ ಎಬ್ಬಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ (Karwar Jail) ನಡೆದಿದೆ. ಕೆಲವು ದಿನಗಳ ಹಿಂದೆ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಮಂಗಳೂರು ಮೂಲದ ರೌಡಿಗಳಾದ ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಹಲ್ಲೆ ಮಾಡಿದ್ದರು. ಅದೇ ಗ್ಯಾಂಗ್ಗೆ ಸೇರಿದ ಕಬೀರ್ ಮತ್ತು ನೌಶಾದ್ ಜೈಲಿನಲ್ಲಿ ಗಲಾಟೆ ಮಾಡಿದ್ದಾರೆ. ಟಿವಿಯನ್ನು ಒಡೆದು ಹಾಕಿದ್ದಲ್ಲದೆ, ಇತರ ಹಲವು ವಸ್ತುಗಳನ್ನು ನಾಶಮಾಡಿದ್ದಾರೆ.
ಘಟನೆ ಬೆನ್ನಲ್ಲೇ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರು ಮಂದಿ ಕೈದಿಗಳನ್ನು ಕಾರವಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆ ಕೈದಿಗಳೇ ಜೈಲಿನಲ್ಲಿ ದಾಂಧಲೆ ಎಬ್ಬಿಸುತ್ತಿದ್ದಾರೆ. ಈ ಕೈದಿಗಳು ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಘಟನೆ ನಂತರ ಕಾರವಾರ ಡಿವೈಎಸ್‌ಪಿ ಗಿರೀಶ್ ನೇತೃತ್ವದ ಪೊಲೀಸರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ತಂಬಾಕು ಮತ್ತು ಇನ್ನಿತರೆ ಮದಕ ವಸ್ತುಗಳ ಬಳಕೆಗೆ ಅವಕಾಶ ಕೊಟ್ಟಿಲ್ಲವೆಂದು ಜೈಲಿನ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳಾದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಹಲ್ಲೆ ಮಾಡಿದ ಘಟನೆ ಡಿಸೆಂಬರ್ 6 ರಂದು ನಡೆದಿತ್ತು. ನಂತರ 20 ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ಆರೋಪಿಗಳು ಈ ಹಿಂದೆ ಮಂಗಳೂರಿನ ಜೈಲಿನಲ್ಲಿಯೂ ಇದೇ ರೀತಿ ದಾಂಧಲೆ ಎಬ್ಬಿಸಿದ್ದರು ಎಂಬುದು ತಿಳಿದುಬಂದಿದೆ. ತಂಬಾಕು ವಶಪಡಿಸಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಫಯಾನ್, ಹಿಂದಿನ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಕಾರವಾರ: ತಂಬಾಕು ಕೊಟ್ಟಿಲ್ಲವೆಂದು ಜೈಲು ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಕೈದಿಗಳು
ಒಂದೆಡೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಕೈದಿಗಳ ರಾಜಾತಿಥ್ಯ ಪ್ರಕರಣದಲ್ಲಿ ದೇಶದಾದ್ಯಂತ ಸುದ್ದಿಯಾಗುತ್ತಿದ್ದರೆ, ಇದೀಗ ಕಾರವಾರ ಜೈಲು ಸಹ ಕೈದಿಗಳ ದಾಂಧಲೆಯಿಂದ ಮತ್ತೆಮತ್ತೆ ಸುದ್ದಿಯಾಗುವಂತಾಗಿದೆ.
Published On - 7:25 am, Wed, 10 December 25