Magh Chaturthi: ಕಾರವಾರದ ಜನ ಮನೆಗಳಲ್ಲಿ ಗಣೇಶನ ವಿಗ್ರಹವಿಟ್ಟು ಪೂಜೆ ಮಾಡಿದರು! ಹಿನ್ನೆಲೆ, ಸಂಪ್ರದಾಯದ ವಿವರ ಹೀಗಿದೆ

| Updated By: ಸಾಧು ಶ್ರೀನಾಥ್​

Updated on: Jan 26, 2023 | 6:17 PM

Ganesha Chaturthi: ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಣೆಯಲ್ಲಿದೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಇರುವ ಹಿನ್ನೆಲೆ ಮಾಘ ಚೌತಿಯನ್ನ ಕಾರವಾರದಲ್ಲೂ ಸಹ ಆಚರಣೆ ಮಾಡುತ್ತಾರೆ.

Magh Chaturthi: ಕಾರವಾರದ ಜನ ಮನೆಗಳಲ್ಲಿ ಗಣೇಶನ ವಿಗ್ರಹವಿಟ್ಟು ಪೂಜೆ ಮಾಡಿದರು! ಹಿನ್ನೆಲೆ, ಸಂಪ್ರದಾಯದ ವಿವರ ಹೀಗಿದೆ
ಕಾರವಾರದ ಜನ ಮನೆಗಳಲ್ಲಿ ಗಣೇಶನ ವಿಗ್ರಹವಿಟ್ಟು ಪೂಜೆ ಮಾಡಿದರು!
Follow us on

ಗಣೇಶ ಚತುರ್ಥಿ (Ganesha Chaturthi) ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿವೆ. ಮತ್ತೆ ಹಬ್ಬ ಬರಬೇಕು ಅಂದ್ರೆ ಸಾಕಷ್ಟು ತಿಂಗಳುಗಳು ಕಳೆಯಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ (Karwar) ಬುಧವಾರ (ಜನವರಿ 25) ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಅರೇ ಇದೇನಪ್ಪಾ ಈಗ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದಾರಾ ಅಂತಾ ಆಶ್ಚರ್ಯ ಆಗ್ತಿದ್ಯಾ. ಹಾಗಿದ್ರೆ ಈ ಸ್ಟೋರಿ ನೋಡಿ… ಒಂದೆಡೆ ವಿಧ ವಿಧದ ಹೂವುಗಳು, ಗರಿಕೆ ಹುಲ್ಲಿನಿಂದ ಅಲಂಕಾರಗೊಂಡು ಮನೆಯಲ್ಲಿ ಕಂಗೊಳಿಸುತ್ತಿರುವ ಗಣೇಶನ ಮೂರ್ತಿ (Ganesha festival). ಇನ್ನೊಂದೆಡೆ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ, ಭಕ್ತಿಯಿಂದ ಬೇಡಿಕೊಳ್ಳುತ್ತಿರುವ ಜನರು. ಮತ್ತೊಂದೆಡೆ ವಿಘ್ನನಿವಾರಕನ ಭಜನೆ ಮಾಡುತ್ತಾ ಆರತಿ ಬೆಳಗುತ್ತಿರುವ ಮಹಿಳೆಯರು. ಈ ದೃಶ್ಯಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ. ಮಾಘ ಚತುರ್ಥಿ (Magh Chaturthi) ಹಿನ್ನೆಲೆ ಕಾರವಾರಿಗರು ಇಂದು ಗಣೇಶ ಹಬ್ಬವನ್ನ ಆಚರಿಸಿ ಸಂಭ್ರಮಿಸಿದರು.

ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲೇ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲ್ಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾಘ ಚೌತಿಯಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೇ ಹೇಳಲಾಗುತ್ತದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಸಹ ಮಾಘ ಚೌತಿಯಂದು ಒಂದು ದಿನದ ಮಟ್ಟಿಗೆ ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ.

ಜೊತೆಗೆ ಚತುರ್ಥಿ ವೇಳೆ ಪ್ರತಿವರ್ಷ ಸತತವಾಗಿ ಮೂರ್ತಿಯನ್ನಿಟ್ಟು ಪೂಜೆ ಮಾಡಲು ಸಾಧ್ಯವಾಗದವರು ಇಂದು ಮನೆಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಒಂದೇ ದಿನ ಇರಿಸಿ ರಾತ್ರಿ ವೇಳೆಗೆ ವಿಸರ್ಜನೆ ಮಾಡಲಾಗುತ್ತದೆ. ಈ ಮೂಲಕ ಮಾಘ ಚತುರ್ಥಿಯನ್ನೂ ಸಹ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎನ್ನುತ್ತಾರೆ ಅನೂಪ್ ನೇತಲ್ಕರ್, ಅರ್ಚಕರು.

ಇನ್ನು ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಣೆಯಲ್ಲಿದೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಇರುವ ಹಿನ್ನೆಲೆ ಮಾಘ ಚೌತಿಯನ್ನ ಕಾರವಾರದಲ್ಲೂ ಸಹ ಆಚರಣೆ ಮಾಡಿಕೊಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಅಷ್ಟಾಗಿ ಈ ಹಬ್ಬವನ್ನ ಆಚರಿಸುವುದಿಲ್ಲ.

ಇನ್ನು ಹಲವರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಘ ಚೌತಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಅದು ಈಡೇರಿದ ವೇಳೆ ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುವ ಪದ್ದತಿ ನಡೆದುಕೊಂಡು ಬಂದಿದೆ. ಅಲ್ಲದೇ ಕೆಲವರು ಮಾಘ ಚತುರ್ಥಿಯಂದು ಸಾರ್ವಜನಿಕವಾಗಿ ಗಣಪನ ಮೂರ್ತಿಯನ್ನೂ ಸಹ ಪ್ರತಿಷ್ಠಾಪಿಸಿ, ಪೂಜಿಸಿ, ಸಂಜೆಯ ವೇಳೆಗೆ ವಿಸರ್ಜನೆ ಮಾಡುತ್ತಾರೆ ಎಂದು ಗಣಪತಿ ವಿಸರ್ಜಕರಾದ ಪ್ರವೀಣ ಬೆಟ್ಟ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಮಾಘ ಚೌತಿ ಹಬ್ಬದ ಹಿನ್ನೆಲೆ ಕಡಲನಗರಿ ಕಾರವಾರದಲ್ಲಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಜನರು ಪೂಜೆ ಸಲ್ಲಿಸುವ ಮೂಲಕ ವಿಘ್ನ ನಿವಾರಕನನ್ನ ಆರಾಧಿಸಿದ್ದು ವಿಶೇಷವೇ. ಎರಡನೇ ಗಣಪತಿ ಹಬ್ಬ ಎಂದೇ ಕರೆಯುವ ಮಾಘ ಚೌತಿ ಹಬ್ಬದ ಸಂಭ್ರಮ ಗಣೇಶ ಚತುರ್ಥಿಯಂತೆಯೇ ಕಂಡುಬಂದಿದ್ದಂತೂ ಸತ್ಯ.

ವರದಿ: ವಿನಾಯಕ ಬಡಿಗೇರ, ಟಿವಿ9, ಕಾರವಾರ