ಕಾರವಾರ: ಅತಿ ವಿರಳ ಒಕ್ಕಣ್ಣಿನ (ಒಂದೇ ಕಣ್ಣು) ನಾಗರಹಾವು ತಾಲೂಕಿನ ಕದ್ರಾದಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಸುಮಾರು 4.5 ಅಡಿಯ ಉದ್ದದ ಹಾವೊಂದು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿದ್ದಾರೆ . ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣನಕರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.
ಚೌಗ್ಲೆಯವರ ಮನೆ ಹತ್ತಿರ ರಕ್ಷಿಸಿದ್ದ ನಾಗರ ಹಾವಿಗೆ ಒಂದು ಕಣ್ಣು ಇರಲಿಲ್ಲ. ಈ ಒಕ್ಕಣ್ಣಿನ ನಾಗಿಣಿ ಒಂದು ಕಣ್ಣಿನ ಸಂಪೂರ್ಣ ದಷ್ಟಿ ಕಳೆದುಕೊಂಡಿದೆ. ಈ ರೀತಿ ಒಕ್ಕಣ್ಣಿನ ನಾಗರ ಸಾಮಾನ್ಯವಾಗಿ ಕಾಣ ಸಿಗುವುದು ತೀರಾ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚುವುದರಿಂದಲೂ ಹೀಗೆ ಆಗಿರುವ ಸಾಧ್ಯತೆ ಇರುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ: ಅಮಾವಾಸ್ಯೆ ಕತ್ತಲಲ್ಲಿ ಮಲಗಲು ಜಮೀನಿಗೆ ಹೋಗ್ತಿದ್ದ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದರು, ಕಾರಣ ಏನು?
ಇನ್ನು ಅತಿ ವಿರಳವಾಗಿ ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದಾಗಿಯೂ ಇಂತಹ ವಿದ್ಯಾಮಾನಗಳಿಗೆ ಕಾರಣವಾಗುತ್ತದೆ. ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೇನೂ ಪರಿಣಾಮ ಬೀರುವುದಿಲ್ಲ. ಅವು ನಿಸರ್ಗದಲ್ಲಿ ಸಹಜ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇದು ನಾಗರ ಹಾವುಗಳ ಮಿಲನ ಋತುವಾಗಿರುವುದರಿಂದ ನಾಗರ ಹಾವುಗಳು ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಒಂದು ಹೆಣ್ಣು ನಾಗರ ಹಾವು ಇದ್ದ ಜಾಗದ ಆಸುಪಾಸಿನಲ್ಲಿ ಎರಡು ನಾಗರ ಹಾವುಗಳಿರುವ ಸಾಧ್ಯತೆ ಕೂಡಾ ಇರುತ್ತದೆ ಎನ್ನುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:57 pm, Wed, 22 February 23