ಕಾರವಾರ: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಿಯಮ ಮೀರಿ ನಿರ್ಮಾಣಗೊಂಡ ಕಟ್ಟಡಗಳ ನೆಲಸಮಕ್ಕೆ ಆದೇಶ
ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯ ರವೀಂದ್ರನಾಥ್ ಟಾಗೋರ್ ಬೀಚ್ ಬಳಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದು, ಕಾರವಾರದ ವಕೀಲರೋರ್ವರು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸಿಆರ್‌ಝಡ್ ನಿಯಮ ಉಲ್ಲಂಘನೆಯಾಗಿದೆಯೆಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಸ್ತುತ ಈ ಕಟ್ಟಡಗಳನ್ನು ತೆರವುಗೊಳಿಸಿಲು ಆದೇಶ ನೀಡಲಾಗಿದ್ದು, ಅಧಿಕಾರಿಗಳಿಗೆ ಇದು ತಲೆಬಿಸಿಯಾಗಿ ಪರಿಣಮಿಸಿದೆ.
ಉತ್ತರ ಕನ್ನಡ: ಜಿಲ್ಲೆಯಲ್ಲಿರುವ ಟಾಗೋರ್ ಬೀಚ್‌ಗೆ ಭೇಟಿ ನೀಡಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ ಕಾರವಾರದ ರವೀಂದ್ರ ಟಾಗೋರ್ ಬೀಚ್ ಬಳಿ ರಾಕ್ ಗಾರ್ಡನ್, ಮಯೂರವರ್ಮ ವೇದಿಕೆ, ಸಾಗರ ದರ್ಶನ, ಜಲಸಾಹಸ ಕ್ರೀಡಾ ಕಟ್ಟಡ, ಹೋಟೆಲ್, ಫುಡ್ ಕೋರ್ಡ್‌ಗಳನ್ನು ನಿರ್ಮಿಸಲು ಅವಕಾಶ ನೀಡಲಾಗಿತ್ತು. ಆದರೆ ಇವುಗಳಿಗೆಲ್ಲಾ ಪ್ರಸ್ತುತ ಕಂಟಕ ಎದುರಾಗಿದೆ. ಕಾರವಾರದ ವಕೀಲರೋರ್ವರು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಕಾರವಾರದ ಬೀಚ್‌ನಲ್ಲಿ ಸಿಆರ್‌ಝಡ್(CRZ) ನಿಯಮ ಉಲ್ಲಂಘನೆಯಾಗಿದೆಯೆಂದು ದೂರು ನೀಡಿದ್ದರು. ಈ ವಿಷಯಗಳನ್ನು ಸುಮಾರು ತಿಂಗಳುಗಳಿಂದ ಎನ್‌ಜಿಟಿಯಲ್ಲಿ ಪ್ರಶ್ನೆ ಮಾಡಲಾಗಿತ್ತು. ಕಳೆದ ಫೆ.17ರಂದು ಈ ಪ್ರಕರಣ ಲಿಸ್ಟ್ ಆಗಿದ್ದು, ಮುಂದಿನ ವಿಚಾರಣೆಗೆ ಎಪ್ರಿಲ್ 3ಕ್ಕೆ ಮುಂದೂಡಲಾಗಿದೆ.
ಈ ಮಧ್ಯೆ ಸಾಕಷ್ಟು ಪತ್ರ ವ್ಯವಹಾರಗಳು ನಡೆದಿದ್ದು, ಫೆಬ್ರುವರಿ 6ರಂದು ಈ ಸಂಬಂಧ 39ನೇ ಸಭೆ ಕೂಡಾ ನಡೆದಿತ್ತು. ನಂತರ ಸಿಆರ್‌ಝಡ್ ನಿಯಮ ಉಲ್ಲಂಘಿಸುವ ಕಟ್ಟಡಗಳನ್ನು ತೆರವುಗೊಳಿಸಲು ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆ. ಅಲ್ಲದೇ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದಿಂದ ಕೆಲವು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದ್ದು, ಬೀಚ್ ಬಳಿ ನಿರ್ಮಾಣ ಮಾಡಲಾಗಿರುವ ಇವುಗಳನ್ನು 30 ದಿನಗಳೊಳಗೆ ತೆರವು ಮಾಡಲು ಅಂಗೀಕಾರ ನೀಡಲು ಆದೇಶ ಬಂದಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದ್ದು, 30 ದಿನಗಳೊಳಗೆ ಇವುಗಳನ್ನು ತೆರವುಗೊಳಿಸುವುದು ಸಾಧ್ಯವಾಗದ ಕಾರಣ ಹೆಚ್ಚಿನ ಸಮಯಕ್ಕೆ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಲು ಅಭಿಪ್ರಾಯ ವ್ಯಕ್ತವಾಗಿದೆ. ಈ ಸಂಬಂಧ ಅಧಿಕಾರಿಗಳು ಕೂಡಾ ಅಫಿಡಾವಿಟ್ ಅನ್ನು ಪ್ರಾಧಿಕಾರದ ಮುಂದೆ ಸಲ್ಲಿಸಲಿದ್ದಾರೆ. ನಂತರ ಎನ್‌ಜಿಟಿ ಯಾವ ನಿರ್ಧಾರ ಕೈಗೊಳ್ಳುತ್ತೆ ಅದರ ಮೇಲೆ ಕಟ್ಟಡಗಳನ್ನು ತೆರವುಗೊಳಿಸಿವುದೇ ಅಥವಾ ಸಕ್ರಮಗೊಳಿಸುವುದೇ ಎಂದು ದೊರೆಯುವ ಅಂತಿಮ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಕನ್ನಡ: ಪವಿತ್ರ ಪಡಿ ಅಮವಾಸ್ಯೆಯಂದು ಗೋಕರ್ಣದಲ್ಲಿ ಭಿಕ್ಷುಕರಿಗೆ ದಾನ ನೀಡುವ ವಿಶಿಷ್ಟ ಜಾತ್ರೆ!
ಸರಕಾರದ ಹೊಸ ನಿಯಮಗಳ ಪ್ರಕಾರ ಸಿಆರ್‌ಝಡ್ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. 2019ರ ಗೈಡ್‌ಲೈನ್ಸ್‌ಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದರೂ, ಉತ್ತರಕನ್ನಡ ಜಿಲ್ಲಾಡಳಿತ 2011ರ ಗೈಡ್‌ಲೈನ್ಸ್‌ಗಳನ್ನು ಪಾಲಿಸುತ್ತಿದೆ. ಹೈ ಟೈಡ್ ಲೈನ್‌ನಿಂದ 50ಮೀಟರ್ ಒಳಗಡೆ ಮಾತ್ರ ಸಿಆರ್‌ಝಡ್ ಬರುತ್ತೆ ಅಂತಾ ಒಂದು ನಿರ್ದೇಶನವಿದ್ದು, ಈಗಿನ ನಿಯಮದ ಪ್ರಕಾರ 100ಮೀಟರ್‌ವರೆಗೆ ವ್ಯಾಪ್ತಿಗೆ ಒಳಪಡುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಹೊಸ ನಿಯಮಾವಳಿಗಳ ಪ್ರಕಾರ ಈಗಾಗಲೇ ನಿರ್ಮಾಣಗೊಂಡಿರುವಂತದ್ದು ಕೆಲವು ವಿನಾಯಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಈ ಎಲ್ಲಾ ವಿಚಾರಗಳು ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದ್ದು, ಸರಕಾರದ ಹಂತದಲ್ಲಿ ಇದನ್ನು ತೀರ್ಮಾನಿಸಿ ಯಾವ ರೀತಿ ಮುಂದುವರಿಯಬೇಕೆಂದು ಕಾನೂನಿನ ಅಭಿಪ್ರಾಯ ಪಡೆದುಕೊಂಡು ತೀರ್ಮಾನಿಸುತ್ತೇವೆ ಅಂತಾರೆ ಅಧಿಕಾರಿಗಳು. ಆದರೆ ಜನಸಾಮಾನ್ಯರು ಮಾತ್ರ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಬೆಳೆಸಲು ಸಿಆರ್‌ಝಡ್ ನಿಯಮಾವಳಿಯಲ್ಲಿ ಸರಕಾರ ಸಡಲಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಿಯಮ ಮೀರಿ ನಿರ್ಮಾಣಗೊಂಡ ಕಟ್ಟಡಗಳು ಇದೀಗ ಕಾನೂನಿನ ತೊಡಕಿನಿಂದ ನೆಲಸಮವಾಗುವ ಭೀತಿಯಲ್ಲಿದೆ. ಈ ಕಾರಣದಿಂದ ಸರಕಾರ ಇತ್ತ ಗಮನ ಹರಿಸಿ ಪ್ರವಾಸೋದ್ಯಮಕ್ಕೆ ಪೂರಕವಾಗುವಂತಹ ಅಂಶಗಳಿಗೆ ಕೊಂಚ ಸಡಿಲಿಕೆ ಮಾಡಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ