ಉತ್ತರ ಕನ್ನಡ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅರಣ್ಯ ಇಲಾಖೆ (Forest Department) ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಭೂ ಕುಸಿತ (Landslide) ಸಂಭವಿಸಿದ ಪ್ರದೇಶದಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಲು ನಿರ್ಧರಿಸಿದೆ. ರಾಜ್ಯದಲ್ಲಿ ಮೊದಲ ಬಾರಿ ಡ್ರೋನ್ ಬಳಕೆ ಮಾಡಿ ಬೀಜ ಬಿತ್ತನೆ ಮಾಡಲಾಗುತ್ತಿದೆ. ಜಿಲ್ಲೆಯ 60 ಭೂ ಕುಸಿತ ಸ್ಥಳಗಳಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿದೆ.
ಅರಣ್ಯ ಇಲಾಖೆ ಸುಮಾರು 100 ರಿಂದ 120 ಹೆಕ್ಟೇರ್ ಪ್ರದೇಶದಲ್ಲಿ, ಸಸಿ ನಾಟಿ ಮಾಡುಲು ಸಾಧ್ಯವಿರದ ಸ್ಥಳಗಳಲ್ಲಿ ಬೀಜ ಬಿತ್ತನೆಗೆ ಮುಂದಾಗಿದೆ. ಅಣಶಿ ಘಟ್ಟ, ಕುಮಟಾ ಘಟ್ಟಭಾಗ, ಹೊನ್ನಾವರ, ಭಟ್ಕಳ ಭಾಗದಲ್ಲಿ ಹುಲ್ಲು, ಬಿದಿರು, ಕರಿಮತ್ತಿ, ಹೊನ್ನೆ ಇತರೆ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಇದು ಭೂ ಕುಸಿತ ತಡೆಗಟ್ಟಲು ನೂತನ ಪ್ರಯೋಗ ಎನ್ನಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 1-2 ತಿಂಗಳಿಂದ ನಿರಂತರಾವಾಗಿ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭೂ ಕುಸಿತ ಸಂಭವಿಸಿ ಸಾಕಷ್ಟು ಹಾನಿಯಾಗಿದೆ. ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ 2 ರಿಂದ 3 ಭಾರಿ ಗುಡ್ಡ ಕುಸಿದಿದೆ. ಇದರಿಂದ ಗ್ರಾಮದ 10ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳೀಯ ಆಡಳಿತ ಗುಡ್ಡದ ಭಾಗದಲ್ಲಿ ರಸ್ತೆ ಸಂಚಾರ ಬಂದ್ ಮಾಡಿತ್ತು.
ಇದಕ್ಕಿಂತ ಮುಂಚೆ ಮುಟ್ಟಳ್ಳಿ ಗ್ರಾಮದಲ್ಲೇ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದರು. ಲಕ್ಷ್ಮೀ ನಾಯ್ಕ(48), ಪುತ್ರಿ ಲಕ್ಷ್ಮೀ(33), ಅನಂತ(32), ಪ್ರವೀಣ್ ನಾಯ್ಕ(20) ನಾಲ್ವರು ಮೃತಪಟ್ಟಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಣಶಿ ಗುಡ್ಡ ಕುಸಿದಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 34ರ ಕಾರವಾರ-ಜೋಯಿಡಾ ಮಾರ್ಗದ ಸಂಚಾರ ಬಂದ ಮಾಡಲಾಗಿತ್ತು. ನಿರಂತರ ಮಳೆಯಿಂದಾಗಿ ಹೆದ್ದಾರಿಯಲ್ಲಿ ಅಣಶಿ ಗುಡ್ಡ ಸತತ ನಾಲ್ಕು ಬಾರಿ ಕುಸಿತಗೊಂಡಿದೆ. ಈ ಸಂಬಂಧ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ಹೊರಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Fri, 9 September 22