ಉತ್ತರ ಕನ್ನಡ: ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಪಿಡಬ್ಲ್ಯೂಡಿ ಎಇಇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ. ಸಿದ್ದಾಪುರ ಲೋಕೋಪಯೋಗಿ ಇಲಾಖೆ ಪಿಡಬ್ಲ್ಯೂಡಿ ಎಇಇ ಮುದುಕಣ್ಣನವರ್ ಮೃತ ದುರ್ದೈವಿ. ಕಾರವಾರದಲ್ಲಿರುವ ಡಿಸಿ ಕಚೇರಿಯಲ್ಲಿ ನೆರೆ ಮತ್ತು ಕೊವಿಡ್ ಸಂಬಂಧ ಸಚಿವರ ನೇತೃತ್ವದಲ್ಲಿ ಸಭೆ ಹಿನ್ನೆಲೆ ತೆರಳುವಾಗ ಈ ಅವಘಡ ಸಂಭವಿಸಿದೆ.
ಸಚಿವರಾದ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ನೆರೆ ಮತ್ತು ಕೊರೊನಾ ಸಂಬಂಧ ಅಧಿಕಾರಿಗಳ ಸಭೆಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ಅನಾಹುತ ಸಂಭವಿಸಿದೆ. ಕಾರಿನಲ್ಲಿ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಇಂಜಿನಿಯರ್ಗಳು ಕೂಡ ಇದ್ದರು. ಕಾರಿನಲ್ಲಿದ್ದ ಇನ್ನುಳಿದ ನಾಲ್ವರು ಅಧಿಕಾರಿಗಳಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳ ಅಂಕೋಲಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ದೇವನಹಳ್ಳಿ: ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ಮೂವರ ಬಲಿ
ಪ್ರಯಾಣಿಕರನ್ನು ಕೂರಿಸಿಕೊಂಡು ಅತಿವೇಗದಿಂದ ಆಟೋ ಚಾಲನೆ ಮಾಡಿದ ಪರಿಣಾಮ ಆಟೋ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ರಸ್ತೆಯಲ್ಲಿ ಬಿದ್ದ ಆಟೋಗೆ ಕಾರು ಡಿಕ್ಕಿ ಹೊಡೆದು ಆಟೋ ಚಾಲಕ ಸೇರಿ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವನಹಳ್ಳಿಯ ಚಿಕ್ಕಜಾಲ ಬಳಿಯ ಬಾಗಲೂರಿನಲ್ಲಿ ಈ ಅಪಘಾತ ಸಂಭವಿಸಿದೆ.
ಆಟೋ ಚಾಲಕ ಕಿರಣ್ (26), ಪ್ರಯಾಣಿಕರಾದ ಅನ್ವರ್ ಹುಸೇನ್(28) ಮತ್ತು ರಾಹುಲ್( 21) ಸಾವನ್ನಪ್ಪಿದ್ದಾರೆ. ನೆನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟೋದಲ್ಲಿದ್ದ ಇನ್ನೊರ್ವ ವ್ಯಕ್ತಿ ವಾಸಪ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರಯಾಣಿಕರನ್ನು ಕೂರಿಸಿಕೊಂಡು ಬೂದಿಗೆರೆ ಕಡೆಯಿಂದ ಬಾಗಲೂರು ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪಘಾತ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಕಾರು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಕಾರು ಚಾಲಕನ ವಿರುದ್ಧ ಚಿಕ್ಕಜಾಲ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಸಿಎಂ ಸ್ವಗೃಹದ ಬಳಿ ಅಪಘಾತ; ಎರಡು ಕಾರುಗಳ ನಡುವೆ ಡಿಕ್ಕಿ
ಖ್ಯಾತ ನಟಿ ಯಶಿಕಾ ಆನಂದ್ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು
Published On - 12:13 pm, Sat, 7 August 21