ಉತ್ತರ ಕನ್ನಡ, ಸೆ.10: ನೀರು ಕೇಳುವ ನೆಪದಲ್ಲಿ ಬಂದು ಮಾಜಿ ಸಂಸದರ ಪತ್ನಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಘಟನೆ ಸಪ್ಟೆಂಬರ್ 6ರಂದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ನಗರದ ಯಲ್ಲಾಪುರ ನಾಕಾದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ಮೂಲದ ಪರಶುರಾಮ ಬಸಪ್ಪ ಸಣ್ಮನಿ (30) ಬಂಧಿತ ಆರೋಪಿ. ಇತನಿಂದ 37ಗ್ರಾಂ ಬಂಗಾರದ ಸರ ಹಾಗೂ ಒಂದು ಬೈಕ್ನ್ನು ವಶಕ್ಕೆ ಪಡೆಯಲಾಗಿದೆ.
ಹೌದು, ಕಳೆದ ಸೆ.06 ರಂದು ಕಾಂಗ್ರೆಸ್ನ ಮಾಜಿ ಸಂಸದರಾದ ದೇವರಾಜ ನಾಯ್ಕ್ ಅವರ ಪತ್ನಿ ಗೀತಾ ಒಬ್ಬರೇ ಮನೆಯಲ್ಲಿ ಇದ್ದಾಗ, ಓರ್ವ ಕಳ್ಳ ಒಳಗೆ ಹೋಗಿ ನೀರು ಕೇಳುವ ಸೋಗಿನಲ್ಲಿ ಗೀತಾ ಅವರ ಕುತ್ತಿಗೆಯಲ್ಲಿದ್ದ 3 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಘಟನೆ ಕುರಿತಂತೆ ದೇವರಾಜ ನಾಯ್ಕ್ ಪುತ್ರ ನಾಗರಾಜ ನಾಯ್ಕ್ ಶಿರಸಿ ಮಾರುಕಟ್ಟೆ ಠಾಣೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಶಿರಸಿ ಮಾರುಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ಹಿಡಿಯಲು ವಿವಿಧೆಡೆ ನಾಕಾಬಂದಿ ಹಾಕಿದ್ದರು. ಇದೀಗ ಆರೋಪಿಯನ್ನು ಮೂರ್ನಾಲ್ಕು ದಿನಗಳಲ್ಲಿಯೇ ಬಂಧಿಸಿದ್ದಾರೆ.
ಇದನ್ನೂ ಓದಿ:ಉತ್ತರ ಕನ್ನಡ: ನೀರು ಕೇಳುವ ನೆಪದಲ್ಲಿ ಮಾಜಿ ಸಂಸದರ ಪತ್ನಿಯ ಚಿನ್ನದ ಸರ ಎಗರಿಸಿದ ಕಳ್ಳ
ಇತ್ತೀಚೆಗೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಹೌದು, ಆ.23 ರಂದು ಶಿರಸಿಯ ಅಯೋಧ್ಯಾ ಕಾಲೋನಿಯ ಉದ್ಯಮಿಯೋರ್ವರ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಘಟನೆ ನಡೆದಿತ್ತು. ನಗದು, ಚಿನ್ನಾಭರಣ ಸೇರಿ ಒಟ್ಟು 5ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಆಶೀಶ್ ಲೋಖಂಡೆ ಎಂಬುವವರ ಮನೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವೆ ಕಳ್ಳರು ಕೈಚಳಕ ತೋರಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳ್ಳರನ್ನು ಹಿಡಿಯಲು ಬಲೆ ಬಿಸಿದ್ದರು. ಹೀಗಿರುವಾಗಲೇ ಇದೀಗ ಮತ್ತೊಂದು ಘಟನೆ ನಡೆದಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ