ಉತ್ತರ ಕನ್ನಡ: ನೀರು ಕೇಳುವ ನೆಪದಲ್ಲಿ ಮಾಜಿ ಸಂಸದರ ಪತ್ನಿಯ ಚಿನ್ನದ ಸರ ಎಗರಿಸಿದ ಕಳ್ಳ
ಕಾಂಗ್ರೆಸ್ನ ಮಾಜಿ ಸಂಸದ ದೇವರಾಜ ನಾಯ್ಕ್ ಅವರ ಪತ್ನಿ ಗೀತಾ ಒಬ್ಬರೇ ಮನೆಯಲ್ಲಿ ಇದ್ದಾಗ, ಒಳಗೆ ಹೋಗಿದ್ದ ಕಳ್ಳ ನೀರು ಕೇಳುವ ನೆಪದಲ್ಲಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಉತ್ತರ ಕನ್ನಡ, ಸೆ.06: ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇಂತಹ ಕೇಸ್ಗಳು ಮೀತಿಮೀರಿದೆ. ಕೆಲವು ದಿನಗಳ ಹಿಂದೆಯಷ್ಟೇ ಶಿರಸಿ (Sirsi) ಯಲ್ಲಿ ಖದೀಮರು ಕೈಚಳಕ ತೋರಿಸಿದ್ದರು. ಇದೀಗ ಕಳ್ಳನೊಬ್ಬ ನೀರು ಕೇಳುವ ನೆಪದಲ್ಲಿ ಮಾಜಿ ಸಂಸದರ ಪತ್ನಿಯ ಚಿನ್ನದ ಸರ ಎಗರಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ನಗರದ ಯಲ್ಲಾಪುರ ನಾಕಾದಲ್ಲಿ ನಡೆದಿದೆ.
ಹೌದು, ಕಾಂಗ್ರೆಸ್ನ ಮಾಜಿ ಸಂಸದ ದೇವರಾಜ ನಾಯ್ಕ್ ಅವರ ಪತ್ನಿ ಗೀತಾ ಒಬ್ಬರೇ ಮನೆಯಲ್ಲಿ ಇದ್ದಾಗ, ಒಳಗೆ ಹೋಗಿದ್ದ ಕಳ್ಳ ನೀರು ಕೇಳುವ ನೆಪದಲ್ಲಿ ಗೀತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. 3 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರ ಇದಾಗಿದೆ. ಇನ್ನು ಕಳ್ಳ ಮನೆಯಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಮೊದಲೇ ಅರಿತುಕೊಂಡಿದ್ದ. ಘಟನೆ ನಡೆಯುತ್ತಿದ್ದಂತೆ ದೇವರಾಜ ನಾಯ್ಕ್ ಪುತ್ರ ನಾಗರಾಜ ನಾಯ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಮಾಜಿ ಸಂಸದರ ಮನೆಗೆ ಶಿರಸಿ ಮಾರುಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಹಿಡಿಯಲು ವಿವಿಧೆಡೆ ನಾಕಾಬಂದಿ ಹಾಕಿದ್ದಾರೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ
ಇನ್ನು ಆಗಸ್ಟ್ 23 ರಂದು ಶಿರಸಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಘಟನೆ ಶಿರಸಿಯ ಅಯೋಧ್ಯಾ ಕಾಲೋನಿಯಲ್ಲಿ ನಡೆದಿತ್ತು. ಹೊಲಿಗೆ ಮಷೀನ್ ಡೀಲರ್ ಆಗಿದ್ದ ಆಶೀಶ್ ಲೋಖಂಡೆ ಅವರ ಮನೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವೆ ಕಳ್ಳರು ಕೈಚಳಕ ತೋರಿಸಿದ್ದರು. ನಗದು, ಚಿನ್ನಾಭರಣ ಸೇರಿ ಒಟ್ಟು 5ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳ್ಳರನ್ನು ಹಿಡಿಯಲು ಬಲೆ ಬಿಸಿದ್ದರು. ಬೆರಳಚ್ಚು ತಂಡ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿತ್ತು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಘಟನೆ ನಡೆದಿರುವುದು ಶಿರಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ