AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಂಧದಲ್ಲಿ ಪ್ರೀತಿ, ಆತ್ಮೀಯತೆಯನ್ನು ಹೆಚ್ಚಿಸಲು ಸಂಗಾತಿಗಳಿಬ್ಬರ ಬೆಳಗಿನ ದಿನಚರಿ ಹೀಗಿದ್ದರೆ ಚೆಂದ

ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ತಮ್ಮ ಕುಟುಂಬದೊಂದಿಗೆ ಮುಖ್ಯವಾಗಿ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಇದು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸಬಹುದು. ಹಾಗಾಗಿ ಸಂಬಂಧವನ್ನು ಇನ್ನಷ್ಟು ಬಲಪಡಿಸಲು, ಆತ್ಮೀಯತೆಯನ್ನು ಹೆಚ್ಚಿಸಲು ದಂಪತಿಗಳು ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಕೆಲಸಗಳನ್ನು ಮಾಡಿದರೆ ಚೆಂದ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸಂಬಂಧದಲ್ಲಿ ಪ್ರೀತಿ, ಆತ್ಮೀಯತೆಯನ್ನು ಹೆಚ್ಚಿಸಲು ಸಂಗಾತಿಗಳಿಬ್ಬರ ಬೆಳಗಿನ ದಿನಚರಿ ಹೀಗಿದ್ದರೆ ಚೆಂದ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Dec 28, 2025 | 9:55 AM

Share

ಮುನಿಸು, ಪರಸ್ಪರ ಸಮಯ ಕಳೆಯದೆ ಇರುವುದು ಇಂತಹ ಸಣ್ಣ ಸಣ್ಣ ಸಂಗತಿಗಳು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುವಂತೆ  ಸಕಾರಾತ್ಮಕ ಅಭ್ಯಾಸಗಳು ಸಂಬಂಧವನ್ನು (relationship) ಬಲಪಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಆದರೆ ಇಂದಿನ ಈ ಬಿಡುವಿಲ್ಲದ ಜೀವನಶೈಲಿಯ ಕಾರಣದಿಂದಾಗಿ ವಿಶೇಷವಾಗಿ ಸಂಗಾತಿಗಳಿಗೆ ಪರಸ್ಪರ ಸಮಯವನ್ನು ಕಳೆಯುವುದು ಸವಾಲಿನ ಕೆಲಸವಾಗಿದೆ. ಕಾರ್ಯನಿರತ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ದಿನಗಟ್ಟಲೆ ಮಾತನಾಡಲು, ಸಮಯ ಕಳೆಯಲು ಸಾಧ್ಯವಾಗದಿದ್ದರೂ, ಬೆಳಗಿನ ದಿನಚರಿಯಲ್ಲಿ ಸಂಗಾತಿಗಳಿಬ್ಬರು ಈ ಒಂದಷ್ಟು ಕೆಲಸಗಳನ್ನು ಮಾಡುವ ಮೂಲಕ ದಾಂಪತ್ಯ, ಪ್ರೀತಿಯ ಬಂಧವನ್ನು ಬಲಪಡಿಸಿಕೊಳ್ಳಬಹುದು. ಪ್ರೀತಿಯನ್ನು ಬಲಪಡಿಸುವ ಆ ಬೆಳಗಿನ ದಿನಚರಿ ಯಾವುವು ಎಂಬುದನ್ನು ನೋಡೋಣ.

ಸಂಬಂಧವನ್ನು ಬಲಪಡಿಸಲು ಸಂಗಾತಿಗಳಿಬ್ಬರ ಬೆಳಗಿನ ದಿನಚರಿ ಹೀಗಿದ್ದರೆ ಚೆಂದ:

ಪ್ರೀತಿಯ ಶುಭೋದಯ: ದಿನವನ್ನು ಉತ್ತಮ ಮನಸ್ಥಿತಿಯಲ್ಲಿ ಪ್ರಾರಂಭಿಸಲು, ದಂಪತಿಗಳು ಎದ್ದ ತಕ್ಷಣ ಒಬ್ಬರಿಗೊಬ್ಬರು ಪ್ರೀತಿಯಿಂದ ಶುಭೋದಯವನ್ನು ತಿಳಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಸಣ್ಣ ಅಭ್ಯಾಸವು ನಿಮ್ಮ ಸಂಬಂಧದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.

ಒಟ್ಟಿಗೆ ಉಪಹಾರ ಸೇವಿಸುವುದು: ಕೆಲಸದ ಕಾರಣದಿಂದಾಗಿ, ನೀವು ದಿನವಿಡೀ ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ಸಾಧ್ಯವಾಗದಿರಬಹುದು ಮತ್ತು ಸಂಜೆ ಮನೆಗೆ ಬಂದ ಬಳಿಕವೂ  ಸಹ, ಕೆಲಸದ ಆಯಾಸದಿಂದಾಗಿ ನೀವು ಸರಿಯಾಗಿ ಮಾತನಾಡಲು ಸಾಧ್ಯವಾಗದಿರಬಹುದು. ಹಾಗಾಗಿ ಬೆಳಗ್ಗೆ ಸಿಗುವ ಸ್ವಲ್ಪ ಸಮಯದಲ್ಲಿ ಅಡುಗೆಮನೆಯಲ್ಲಿ ಉಪಾಹಾರವನ್ನು ತಯಾರಿಸುತ್ತಾ, ಇಬ್ಬರೂ ಜೊತೆಗೆ ಉಪಹಾರ ಸೇವಿಸುತ್ತಾ ಸ್ವಲ್ಪ  ಸಮಯವನ್ನು ಒಟ್ಟಿಗೆ ಕಳೆಯಬಹುದು. ಒಟ್ಟಿಗೆ ಕಳೆಯುವ ಈ ಸ್ವಲ್ಪ ಸಮಯ ಕೂಡ ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.

ಒಟ್ಟಿಗೆ ವ್ಯಾಯಾಮ ಮಾಡುವುದು: ಬೆಳಗಿನ ನಡಿಗೆ, ಯೋಗ ಅಥವಾ ಲಘು ವ್ಯಾಯಾಮವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲದೆ, ದಂಪತಿಗಳು ಒಟ್ಟಿಗೆ ಬೆಳಗಿನ ವ್ಯಾಯಾಮ ಮಾಡುವುದು  ಸಂಬಂಧವನ್ನು ಉಲ್ಲಾಸಗೊಳಿಸುತ್ತದೆ ಮತ್ತು ಈ ಸಮಯವು  ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಒಬ್ಬರಿಗೊಬ್ಬರು ಉಪಹಾರ ತಯಾರಿಸುವುದು: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಅವರ ನೆಚ್ಚಿನ ಉಪಹಾರ ತಯಾರಿಸಿ. ಈ ಸಣ್ಣ ಪ್ರಯತ್ನ ಸಹ ನಿಮ್ಮ ಸಂಬಂಧಕ್ಕೆ ಮಾಧುರ್ಯವನ್ನು ನೀಡುತ್ತದೆ.

ಮೊಬೈಲ್ ಫೋನ್‌ನಿಂದ ದೂರವಿರಿ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುತ್ತಾ ಸಮಯ ಕಳೆಯುವ ಬದಲು ಆ ಸಮಯವನ್ನು ಸಂಗಾತಿಯೊಂದಿಗೆ ಕಳೆಯಿರಿ. ಪರಸ್ಪರ ಮಾತನಾಡಿ. ಇದು ಖಂಡಿತವಾಗಿಯೂ ಪ್ರೀತಿಯನ್ನು ಮತ್ತಷ್ಟು ಬಲಪಡಿಸುತ್ತದೆ.

ಇದನ್ನೂ ಓದಿ: ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಧನ್ಯವಾದ ಹೇಳಲು ಮರೆಯಬೇಡಿ: ಪ್ರತಿದಿನ ಬೆಳಿಗ್ಗೆ, ನಿಮ್ಮ ಸಂಗಾತಿಗೆ ಒಂದು ಥ್ಯಾಂಕ್ಸ್‌ ಹೇಳಿ, ಅವರನ್ನು ಹೊಗಳಿ, ಅವರು ಮಾಡುವ ಸಣ್ಣ ಕೆಲಸಗಳಿಗೂ ಅವರನ್ನು ಶ್ಲಾಘಿಸಿ. ಈ ಅಭ್ಯಾಸವು ನಿಮ್ಮ ಸಂಬಂಧಕ್ಕೆ ಸಕಾರಾತ್ಮಕತೆಯನ್ನು ತರುವುದಲ್ಲದೆ, ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.

ಈ ಅಭ್ಯಾಸಗಳು ನಿಮ್ಮ ದಿನಕ್ಕೆ ಪರಿಪೂರ್ಣ, ಸಕಾರಾತ್ಮಕ ಆರಂಭವನ್ನು ನೀಡುವುದಲ್ಲದೆ, ನಿಮ್ಮ ಬಂಧವನ್ನು ಬಲಪಡಿಸುತ್ತವೆ, ನಿಮ್ಮ ಸಂಬಂಧವನ್ನು ರಿಫ್ರೆಶ್ ಮಾಡುತ್ತವೆ ಮತ್ತು ಜೀವನವನ್ನು ಸುಂದರಗೊಳಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ