ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ‘ಗಂಭೀರ’ ಭೀತಿ
Gautam Gambhir: ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದಾಗ್ಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಅಧಃಪತನದತ್ತ ಸಾಗಿದೆ. ಇದಕ್ಕೆ ಸಾಕ್ಷಿ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ 6ನೇ ಸ್ಥಾನದಲ್ಲಿರುವುದು.

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಆದರೆ ಅದು ಆಟಗಾರರ ನಡುವಣ ಸಮಸ್ಯೆಯಿಂದಾಗಿ ಅಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಬದಲಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನಡೆಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ. 2024ರ ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ನೇಮಿಸಲಾಯಿತು.
ಗಂಭೀರ್ ಅವರ ಕೋಚಿಂಗ್ ಶೈಲಿ ಕಟ್ಟುನಿಟ್ಟು ಎಂಬುದು ಈಗಾಗಲೇ ಆಟಗಾರರಿಗೆ ಮನವರಿಕೆಯಾಗಿದೆ. ಇದುವೇ ಈಗ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿನ ವಾತಾವರಣದ ಬದಲಾವಣೆಗೆ ಕಾರಣವಾಗಿದೆ. ಅದರಲ್ಲೂ ಆಟಗಾರರು ಭಯಭೀತಿಯಲ್ಲೇ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಿಟಿಐ ವರದಿಯ ಪ್ರಕಾರ , ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ, ಟೀಮ್ ಇಂಡಿಯಾ ಆಟಗಾರರು ತಮ್ಮ ಸ್ಥಾನದ ಬಗ್ಗೆ ಹೆಚ್ಚು ಅಸುರಕ್ಷಿತರಾಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ ಈ ಸಮಸ್ಯೆ ಕಂಡುಬಂದಿರಲಿಲ್ಲ.
ದ್ರಾವಿಡ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, ಆಟಗಾರರಿಗೆ ತಮ್ಮ ಪಾತ್ರಗಳ ಬಗ್ಗೆ ಸ್ಪಷ್ಟತೆ ಇತ್ತು. ಅಲ್ಲದೆ ತಮ್ಮನ್ನು ತಾವು ಸಾಬೀತುಪಡಿಸಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದರು. ಆದಾಗ್ಯೂ ಈಗ ಪರಿಸ್ಥಿತಿ ಬದಲಾಗಿದೆ ಮತ್ತು ಹಲವಾರು ಕಾರಣಗಳಿಗಾಗಿ ಅನೇಕ ಆಟಗಾರರು ತಮ್ಮ ಸ್ಥಾನದ ಬಗ್ಗೆ ಚಿಂತಿತರಾಗಿದ್ದಾರೆ.
ಗೌತಮ್ ಗಂಭೀರ್ ಅವರು ಕೋಚ್ ಆದ ಬಳಿಕ ರೋಹಿತ್ ಶರ್ಮಾ ಅವರನ್ನೇ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅತ್ಯುತ್ತಮ ಫಾರ್ಮ್ನಲ್ಲಿದ್ದ ಪ್ರಮುಖ ಆಟಗಾರರನ್ನು ಗಂಭೀರ್ ನಡೆಸಿಕೊಂಡ ರೀತಿಯಿಂದಾಗಿ ಇತರೆ ಆಟಗಾರರಿಗೂ ಕೆಟ್ಟ ಸಂದೇಶ ರವಾನೆಯಾಗಿದೆ. ಅಂದರೆ ಇಲ್ಲಿ ಯಾರೂ ಖಾಯಂ ಅಲ್ಲ ಎಂಬುದನ್ನು ಟೀಮ್ ಇಂಡಿಯಾ ಕೋಚ್ ಪರೋಕ್ಷವಾಗಿ ಸಾರಿದ್ದಾರೆ.
ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸ್ಥಾನಗಳನ್ನು ನಿಗದಿಪಡಿಸಬಾರದು ಎಂದು ಗಂಭೀರ್ ನಂಬುತ್ತಾರೆ. ಹೀಗಾಗಿಯೇ ಆರಂಭಿಕ ಜೋಡಿಯನ್ನು ಹೊರತುಪಡಿಸಿ ಉಳಿದ ಬ್ಯಾಟಿಂಗ್ ಕ್ರಮಾಂಕಗಳನ್ನು ಬದಲಿಸುತ್ತಿರುತ್ತಾರೆ. ಇದರಿಂದ ಆಟಗಾರರಲ್ಲೂ ಅನಿಶ್ಚಿತತೆ ಮನೆ ಮಾಡಿದೆ. ತಂಡದ ಸಂಯೋಜನೆಗಳ ಹೆಸರಿನಲ್ಲಿ ಆಡುವ ಹನ್ನೊಂದರಲ್ಲಿ ಆಗಾಗ್ಗೆ ಬದಲಾವಣೆ ಮಾಡುತ್ತಿರುವುದು ಕೂಡ ಆಟಗಾರರನ್ನು ಚಿಂತೆಗೀಡು ಮಾಡಿದೆ.
ಇದಕ್ಕೆ ತಾಜಾ ಉದಾಹರಣೆ ಶುಭ್ಮನ್ ಗಿಲ್. ಏಷ್ಯಾಕಪ್ ವೇಳೆ ಗಿಲ್ ಅವರನ್ನು ಟಿ20 ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಯಿತು. ಇದರಿಂದ ಸಂಜು ಸ್ಯಾಮ್ಸನ್ ಆರಂಭಿಕನ ಸ್ಥಾನ ಕಳೆದುಕೊಂಡರು. ಆ ಬಳಿಕ ತಂಡದಿಂದಲೇ ಹೊರಬಿದ್ದರು. ಇದೀಗ ಗಿಲ್ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ ಸಂಜು ಸ್ಯಾಮ್ಸನ್ ಮತ್ತೆ ಆರಂಭಿಕರಾಗಿದ್ದಾರೆ.
ಇಂತಹ ಬದಲಾವಣೆಯಿಂದಾಗಿ ಆಟಗಾರರಲ್ಲಿ ಅಸುರಕ್ಷಿತತೆ ಮನೆ ಮಾಡಿದೆ. ಅದರಲ್ಲೂ ಆರಂಭಿಕನಾಗಿ ಆಡುತ್ತಿದ್ದ ಆಟಗಾರರನ್ನು ಏಕಾಏಕಿ ತಂಡದಿಂದ ಕೈ ಬಿಟ್ಟು ಇದೀಗ ಮತ್ತೆ ಆರಂಭಿಕನಾಗಿ ಆಯ್ಕೆ ಮಾಡಿದರೆ ಆತನ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂದಾಜು ಕೂಡ ಟೀಮ್ ಇಂಡಿಯಾ ಕೋಚ್ಗೆ ಇಲ್ಲವಾ ಎಂಬ ಪ್ರಶ್ನೆಯೊಂದುಬ ಹುಟ್ಟಿಕೊಂಡಿದೆ.
ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ, ಡ್ರೆಸ್ಸಿಂಗ್ ರೂಮ್ ಸಂತೋಷ ಮತ್ತು ಆತ್ಮವಿಶ್ವಾಸದಿಂದ ತುಂಬಿತ್ತು. ಆಟಗಾರರು ಹಿಂಜರಿಕೆಯಿಲ್ಲದೆ ಆಡುತ್ತಿದ್ದರು. ಗೌತಮ್ ಗಂಭೀರ್ ಅವಧಿಯಲ್ಲಿ ಎಲ್ಲವೂ ಕಟ್ಟುನಿಟ್ಟಾಗಿದೆ. ಅವರ ಈ ವರ್ತನೆಯು ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ.
ಇತ್ತೀಚೆಗೆ, ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲೇ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ತಂಡದ ನಿರ್ವಹಣೆಯ ಬಗ್ಗೆ ಧ್ವನಿಯೆತ್ತಿದ್ದರು. ಟೀಮ್ ಇಂಡಿಯಾ ಆಟಗಾರರಲ್ಲಿ ” ಭಯ ಮತ್ತು ಅಭದ್ರತೆಯ ವಾತಾವರಣ ” ವನ್ನು ಸೃಷ್ಟಿಸುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು.
ಇಂತಹ ವಾತಾವರಣ ನಿರ್ಮಾಣವಾದರೆ ತಂಡದಲ್ಲಿ ಬಹಳಷ್ಟು ಗೊಂದಲಗಳಾಗುತ್ತದೆ . ಆಟಗಾರರಿಗೆ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಇದೇ ಕಾರಣದಿಂದಾಗಿ ಎಲ್ಲರೂ ಭಯದಿಂದ ಆಡುತ್ತಿದ್ದಾರೆ ಎಂದು ಮೊಹಮ್ಮದ್ ಕೈಫ್ ವಿವರಿಸಿದ್ದರು. ಇದಕ್ಕೆ ಉದಾಹರಣೆಯಾಗಿ, ಸರ್ಫರಾಝ್ ಖಾನ್ ಶತಕ ಗಳಿಸಿದರೂ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ . ಏತನ್ಮಧ್ಯೆ, ಸೌತ್ ಆಫ್ರಿಕಾ ವಿರುದ್ಧ 87 ರನ್ ಗಳಿಸಿದರೂ ಸಾಯಿ ಸುದರ್ಶನ್ ಅವರನ್ನು ಮುಂದಿನ ಪಂದ್ಯದಿಂದ ಕೈಬಿಡಲಾಯಿತು . ಒಬ್ಬ ಆಟಗಾರ 100 ರನ್ ಗಳಿಸಿದ ನಂತರವೂ ಆತ್ಮವಿಶ್ವಾಸವನ್ನು ಗಳಿಸದಿದ್ದರೆ, ಇತರ ಆಟಗಾರರು ಹೇಗೆ ಆತ್ಮವಿಶ್ವಾಸವನ್ನು ಗಳಿಸುತ್ತಾರೆ? ” ಎಂದು ಕೈಫ್ ಪ್ರಶ್ನಿಸಿದ್ದರು.
ಇದೀಗ ಪಿಟಿಐ ವರದಿಯಲ್ಲೂ, ಗೌತಮ್ ಗಂಭೀರ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆಟಗಾರರಲ್ಲಿ ಅಸುರಕ್ಷಿತ ಭಾವನೆ ಮೂಡಿದೆ ತಿಳಿಸಲಾಗಿದೆ. ಅಲ್ಲದೆ ಆಟಗಾರರು ತಮ್ಮ ಸ್ಥಾನಗಳ ಬಗ್ಗೆ ಚಿಂತಿತರಾಗಿದ್ದಾರೆ. ಇಂತಹ ಕಾರಣಗಳಿಂದಾಗಿ ಟೀಮ್ ಇಂಡಿಯಾ ಆಟಗಾರರು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಜೋಶ್ ಟಂಗ್ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..!
ಒಟ್ಟಿನಲ್ಲಿ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಈ ಸಮಸ್ಯೆಗಳನ್ನು ಸರಿದೂಗಿಸಿ ಗೌತಮ್ ಗಂಭೀರ್ ಮತ್ತೊಮ್ಮೆ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದು ಕೊಡಲಿದ್ದಾರಾ ಕಾದು ನೋಡಬೇಕಿದೆ.
Published On - 9:55 am, Sun, 28 December 25
