ಹಾದಿಯೇ ತೋರಿದ ಹಾದಿ | Haadiye Torida Haadi : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಸಮೀಪದ ಕ್ಯಾದಗಿಹೊಂಡದಲ್ಲಿ ವಾಸವಿರುವ ಸೌಮ್ಯ ಅಲ್ಲಿನ ಎಲ್ಲರಿಗೂ ಸೋಮಿ ಅಂತಲೇ ಚಿರಪರಿಚಿತ. ನಲವತ್ತೈದರ ಆಸುಪಾಸಿನ ಸೋಮಿ ಇದುವರೆಗು ಸಾವಿರಕ್ಕೂ ಹೆಚ್ಚು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ‘ನಾನು ಚಿಕ್ಕವಳಿದ್ದಾಗ “ಕಪ್ಪು ಜನ ಕೆಂಪು ನೆರಳು” ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದೆ. ನಂತರ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗ್ತಾ ಇದ್ದೆ. ಆಗಾಗ ಅಮ್ಮ ಹೆರಿಗೆ ಮಾಡಿಸೋಕೆ ಕೂಡ ಹೋಗ್ತಿದ್ಲು. ಆಗ ಅವಳ ಜೊತೆ ಹೋಗ್ತಿದ್ದೆ. ಮಗುವನ್ನು ಹೇಗೆ ಹೆರುತ್ತಾರೆ.. ಮಾಲಿಶ್ ಹೇಗೆ ಮಾಡುತ್ತಾರೆ.. ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದೆ. ಅಮ್ಮ ಬೇಡ ಎಂದರೂ ಹಠ ಮಾಡಿ ನಾನೂ ನೋಡ್ಬೇಕು ಕಲಿಬೇಕು ಅಂತ ಅಲ್ಲಿಯೇ ನಿಲ್ಲುತ್ತಿದ್ದೆ. ನನಗಾಗ ಸುಮಾರು ಹತ್ತು ವರ್ಷ. ನಾನಾಗಲೇ ಹೆರಿಗೆಯಾದವರ ಬಟ್ಟೆ ತೊಳೆಯುತ್ತಿದ್ದೆ. ಮಕ್ಕಳನ್ನು ಶುಚಿಗೊಳಿಸುತ್ತಿದ್ದೆ. ಮಕ್ಕಳಿಗೆ ಎಣ್ಣೆ ಮಾಲಿಶ್ ಮಾಡುವುದು ನನಗೆ ತುಂಬಾ ಖುಷಿ. ಇದರಿಂದ ಅಮ್ಮನೂ ಖುಷಿಯಾದಳು. ಹೀಗೆ ಕೆಲಸ ಕಲಿತೆ’ ಎನ್ನುತ್ತಾರೆ ಸೋಮಿ.
ಜ್ಯೋತಿ. ಎಸ್, ಸಿಟೆಝೆನ್ ಜರ್ನಲಿಸ್ಟ್, (Jyothi S)
(ಹಾದಿ 13)
‘ಚಿಕ್ಕವಳಿದ್ದಾಗ ನನಗೆ ವಿಪರೀತ ಕುತೂಹಲ. ಮಕ್ಕಳ ಹುಟ್ಟು, ಪಾಲನೆ ಪೋಷಣೆ ಎಲ್ಲ ಹೇಗೆ ಆಗುತ್ತೆ ಅಂತ ಒಮ್ಮೆ ಯೋಚಿಸುತ್ತಿದ್ದೆ. ಅಮ್ಮ ಎಲ್ಲವನ್ನು ನನಗೆ ಅರ್ಥ ಆಗುವ ರೀತಿಯಲ್ಲಿ ಬಿಡಿಸಿ ಹೇಳಿದಳು. ಒಂದು ದಿನ ಅಮ್ಮ ಎಲ್ಲೋ ಹೋಗಿದ್ಲು. ಒಂದು ಹೆಂಗಸಿಗೆ ಹೆರಿಗೆ ನೋವು ಕಾಣಿಸಿಕೊಳ್ತು. ಅವರ ಮನೆಯಲ್ಲಿ ಅವರ ಅತ್ತಿಗೆ ಬಿಟ್ಟು ಬೇರೆ ಯಾರೂ ಇರಲಿಲ್ಲ. ಅವರಿಗೆ ಹೆರಿಗೆ ಮಾಡಿಸುವ ಬಗ್ಗೆ ಏನೂ ಗೊತ್ತಿಲ್ಲ. ನನಗೂ ಏನೂ ಗೊತ್ತಿಲ್ಲ. ಆ ಹೆಂಗಸು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದುದನ್ನ ನನಗೆ ನೋಡಲಾಗಲಿಲ್ಲ. ಅಮ್ಮ ಹೆರಿಗೆ ಮಾಡಿಸುವುದನ್ನು ನಾನು ನೋಡಿದ್ದೆನಲ್ಲ ಮತ್ತು ಈಗ ಅನಿವಾರ್ಯತೆಯಿತ್ತಲ್ಲವೇ ಹಾಗಾಗಿ ಇದೊಮ್ಮೆ ಪ್ರಯತ್ನ ಮಾಡೋಣ ಎಂದು, ಸೊಂಟಕ್ಕೆ ಟವೆಲ್ ಒಂದನ್ನು ಕಟ್ಟಿಕೊಂಡು ಸ್ವಲ್ಪ ಹೆದರಿಕೆಯಿಂದಲೇ ಮುಂದೆ ಹೋದೆ. ಅವಳ ಒದ್ದಾಟದಲ್ಲಿಯೇ ಕಾಲನ್ನು ಅಗಲ ಮಾಡಿಸಿ ಬೆರಳಿನಿಂದ ಮಗುವಿನ ತಲೆಯನ್ನು ಸ್ವಲ್ಪಸ್ವಲ್ಪವೆ ಎಳೆದುಕೊಂಡು ತಲೆಯನ್ನು ಮುಂದೆ ತೆಗೆದುಕೊಂಡೆ. ಅವಳಿಗೆ ಫೋರ್ಸ್ ಕೊಡು ಅಂತ ಹೇಳಿದೆ, ಕೊಟ್ಟರು ಒಂದೇ ಸಲಕ್ಕೆ ಮಗು ಪೂರ್ತಿ ಬಂತು. ಹೊಸದೊಂದು ಬ್ಲೇಡ್ ತರಿಸಿ, ಬಿಸಿ ನೀರಲ್ಲಿ ಕುದಿಸಿ ನಾಲ್ಕು ಬೆರಳಿನಷ್ಟು ಉದ್ದ ಹೊಕ್ಕಳ ಬಳ್ಳಿಯನ್ನು ಬಿಟ್ಟು ಕತ್ತರಿಸಿದೆ. ನಂತರ ಹೊಕ್ಕಳಬಳ್ಳಿಯನ್ನು ರಕ್ತ ಬರದಂತೆ ದಾರದಿಂದ ಕಟ್ಟಿದೆ. ಎಲ್ಲವೂ ಸರಿಯಾಗಿಯೇ ಆಯಿತು. ನಂತರ ಸೊಂಟ ಬಿಗಿದು ಮನೆಗೆ ಬಂದೆ. ಇದು ನಾನು ಮಾಡಿಸಿದ ಮೊದಲ ಹೆರಿಗೆಯ ಅನುಭವ. ನನಗಂತೂ ಆಗ ಹೇಳತೀರದ ಖುಷಿ.
ನನ್ನ ಅಮ್ಮ ಲಕ್ಷ್ಮಿ ಅಪ್ಪ ನಾಗೇಶ್. ನನ್ನ ತಂದೆ ತಾಯಿಗೆ ಐದು ಹೆಣ್ಣು, ಎರಡು ಗಂಡುಮಕ್ಕಳು. ಹೇಳತೀರದ ಬಡತನ. ನಾನು ಮೂರನೇ ತರಗತಿವರೆಗೆ ಓದಿದ್ದೇನೆ. ನಂತರ ದನ ಕಾಯಲು ಹೋಗುತ್ತಿದ್ದೆ. ಭತ್ತ ಕುಟ್ಟಬೇಕಿತ್ತು. ಅಮ್ಮ ಒಂದು ದೊಡ್ಡ ಪಾತ್ರೆ ತುಂಬ ಗಂಜಿ ಮಾಡಿ ಇಡ್ತಿದ್ರು. ಹಸಿವಾದಾಗ ಹೊಟ್ಟೆ ತುಂಬ ಅದನ್ನು ಕುಡಿದು ಮತ್ತೆ ಕೆಲಸಕ್ಕೆ ಮರಳುತ್ತಿದ್ದೆವು. ನನಗೆ ಹನ್ನೆರಡು ವರ್ಷಕ್ಕೆ ಮದುವೆಯಾಯ್ತು. ಸಾಂಸಾರಿಕ ಜೀವನ ಅಷ್ಟು ಸುಖವಾಗಿರಲಿಲ್ಲ. ಮದುವೆಯಾಗಿ ಹದಿಮೂರು ವರ್ಷದ ನಂತರ ಒಂದು ಗಂಡು ಮಗು ಹುಟ್ಟಿತು. ಗಂಡನ ಮನೆಯಲ್ಲಿ ಸುಖ ಎನ್ನುವುದು ಮರೀಚಿಕೆಯಾಗಿತ್ತು. ಒಪ್ಪತ್ತಿನ ಊಟಕ್ಕೂ ಕಷ್ಟ. ಗಂಡ ಕುಡಿದು ಬಂದು ಹೊಡೆಯುತ್ತಿದ್ದರು. ಹೊರಗೆಲ್ಲೂ ಹೋಗುವ ಹಾಗಿಲ್ಲ. ಹೊಸಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ. ಗಂಡನ ಕಾಟ ತಾಳಲಾರದೆ ಎಷ್ಟೋ ಸಲ ಬೆಟ್ಟದಲ್ಲಿ ಕಾಲ ಕಳೆದಿದ್ದೇನೆ. ಮೂರು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ. ಕೊನೆಗೆ ಒಂದು ಗಟ್ಟಿ ನಿರ್ಧಾರ ಮಾಡಿದೆ. ನಮ್ಮ ಸಲುವಾಗಿ ನಾನು ಬದುಕಬೇಕು ಮಕ್ಕಳಿದ್ದಾರೆ ಅಂತ ತೀರ್ಮಾನ ಮಾಡಿ ಗಟ್ಟಿಯಾಗಿ ನಿಂತೆ.
ಗಂಡ ನನ್ನ ಹೊಡೆಯಲು ಬಂದರೆ ನಾನು ತಡೆಯುತ್ತಿದ್ದೆ. ಒಮ್ಮೆ ಜಾಂಡೀಸ್ ಬಂದು ತೀರಿಕೊಂಡರು. ಇಂದಿಗೆ ಅವರು ತೀರಿಕೊಂಡು ಸುಮಾರು 15 ವರ್ಷಗಳು. ಒಮ್ಮೆ ಭಟ್ಟರೊಬ್ಬರ ಮನೆಯಲ್ಲಿ ಬಾವಿ ನೀರು ಸೇದುವಾಗ ಒಂದು ಹೆಂಗಸಿಗೆ ಹೆರಿಗೆ ನೋವು ಬಂದಿತ್ತು ಅವಳನ್ನು ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದೆ. ಹೀಗೆ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದೇನೆ ಎಲ್ಲಾ ಮಕ್ಕಳು ಚೆನ್ನಾಗಿದ್ದಾರೆ. ನಂತರ ಸ್ವಚ್ಛತೆ, ಮಗುವಿನ ಲಾಲನೆ ಪಾಲನೆ, ಹೆರಿಗೆ ಮಾಡಿಸುವ ತರಬೇತಿಯನ್ನು ಯಲ್ಲಾಪುರದಲ್ಲಿ ಮಾಡಿದೆ.
ಇದನ್ನೂ ಓದಿ : Siddi Community: ಹಾದಿಯೇ ತೋರಿದ ಹಾದಿ; ಈ ಅಡವಿಜ್ಞಾನಿಯನ್ನು ಸರ್ಕಾರ ಯಾಕೆ ಗಮನಿಸುತ್ತಿಲ್ಲ?
ಆಗೆಲ್ಲ ಒಂದು ಹೆರಿಗೆ ಮಾಡಿಸಿದರೆ, ಒಂದು ಊಟ ಸಿಗುವುದು ಕಷ್ಟ. 15, 20 ರೂಪಾಯಿ ಕೂಡ ಕೊಡಲು ಮೇಲೆ ಕೆಳಗೆ ನೋಡ್ತಿದ್ರು. ಹೇಗೋ ಆ ದಿನದ ಹಸಿವು ಕಳೆಯುತ್ತಿತ್ತು. ಮತ್ತೆ ಊಟ ಬೇಕು ಅಂದ್ರೆ ಬೇರೆ ಎಲ್ಲಾದರೂ ಹೋಗಿ ಕೆಲಸ ಮಾಡಬೇಕು. ಹೀಗಿತ್ತು ಆಗಿನ ನನ್ನ ಪರಿಸ್ಥಿತಿ. ಆಗೆಲ್ಲ ಹಳ್ಳಿಕಡೆ ಆಶಾಕಾರ್ಯಕರ್ತರು, ದವಾಖಾನೆ, ಡಾಕ್ಟರ್ ಯಾರೂ ಸಿಗುತ್ತಿರಲಿಲ್ಲ. ನಾನು ಅಲ್ಲಲ್ಲಿ ಹೆರಿಗೆ ಮಾಡಿಸಲು ಹೋಗುತ್ತಿದ್ದೆ. ಅರೆಬೈಲ್, ಶೇವಕಾರ್, ಕೈಗಡಿ, ಅತ್ತಿ ಸವಲು, ಪಣಸುಗೋಳೆ, ಲಬ್ಗೊಳಿ, ಕೊಪ್ಪ, ನೆಲಗಿನ ಜೆಡ್ಡಿ ಇತರೆ ಸುತ್ತ ಮುತ್ತಲಿನ ಎಲ್ಲಾ ಊರುಗಳಿಗೂ ನನ್ನ ಪರಿಚಯವಿತ್ತು. ಹೆರಿಗೆ ಮಾಡಿಸಲು ಕೆಲವೊಮ್ಮೆ ಕಾಲ್ನಡಿಗೆಯಲ್ಲೇ ನಾಲ್ಕೈದು ಮೈಲಿ ಹೋಗುತ್ತಿದ್ದೆ. ಕೆಲವು ಸಲ ಗಾಡಿ ತಂದು ಮಧ್ಯರಾತ್ರಿ ಎರಡು, ಮೂರು ಗಂಟೆಗೆಲ್ಲ ನನ್ನ ಏಳಿಸಿ ಹೆರಿಗೆ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ರಾತ್ರಿ ಹೆರಿಗೆ ಮಾಡಿಸಿ ಬೆಳಗ್ಗೆ ಮನೆಗೆ ಬಂದರೆ ನನ್ನ ಗಂಡ ನನ್ನನ್ನು ಮನೆ ಒಳಗೆ ಸೇರಿಸುತ್ತಿರಲಿಲ್ಲ. ಆದರೆ, ಎಲ್ಲರೂ ಹೆರಿಗೆ ಮಾಡಿಸಲು ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದರು.
ಕೆಲವೊಮ್ಮೆ ಹೆರಿಗೆ ನೋವಲ್ಲದೆಯೂ ನೋವು ಬರುತ್ತದೆ. ಆಗ ಕುಡಿಯಲು ಜೀರಿಗೆ ನೀರು ಚೆನ್ನಾಗಿ ಕುದಿಸಿ ಕೊಟ್ಟು ನೋಡುತ್ತಿದ್ದೆ. ಹೆರಿಗೆ ನೋವಾದರೆ ಬಿಟ್ಟುಬಿಟ್ಟು ನೋವು ಬರುತ್ತದೆ. ಮೂತ್ರ ತುಂಬ ಹೋಗುತ್ತದೆ. ಮೂತ್ರ ದಂಡೆ ಒಡೆದ ಕೂಡಲೆ ಹೆರಿಗೆಗೆ ತಯಾರಿ ಆದಂತೆ. ಪದೇಪದೆ ನೋವು ಬರಲಿಲ್ಲವೆಂದರೆ ದೇಹದ ಉಷ್ಣತೆ ಹೆಚ್ಚಾಗಿಯೂ ಒಮ್ಮೊಮ್ಮೆ ಹಾಗಾಗಿರುತ್ತದೆ. ಕೆಲವೊಮ್ಮೆ ಮಗುವಿನ ತಲೆ ಬಂದರೆ, ಕೆಲವೊಮ್ಮೆ ಎರಡೂ ಕಾಲು ಬರುತ್ತವೆ. ಒಂದೊಂದು ಹೆರಿಗೆಯನ್ನು ಮಾಡಿಸಿ ಒಂದೊಂದು ಜೀವ ಉಳಿಸುವಾಗಲೂ ತುಂಬ ಕಷ್ಟಪಟ್ಟಿದ್ದೇನೆ. ಸೋಮಿಯಂತೆ ಹೆರಿಗೆ ಮಾಡಿಸುವವರು, ಬಾಣಂತನ ಚೆನ್ನಾಗಿ ಮಾಡುವವರು ಯಾರಿಲ್ಲ ಅಂತ ಈಗ ಅವರೆಲ್ಲರೂ ನೆನಪಿಸಿಕೊಳ್ಳುತ್ತಾರೆ. ಬೆಳಗ್ಗೆ 4:30ಕ್ಕೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಮನೆಗೆಲಸ ಮುಗಿಸಿ ದೇವರ ಪೂಜೆ ಮಾಡಿ ಕೆಲಸಕ್ಕೆ ಹೊರಡುತ್ತೇನೆ. ಅಡಿಕೆ ಸುಲಿಯುವುದು, ನಾಟಿ ಮಾಡುವುದು, ಗದ್ದೆ ಕೊಯ್ಯುವುದು ಎಲ್ಲಾ ಕೆಲಸಗಳನ್ನು ಮಾಡುತ್ತೇನೆ.
ಈಗ ನನ್ನ ಇಬ್ಬರು ಗಂಡು ಮಕ್ಕಳಿಗೂ ಮದುವೆ ಮಾಡಿದ್ದೇನೆ. ಅವರವರ ಪಾಡಿಗೆ ಅವರು ಚೆನ್ನಾಗಿದ್ದಾರೆ. ಎಷ್ಟು ದಿನ ನನ್ನಿಂದಾಗತ್ತೋ ಅಲ್ಲಿಯವರೆಗೆ ನಾನು ದುಡಿದು ತಿನ್ನುತ್ತೇನೆ. ಈಗಲೂ ಯಾರಾದರೂ ಹೆರಿಗೆ ಮಾಡಿಸಲು ಕರೆದರೆ ನಾನು ತುಂಬ ಖುಷಿಯಿಂದ ಹೋಗುತ್ತೇನೆ. ನಾನು ಕಲಿತ ಕೆಲಸ ಇದು. ಹಸಿದಾಗ ಅನ್ನವಿಟ್ಟಿದೆ ಒಳ್ಳೆಯ ಹೆಸರು ಕೊಟ್ಟಿದೆ. ನನ್ನ ಬದುಕು, ಜೀವನ ಎಲ್ಲ ಇದರಿಂದಲೇ.
ಮುಂದಿನ ಹಾದಿ : 21.4.2022
ಪ್ರತಿಕ್ರಿಯೆಗಾಗಿ : tv9kannadadigital@gmail.com
ಹಿಂದಿನ ಹಾದಿ : Teacher: ಹಾದಿಯೇ ತೋರಿದ ಹಾದಿ; ಆರು ಮಕ್ಕಳ ಶಿಕ್ಷಣಕ್ಕಾಗಿ ದಿನವೂ 120 ಕಿ.ಮೀ ಪ್ರಯಾಣಿಸುವ ಶಿಕ್ಷಕ
Published On - 2:13 pm, Thu, 7 April 22