ಬೋಟ್‌ನಲ್ಲಿ ಉಸಿರುಗಟ್ಟಿ ಮೂವರ ಸಾವು: ಮೀನುಗಾರರ ಪಾಲಿಗೆ ಮರಣ ಪಾಶವಾಯಿತೇ ಚಮನ್ ಮೀನು?

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಬಂದರಿನಲ್ಲಿ ನಿನ್ನೆ ಆಘಾತಕಾರಿ ದುರಂತ ಸಂಭವಿಸಿದೆ. ಬೋಟ್‌ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ. ಕೊಳೆತ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾದ ವಿಷಾನಿಲದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ಕುಟುಂಬಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ತಲಾ 10 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದ್ದಾರೆ.

ಬೋಟ್‌ನಲ್ಲಿ ಉಸಿರುಗಟ್ಟಿ ಮೂವರ ಸಾವು: ಮೀನುಗಾರರ ಪಾಲಿಗೆ ಮರಣ ಪಾಶವಾಯಿತೇ ಚಮನ್ ಮೀನು?
ಮೀನುಗಾರರ ದುರಂತ ಸಾವು
Edited By:

Updated on: Oct 28, 2026 | 6:29 PM

ಮುಖ್ಯಾಂಶಗಳು

  • ಮೀನುಗಾರಿಕೆ ಬೋಟ್​ನಲ್ಲಿ ಉಸಿರುಗಟ್ಟಿ ಮೂವರ ಸಾವು ಪ್ರಕರಣ
  • ಮೃತ ಮೀನುಗಾರರ ಮನೆಗೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ
  • ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರದ ಚೆಕ್ ವಿತರಣೆ

ಕಾರವಾರ, ಅಕ್ಟೋಬರ್​​ 28: ಮೀನು ಹಿಡಿದು ಬದುಕು ಕಟ್ಟಿಕೊಳ್ಳಲು ಸಮುದ್ರಕ್ಕಿಳಿದಿದ್ದ ಮೀನುಗಾರರಿಗೆ, ಅದೇ ಮೀನಿನ ತ್ಯಾಜ್ಯ ಮರಣ ಪಾಶವಾಗಿ ಪರಿಣಮಿಸಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ತದಡಿ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಳೆತ ಮೀನಿನ ತ್ಯಾಜ್ಯದಿಂದ ವಿಷಕಾರಿ ಅನಿಲ ಸೃಷ್ಟಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೀನುಗಾರರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

ಮೀನಿನ ತ್ಯಾಜ್ಯದಿಂದ ವಿಷಕಾರಿ ಅನಿಲ ಉತ್ಪತ್ತಿ ಶಂಕೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಮೀನುಗಾರಿಕಾ ಬಂದರಿನಲ್ಲಿ ನಿನ್ನೆ ನಡೆದ ದುರಂತ ಇಡೀ ಮೀನುಗಾರಿಕಾ ಸಮುದಾಯವನ್ನೇ ಬೆಚ್ಚಿಬೀಳಿಸಿದೆ. ಮೀನುಗಾರಿಕೆ ಮುಗಿಸಿ ಬಂದಿದ್ದ ಕುಚೈಮಾ ಬೋಟ್‌ನಿಂದ ಚಮನ್ ಜಾತಿಯ ಮೀನುಗಳನ್ನು ಇಳಿಸಲಾಗಿದೆ. ಬಳಿಕ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸಲು ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ಉಸಿರಾಟದ ತೊಂದರೆಯಿಂದ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಳೆತ ಮೀನಿನ ತ್ಯಾಜ್ಯದಿಂದ ವಿಷಕಾರಿ ಅನಿಲ ಉತ್ಪತ್ತಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಗೋಕರ್ಣದಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ಸಾವು, ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಹೆದರಿ ಪ್ರಾಣ ಕಳೆದುಕೊಂಡ ವ್ಯಕ್ತಿ

ದುರಂತದಲ್ಲಿ ಓರ್ವ ಕಾರ್ಮಿಕ ಅಸ್ವಸ್ಥಗೊಂಡಿದ್ದು, ವೈದ್ಯರ ತುರ್ತು ಚಿಕಿತ್ಸೆಯಿಂದ ಬದುಕುಳಿದಿದ್ದಾರೆ. ಸದ್ಯ ದುರಂತಕ್ಕೆ ಕಾರಣವಾದ ಬೋಟ್​ ಅನ್ನು ಬಂದರಿನಲ್ಲಿ ಲಂಗರು ಹಾಕಿದ್ದು, ಅದರೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾರ್ಮಿಕರ ಚಪ್ಪಲಿಗಳು, ದುಡಿದು ಬದುಕಬೇಕಿದ್ದವರ ದುರಂತ ಅಂತ್ಯಕ್ಕೆ ಮೌನ ಸಾಕ್ಷಿಯಾಗಿದೆ.

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಗಳು  

ಇನ್ನು ಇತ್ತ ಕುಟುಂಬಸ್ಥರ ನೋವು ಹೇಳತೀರದು. ದುಡಿಯುವ ಕೈಗಳೇ ಕಣ್ಮುಂದೆ ಇಲ್ಲವಾದಾಗ ಅವರ ಬದುಕಿನ ಭರವಸೆಯೇ ಕಳೆದುಹೋದಂತಾಗಿದೆ. ತದಡಿ ಬಂದರಿನ ದುರಂತದಲ್ಲಿ ಮೃತಪಟ್ಟ ನೌಶಾದ್, ಅಮೀನ್ ಹಾಗೂ ಅಮನ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ನಡುವೆ ಮೀನುಗಾರಿಕಾ ಸಚಿವ ಬಸವಂತಪ್ಪ ಕುಮಟಾಕ್ಕೆ ಆಗಮಿಸಿ ಮೃತ ಮೂವರು ಮೀನುಗಾರರ ಮನೆಗಳಿಗೆ ಭೇಟಿ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ

ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು, ಮೀನುಗಾರಿಕಾ ಇಲಾಖೆಯ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದ್ದಾರೆ. ಮೂರು ಜೀವಗಳನ್ನು ಬಲಿ ಪಡೆದ ಈ ದುರಂತಕ್ಕೆ ನಿಖರ ಕಾರಣವೇನು, ಮುಚ್ಚಿದ ಕೋಲ್ಡ್ ಸ್ಟೋರೇಜ್‌ನಲ್ಲಿ ವಿಷಕಾರಿ ಅನಿಲ ಸೃಷ್ಟಿಯಾಗಲು ಕಾರಣವೇನು, ಬೋಟ್ ಕಾರ್ಯಾಚರಣೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೆ? ಈ ಎಲ್ಲದರ ಬಗ್ಗೆ ತನಿಖೆಗೆ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!

ಮೃತರ ಮನೆಗಳಿಗೆ ಭೇಟಿ ಬಳಿಕ ಸಚಿವ ಬಸವಂತಪ್ಪ ತದಡಿ ಮೀನುಗಾರಿಕಾ ಬಂದರಿಗೂ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್ ಅಧಿಕಾರಿಗಳ ತಂಡ ಬೋಟ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಮೀನಿನ ತ್ಯಾಜ್ಯದ ನೀರಿನ ಮಾದರಿಯನ್ನು ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಮೀನು ಹಿಡಿದು ಬದುಕುತ್ತಿದ್ದವರ ಪಾಲಿಗೆ ಅದೇ ಮೀನಿನ ತ್ಯಾಜ್ಯ ಮರಣ ಪಾಶವಾಗಿರುವುದು ದುರಂತವೇ ಸರಿ.

Three Fishermen Die Of Suspected Suffocation Aboard Boat At Tadadi Port

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:28 pm, Wed, 28 October 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us