ಉತ್ತರ ಕನ್ನಡ, ಜ.06: ಭಟ್ಕಳದಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯದ ಮಕ್ಕಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಡಿಜಿಟಲ್ನಲ್ಲಿ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಉತ್ತರ ಕನ್ನಡ (Uttara Kannada) ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಫಕೀರಪ್ಪ ಪೂಜಾರ ಅವರು ಸ್ಥಳಕ್ಕೆ ಬೇಟಿ ನೀಡಿ, ಘಟನೆಗೆ ಕಾರಣರಾದ 3 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ಈಗಾಗಲೇ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ ವಸತಿ ನಿಲಯದ ವಾರ್ಡನ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮತ್ತೆ ಇಂತಹ ಘಟನೆ ನಡೆಸದಂತೆ ವಿದ್ಯಾರ್ಥಿಗಳಿಗೆ ಖಡಕ್ ಸೂಚನೆ ಕೂಡ ನೀಡಿದ್ದು, ಹಾಸ್ಟೆಲ್‌ಗೆ ಹೆಚ್ಚು ಗಸ್ತು ಹಾಕುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದರು.
2023 ರ ಡಿಸೆಂಬರ್ 31ರಂದು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಗುಂಪೊಂದು ಕಂಠಪೂರ್ತಿ ಕುಡಿದು ಹೋಗುತ್ತಿದ್ದ ಕುಡುಕರಿಗೆ ಚುಡಾಯಿಸಿತ್ತು. ಇದರಿಂದ ರೊಚ್ಚಿಗೆದ್ದ ಕುಡುಕರು, ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದ ನಿಲಯದ ವಿದ್ಯಾರ್ಥಿಗಳೆಲ್ಲ ಸೇರಿ ಪ್ರಶ್ನಿಸಲು ಹೋಗಿದ್ದಾಗ, ಕೊಪಗೊಂಡ ಕುಡುಕರು ತಮ್ಮ ಸ್ನೇಹಿತರನ್ನೆಲ್ಲ ಕರೆಸಿ ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆದಿದ್ದರು.
ಇದನ್ನೂ ಓದಿ:ಕುಡುಕರನ್ನು ಚುಡಾಯಿಸಿ ಅವಾಂತರ ಮಾಡಿಕೊಂಡ ವಿದ್ಯಾರ್ಥಿಗಳು; ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ಹಲ್ಲೆ, ಇಬ್ಬರು ಅರೆಸ್ಟ್
ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದೊಣ್ಣೆ, ಬ್ಯಾಟ್ನಿಂದ ಹಲ್ಲೆ ನಡೆಸಿದ್ದರು. ಈ ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದಷ್ಟೇ ಅಲ್ಲ, ವಿದ್ಯಾರ್ಥಿ ನಿಲಯದ ಒಳಗಿನ ವಸ್ತುಗಳನ್ನು ಕೂಡ ಪುಡಿ ಮಾಡಲು ಯತ್ನಿಸಿದ್ದರು. ಈ ಘಟನೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನವೀದ್ ಎಂಬಾತನಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಘಟನೆಗೆ ಕಾರಣರಾದ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sat, 6 January 24