ಉತ್ತರ ಕನ್ನಡ, ಜು.16: ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಅದರಲ್ಲೂ ಉತ್ತರ ಕನ್ನಡ (Uttara kannada) ಜಿಲ್ಲೆಯಲ್ಲಿ ಕಳೆದ ಎರಡು ದಿವಸಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಹಲವು ಜನರು ಜೀವವನ್ನೂ ಕಳೆದುಕೊಂಡಿದ್ದಾರೆ. ಅಲ್ಲದೇ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿರುವುದರಿಂದ ತೆರವು ಕಾರ್ಯ ನಡೆಯುತ್ತಿದೆ. ಈ ಹಿನ್ನಲೆ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಪರ್ಯಾಯ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.
1. ಯಲ್ಲಾಪುರದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಬಾಳೆಗುಳಿ ಕ್ರಾಸದಿಂದ ಹೊಸ ಕಂಬ ಹಿಲ್ಲೂರು- ಮಾದನಗೇರಿ ಕ್ರಾಸ್-ಕುಮಟಾ ಮುಖಾಂತರ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ.
2. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ- ಮಾದನಗೇರಿ ಕ್ರಾಸ್‌ದಿಂದ ಹಿಲ್ಲೂರು ಹೊಸಕಂಬ ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡ: ಭಾರಿ ಮಳೆಯಿಂದ ಗುಡ್ಡ ಕುಸಿದು 7 ಜನ ದುರ್ಮರಣ
ಇನ್ನು ಶಿರಸಿ-ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಅತಿಯಾಗಿ ಮಳೆ ಬೀಳುತ್ತಿರುವುದರಿಂದ ಮಣ್ಣನ್ನು ತೆರವು ಮಾಡಿದಷ್ಟು ಮತ್ತೆ ಗುಡ್ಡ ಕುಸಿಯುತ್ತಿದೆ. ಮಳೆ ಕಡಿಮೆಯಾಗದೆ ಇದ್ದಲ್ಲಿ ಮತ್ತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಕುಮಟಾ-ಶಿರಸಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.
1. ಶಿರಸಿಯಿಂದ ಕುಮಟಾಕ್ಕೆ ಹೋಗುವ ವಾಹನಗಳಿಗೆ ಯಲ್ಲಾಪುರ-ಹೊಸಕಂಬಿ ಹಿಲ್ಲೂರು ಮಾದನಗೇರಿ ಕ್ರಾಸ್‌ದಿಂದ ಕುಮಟಾಕ್ಕೆ ಸಂಚರಿಸಬಹುದಾಗಿದೆ.
2. ಶಿರಸಿಯಿಂದ ಕಾರವಾರಕ್ಕೆ ಹೋಗುವ ವಾಹನಗಳಿಗೆ ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.
3 ಭಟ್ಕಳದಿಂದ ಶಿರಸಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಕುಮಟಾ- ಮಾದನಗೇರಿ ಕ್ರಾಸ್‌ದಿಂದ ಹಿಲ್ಲೂರು-ಹೊಸಕಂಬ ಯಲ್ಲಾಪುರ ಮುಖಾಂತರ ಶಿರಸಿಗೆ ಪ್ರಯಾಣಿಸಬಹುದಾಗಿದೆ.
ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಜೊತೆಗೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಸಹಾಯ ಮಾಡಲಾಗುತ್ತೆ ಎಂದರು. ಐಆರ್ಬಿಯವರಿಗೆ ಎಷ್ಟೇ ಹೇಳಿದ್ರೂ ನಮ್ಮ ಮಾತು ಕೇಳಲಿಲ್ಲ. ಕೊನೆಗೆ ನಮ್ಮ ಜನರ ಪ್ರಾಣವನ್ನ ಕಿತ್ತುಕೊಂಡರು, ಇನ್ನಾದರೂ ಎಚ್ಚೆತ್ಕೊಂಡು ಕೆಲಸ ಮಾಡಲಿ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 pm, Tue, 16 July 24