ಉತ್ತರ ಕನ್ನಡ ಜಿಲ್ಲೆಯ ಈ ಹತ್ತು ಗ್ರಾಮಗಳಿಗಿಲ್ಲ ಬಸ್ ಸಂಪರ್ಕ! ದಟ್ಟ ಕಾಡಿನಲ್ಲಿ ಪ್ರಾಣ ಭಯದಲ್ಲೇ ಶಾಲೆಗೆ ತೆರಳುವ ಮಕ್ಕಳು

| Updated By: Ganapathi Sharma

Updated on: Oct 22, 2024 | 11:30 AM

ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಬೇಕೆಂದು ಸರ್ಕಾರ ಕೊಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುಮಾರು ಹತ್ತು ಹಳ್ಳಿಯ ವಿದ್ಯಾರ್ಥಿಗಳು ಪ್ರಾಣ ಭಯದಲ್ಲೇ ಶಾಲೆಗೆ ತೆರಳುವಂಥ ಪರಿಸ್ಥಿತಿ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಹುಲಿ, ಕರಡಿ ನೆಲೆಸಿರುವ ದಟ್ಟ ಕಾಡಿನ ಮಧ್ಯೆ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುವಂತಾಗಿದೆ. ಕಾರಣ ಈ ಗ್ರಾಮಗಳಿಗೆ ಬಸ್ ಸಂಪರ್ಕ ಇಲ್ಲದಿರುವುದು.

ಉತ್ತರ ಕನ್ನಡ ಜಿಲ್ಲೆಯ ಈ ಹತ್ತು ಗ್ರಾಮಗಳಿಗಿಲ್ಲ ಬಸ್ ಸಂಪರ್ಕ! ದಟ್ಟ ಕಾಡಿನಲ್ಲಿ ಪ್ರಾಣ ಭಯದಲ್ಲೇ ಶಾಲೆಗೆ ತೆರಳುವ ಮಕ್ಕಳು
ದಟ್ಟ ಅರಣ್ಯದ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು
Follow us on

ಕಾರವಾರ, ಅಕ್ಟೋಬರ್ 22: ‘ಸಿಎಂ ಸಿದ್ಧರಾಮಯ್ಯ ಸರ್ ನಮಗೆ ಬಸ್ ಕಳುಹಿಸಿ, ನಾವು ಶಾಲೆಗೆ ಹೋಗಬೆಕು’. ಇದು ಉತ್ತರ ಕನ್ನಡ ಜಿಲ್ಲೆಯ ಹತ್ತು ಗ್ರಾಮಗಳ ಮುಗ್ಧ ಮಕ್ಕಳ ಮನವಿ. ದಟ್ಟ ಕಾಡಿನ ಮಧ್ಯೆ ಚಿಕ್ಕ ಮಕ್ಕಳು ನಡೆದುಕೊಂಡು ಶಾಲೆಗ ಹೋಗುತ್ತಿರುವುದನ್ನು ನೋಡಿದರೆ, ಎಂತಹವರಿಗೂ ಮರುಕ ಹುಟ್ಟುತ್ತದೆ. ಜತೆಗೆ, ಹತ್ತಾರು ಪ್ರಶ್ನೆಗಳೂ ಉದ್ಭವಿಸುತ್ತವೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಡಿನ ಮಧ್ಯದಲ್ಲಿರುವ ಚಿಕ್ಕ ಚಿಕ್ಕ ಹತ್ತು ಗ್ರಾಮಗಳಲ್ಲಿ ಕೇವಲ ಐದನೇ ತರಗತಿಯವರೆಗೆ ಮಾತ್ರ ಶಾಲಾ ತರಗತಿಗಳು ಇದ್ದು, ತಾಲೂಕಿನಲ್ಲಿ ಕೇವಲ ನಾಲ್ಕು ಕಡೆ ಮಾತ್ರ ಹೈಸ್ಕೂಲ್ ಇದೆ. ಹಾಗಾಗಿ ಐದನೇ ತರಗತಿ ವರೆಗೆ ತಮ್ಮ ಹಳ್ಳಿಯಲ್ಲಿ ಓದಿದ್ದ ಪುಟ್ಟ ವಿದ್ಯಾರ್ಥಿಗಳು, ಆರನೇ ತರಗತಿಯ ನಂತರದ ವಿದ್ಯಾಭ್ಯಾಸಕ್ಕಾಗಿ ಹತ್ತಾರು ಕಿಮೀ ದೂರದಲ್ಲಿರುವ ಹೈಸ್ಕೂಲ್​ಗೆ ಹೋಗಬೇಕು.

ಹತ್ತು ಕಿಮೀ ಸಂಚರಿಸಲು ಗ್ರಾಮಗಳಿಂದ ಬಸ್ ವ್ಯವಸ್ಥೆ ಇಲ್ಲದ ಕಾರಣ ದಟ್ಟ ಕಾಡಿನ ಮಧ್ಯೆ ನಡೆದುಕೊಂಡೇ ಹೋಗಬೇಕಾಗುತ್ತದೆ.

ಈ ಗ್ರಾಮಗಳಿಗಿಲ್ಲ ಬಸ್ ಸೌಕರ್ಯ

ಜೋಯಿಡಾ ತಾಲೂಕಿನ ಕೂಡಲಗಾಂವ, ಮಾಳಂಬಾ, ಹಂಸೆದ, ಗವಳಿವಾಡಾ, ಪೊಲಿಮಾಳ, ಸಿಂಗಗಾವವಾಡಾ, ದುರ್ಗಿ, ಕಸಾರವಾಡಿ ಕಮ್ರಾಳ ಹಾಗೂ ತಿಂಬೊಳಿ ಹೀಗೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಉತ್ತಮ ರಸ್ತೆಗಳಿದ್ದರೂ ಸಹಿತ ಇದುವರೆಗೂ ಕೆಎಸ್​​ಆರ್​​​ಟಿಸಿ ಬಸ್ ಸೌಕರ್ಯ ಇಲ್ಲ. ಬಸ್ ಬಾದ ಹಿನ್ನೆಲೆ ಶಾಲೆಗೆ ಬೇರೆ ಕಡೆ ಹೋಗಲು ಮಕ್ಕಳು ನಿತ್ಯ ದಟ್ಟ ಕಾಡಿನ ಮಧ್ಯೆ ನಡೆದುಕೊಂಡು ಹೋಗಬೇಕಾಗುತ್ತದೆ.

ದಟ್ಟ ಅರಣ್ಯದಲ್ಲಿ ರಸ್ತೆ

ನಂತರ ಸಿಂಗರಗಾಂವ ಗ್ರಾಮಕ್ಕೆ ಬೆಳಿಗ್ಗೆ 8 ಗಂಟೆಗೆ ಬರುವ ಬಸ್ ಹತ್ತಿ ಶಾಲೆಗೆ ಹೋಗಬೇಕು. ಕಾಲ್ನಡಿಗೆಯಲ್ಲಿ ಹೋಗುವ ದಟ್ಟ ಕಾಡಿನಲ್ಲಿ ಕರಡಿ ಹಾಗೂ ಹುಲಿ ಇದ್ದು ಪ್ರಾಣ ಭಯದಲ್ಲೇ ನಿತ್ಯ ಸಂಚಾರ ಮಾಡುವ ಪರಿಸ್ಥಿತಿ ಈ ವಿದ್ಯಾರ್ಥಿಗಳದ್ದಾಗಿದೆ.

ಸಿಂಗರಗಾವ್ ಗ್ರಾಮಕ್ಕೆ ಎರಡು ಬಾರಿ ಮಾತ್ರ ಬರುತ್ತೆ ಬಸ್

ಸಿಂಗರಗಾವ್ ಗ್ರಾಮಕ್ಕೆ ಬೆಳಿಗ್ಗೆ 8 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಎರಡು ಬಾರಿ ಮಾತ್ರ ಬಸ್ ಬರುತ್ತದೆ. ಬೆಳಿಗ್ಗೆ 8 ಗಂಟೆಯ ಬಸ್​ಗೆ ಹೋಗಬೇಕೆಂದ್ರೆ ಬೆಳಗಿನ ಜಾವ 6.30 ಕ್ಕೆಲ್ಲೆ ಮಕ್ಕಳು ಮನೆಯಿಂದ ಹೋರಡಬೇಕು. ಒಂದು ವೇಳೆ ಎರಡು ನಿಮಿಷ ತಡ ಆದರೂ ಇಡೀ ದಿನದ ಶಾಲೆಗೆ ಹಾಜರಾಗಲು ಸಾಧ್ಯವಿಲ್ಲ.

ಚಿಕಿತ್ಸೆಗೆ ಹೋಗುವುದಕ್ಕೂ ಒದ್ದಾಟ

ಗರ್ಭಿಣಿಯರಿಗೆ ಹಾಗೂ ವೃದ್ಧರಿಗೆ ಆರೋಗ್ಯದ ಸಮಸ್ಯೆ ಎದುರಾದಾಗ ಚಿಕಿತ್ಸೆಗೆ ಹೋಗುವುದಕ್ಕೂ ಕಷ್ಟ. ಹಾಗಾಗಿ ಎಷ್ಟೋ ಜನ ಬಡ ರೋಗಿಗಳು ಒಮ್ಮೆ ಮಾತ್ರ ಬೇರೆಯವರ ವಾಹನ ತೆಗೆದುಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಾರೆ. ಆಮೇಲೆ ಮತ್ತೆ ಹೋಗುವುದು ಭಾರಿ ವಿರಳ. ಇಷ್ಟೆಲ್ಲ ಸಮಸ್ಯೆ ಇದೆ ಎಂದು ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಬಸ್ ಮಾತ್ರ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರಾದ ಸಂಜನಾ, ಪ್ರವೀಣ ಮತ್ತಿತರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಎಸ್​ಎಂವಿಟಿ ಕಾರವಾರ, ಯಶವಂತಪುರ ಮಂಗಳೂರು ಮಧ್ಯೆ ವಿಶೇಷ ರೈಲು: ವೇಳಾಪಟ್ಟಿ, ಇತರ ವಿವರ ಇಲ್ಲಿದೆ

ಒಟ್ಟಾರೆಯಾಗಿ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನ ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಡಿನ ಮಧ್ಯದಲ್ಲಿರುವ ಗ್ರಾಮಗಳಲ್ಲಿ ಒಳ್ಳೆಯ ರಸ್ತೆ ಸೌಲಭ್ಯ ಇದ್ದರೂ ಸಹಿತ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಗ್ರಾಮಗಳ ಜನರನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ