ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumta) ತಾಲೂಕಿನ ಗೋಕರ್ಣಕ್ಕೆ (Gokarna) ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ (Bangalore) ಖಾಸಗಿ ಕಂಪನಿ ಉದ್ಯೋಗಿ ಅಭಿಷೇಕ್ (29) ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಗೋಕರ್ಣದ ಮುಖ್ಯ ಕಡಲತೀರದ ರುದ್ರಪಾದ (Rudrapada) ಬಳಿ ಈ ದುರಂತ ಘಟನೆ ನಡೆದಿದೆ. ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಲುಕಿ ಅಭಿಷೇಕ್ ಸಾವಿಗೀಡಾಗಿದ್ದಾರೆ. ಮುಳುಗಿದ್ದವನನ್ನು ರಕ್ಷಿಸಲು ಲೈಫ್‌ಗಾರ್ಡ್ ಸಿಬ್ಬಂದಿ ಮುಂದಾದರು. ಆದರೆ ಆ ವೇಳೆಗಾಗಲೇ ಪ್ರವಾಸಿಗ ಪ್ರವಾಸಿಗ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಪಾದಚಾರಿಗೆ ಬೈಕ್ ಡಿಕ್ಕಿ, ಸ್ಕಿಡ್ ಆಗಿ ಬಸ್ ಚಕ್ರಕ್ಕೆ ಸಿಲುಕಿ ಸವಾರ ದುರ್ಮರಣ
ಬೆಳಗಾವಿ: ರಾಮದುರ್ಗ ಪಟ್ಟಣದ ಈಟ್ಟಿ ಓಣಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಬಳಿಕ ಸ್ಕಿಡ್ ಆಗಿ ಸವಾರ ಮುಂದೆ ಬಸ್ ಚಕ್ರಕ್ಕೆ ಸಿಲುಕಿ ದುರ್ಮರಣಕ್ಕಿಡಾಗಿದ್ದಾನೆ. ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಕರಿಯಪ್ಪ ಕಾತರಗಿ (18) ಮೃತ ದುರ್ದೈವಿ.
ಅರ್ಜುನವಾಡ ಗ್ರಾಮಕ್ಕೆ ತೆರಳುತ್ತಿದ್ದ ಯುವಕ ಎಡಬದಿಯಿಂದ ಬಸ್ ಓವರ್ ಟೇಕ್ ಮಾಡಲು ಹೋಗಿದ್ದಾಗ ಎದುರಿಗೆ ಬಂದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿದೆ. ಬಳಿಕ ಬೈಕ್ ಸ್ಕಿಡ್ ಆಗಿ ಯುವಕ ಬಸ್ ಚಕ್ರಕ್ಕೆ ಸಿಲುಕಿದ್ದಾನೆ. ಪಾದಚಾರಿ ಭೀಮಪ್ಪ ರಾಯಣ್ಣವರ್ಗೆ (78) ಗಂಭೀರ ಗಾಯಗಳಾಗಿವೆ. ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.