ಮೇಲುಕೋಟೆಯಲ್ಲಿ ಸಂಭ್ರಮದ ವೈರಮುಡಿ ಉತ್ಸವ: ವಜ್ರಖಚಿತ ಕಿರೀಟದೊಂದಿಗೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ

|

Updated on: Mar 24, 2021 | 11:05 PM

ನಾಗಮಂಗಲ-ಪಾಂಡವಪುರ ರಸ್ತೆ ಮೂಲಕ ಆಭರಣಗಳನ್ನು ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು. ಈ ಮಾರ್ಗದಲ್ಲಿ ಸಿಗುವ ಎಲ್ಲ ಊರುಗಳಲ್ಲೂ ಕಿರೀಟಕ್ಕೆ ಭಕ್ತರು ಪೂಜೆ ಸಲ್ಲಿಸಿದರು.

ಮೇಲುಕೋಟೆಯಲ್ಲಿ ಸಂಭ್ರಮದ ವೈರಮುಡಿ ಉತ್ಸವ: ವಜ್ರಖಚಿತ ಕಿರೀಟದೊಂದಿಗೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ
ಮೇಲುಕೋಟೆಯಲ್ಲಿ ಬುಧವಾರ ವೈರಮುಡಿ ಉತ್ಸವದ ಪ್ರಯುಕ್ತ ಚೆಲುವ ನಾರಾಯಣ ಸ್ವಾಮಿಗೆ ವಜ್ರಖಚಿತ ಕಿರೀಟದ ಅಲಂಕಾರ
Follow us on

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ವಜ್ರಖಚಿತ ಕಿರೀಟ ಧಾರಣೆಯೊಂದಿಗೆ ವೈರಮುಡಿ ಉತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆ ಇರಲಿಲ್ಲ. ಆದರೆ ‘ಗೋವಿಂದ ಗೋವಿಂದ’ ಘೋಷಣೆಗಳು ಮುಗಿಲುಮುಟ್ಟಿದವು. ಭಕ್ತರು ಭಾವಪರವಶರಾಗಿ ಚೆಲುವ ನಾರಾಯಣ ಸ್ವಾಮಿಯ ಮುದ್ದು ಅಲಂಕಾರವನ್ನು ಕಣ್ತುಂಬಿಕೊಂಡರು.

ಕೊರೊನಾ 2ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಕೇವಲ ಸ್ಥಳೀಯ ಭಕ್ತರಿಗಷ್ಟೇ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಮೇಲುಕೋಟೆ ಪಟ್ಟಣ ಪ್ರವೇಶಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿರುವ ಪೊಲೀಸರು ಜನಸಂದಣಿ ನಿಯಂತ್ರಿಸುತ್ತಿದ್ದಾರೆ. ಕೋವಿಡ್ ಪರೀಕ್ಷೆ ನಂತರವೇ ಭಕ್ತರಿಗೆ ಉತ್ಸವ ನೋಡಲು ಅವಕಾಶ ಸಿಗುತ್ತಿದೆ.

ಮಂಡ್ಯದ ಜಿಲ್ಲಾ ಖಜಾನೆಯಿಂದ ತಿರುವಾಭರಣ ಪೆಟ್ಟಿಗೆಗಳಲ್ಲಿ ಬಂದ ಆಭರಣಗಳನ್ನು ಜಿಲ್ಲಾಧಿಕಾರಿ ಜಿ.ಅಶ್ವಥಿ ಪರ್ಕಾವಣೆ (ತಪಾಸಣೆ) ಮಾಡಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು. ರಾತ್ರಿ 9ರಿಂದ 12 ಗಂಟೆಯವರೆಗೂ ಉತ್ಸವ ನಡೆಯಿತು. ದೇವಸ್ಥಾನದ ಒಳಗೆ ಗರಿಷ್ಠ 100 ಮಂದಿ ಸೇರಲು ಅವಕಾಶ ನೀಡಲಾಗಿತ್ತು. ದೇಗುಲದ ಹೊರಭಾಗದಲ್ಲಿ 2000 ಮಂದಿ ನಿಲ್ಲಲು ಅನುಮತಿ ನೀಡಲಾಗಿತ್ತು.

ವೈರಮುಡಿ ಉತ್ಸವದ ಯುಟ್ಯೂಬ್​ ಲೈವ್​ಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಲೈವ್​ ನೋಡಲು ಕೆಳಗಿನ ಚಿತ್ರದ ಮೇಲಿರುವ ಲಿಂಕ್ ಕ್ಲಿಕ್ ಮಾಡಿ.

ಮಾರ್ಗ ಮಧ್ಯದ ಊರುಗಳಲ್ಲಿ ಪೂಜೆ
ಜಿಲ್ಲಾ ಖಜಾನೆಯಲ್ಲಿದ್ದ ಆಭರಣಗಳನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ತೆಗೆದು ಮಂಡ್ಯ ನಗರದ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮಂಡ್ಯ ತಾಲೂಕಿನ ಇಂಡುವಾಳು‌, ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು, ಕಿರಂಗೂರು, ಪಾಂಡವಪುರ ಮಾರ್ಗವಾಗಿ ನಾಗಮಂಗಲ-ಪಾಂಡವಪುರ ರಸ್ತೆ ಮೂಲಕ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು. ಈ ಮಾರ್ಗದಲ್ಲಿ ಸಿಗುವ ಎಲ್ಲ ಊರುಗಳಲ್ಲೂ ಕಿರೀಟಕ್ಕೆ ಭಕ್ತರು ಪೂಜೆ ಸಲ್ಲಿಸಿದರು.

ಮಂಡ್ಯದ ಲಕ್ಷ್ಮೀಜನಾರ್ದನ ಸ್ವಾಮಿ ದೇಗುಲದಲ್ಲಿ ತಿರುವಾಭರಣ ಪೆಟ್ಟಿಗೆ ಮುಟ್ಟಿ, ನಮಿಸಲು ಭಕ್ತರ ಪ್ರಯತ್ನ

ಇದನ್ನೂ ಓದಿ: ಪ್ರಾಯಶ್ಚಿತ್ತ ಉತ್ಸವ ಮಾಡಿದ ಬಳಿಕವೇ ವೈರಮುಡಿ ಉತ್ಸವ ಮಾಡಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ

Published On - 11:03 pm, Wed, 24 March 21