ಬೆಂಗಳೂರು, (ಜೂನ್ 06): ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ (Valmiki Corporation Scam) ಸಚಿವ ನಾಗೇಂದ್ರ (B Nagendra) ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಇಂದೇ (ಜೂನ್ 06) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ವಿಚಾರವನ್ನು ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸುಳಿವು ಕೊಟ್ಟಿದ್ದಾರೆ. ನಿನ್ನೆ (ಜೂನ್ 05) ಅಷ್ಟೇ ನಾಗೇಂದ್ರ ಅವರನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕರೆಯಿಸಿಕೊಂಡು ಮಹತ್ವದ ಚರ್ಚೆ ನಡೆಸಿದ್ದರು. ಈ ಪ್ರಕರಣದಲ್ಲಿ ಸಿಬಿಐ ಪ್ರವೇಶ ಮಾಡಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಅನಿವಾರ್ಯ ಎನ್ನುವ ಮಾತುಗಳನ್ನು ಸಿಎಂ, ಡಿಸಿಎಂ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಇಂದು ರಾಜೀನಾಮೆ ನೀಡುವುದು ಖಚಿತವಾಗಿದೆ.
ಬೆಂಗಳೂರಿನಲ್ಲಿ ಇಂದು (ಜೂನ್ 06) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿ.ನಾಗೇಂದ್ರ ಜತೆ ನಾನು, ಗೃಹ ಸಚಿವರು ಚರ್ಚೆ ಮಾಡಿದ್ದೇವೆ. ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಬಿ.ನಾಗೇಂದ್ರ ಭಾಗಿಯಾಗಿಲ್ಲ. ಹೀಗಾಗಿ ಸಚಿವ ನಾಗೇಂದ್ರ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಆದರೆ ಪಕ್ಷ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಬರಬಾರದು. ಹೀಗಾಗಿ ಸ್ವತಃ ಬಿ.ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದು ನಾಗೇಂದ್ರ ರಾಜೀನಾಮೆ ನೀಡಬಹುದು ಎಂದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿಬಿಐ ಎಂಟ್ರಿ ಬೆನ್ನಲ್ಲೇ ನಾಗೇಂದ್ರರನ್ನ ಕರೆಸಿಕೊಂಡು ಚರ್ಚಿಸಿದ ಸಿಎಂ, ಸಚಿವರ ತಲೆದಂಡ ಫಿಕ್ಸ್?
ಇನ್ನು ನಾಗೇಂದ್ರ ಅವರು ಅವರಾಗಿಯೇ ಸಚಿವ ಸ್ಥಾನಕ್ಕೆ ನೀಡುವ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ಪ್ರಕರಣ ಬಗ್ಗೆ ಬಿಜೆಪಿ ಇಡಿ ಮೆಟ್ಟಿಲೇರಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಸೂಚನೆ ಕೊಟ್ಟೀದ್ದೀರಾ ಎಂಬ ವಿಧಾನಸೌಧದಲ್ಲಿ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪ್ರತಿಭಟನೆ, ಪಾದಯಾತ್ರೆ ಮಾಡುವವರು ಮಾಡಲಿ. ಕರೆದು ಮಾತನಾಡಿದ ತಕ್ಷಣ ರಾಜೀನಾಮೆ ಕೊಡಿ ಎಂದರ್ಥವಲ್ಲ. ಬಿಜೆಪಿಯವರು ರಾಜಭವನಕ್ಕೆ ಹೋದರೆ ಹೋಗಲಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತ ತನಿಖೆಗೆ ಎಸ್ಐಟಿ ರಚನೆ ಆಗಿದೆ. ಎಸ್ಐಟಿಯವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯಲಿ ಎಂದು ಹೇಳಿದರು.
ನಾಗೇಂದ್ರರನ್ನು ಕರೆದು ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಎಲ್ಲ ಸಚಿವರನ್ನು ಕರೆದು ಮಾತನಾಡುತ್ತೇನೆ. ಅದರಂತೆ ನಾಗೇಂದ್ರ ಜತೆಗೂ ಮಾತನಾಡಿದ್ದೇನೆ ಎಂದರು. ಹಾಗಿದ್ದರೆ ರಾಜೀನಾಮೆಗೆ ಸೂಚನೆ ನೀಡಿದ್ದೀರಾ ಎಂಬ ಪ್ರಶ್ನೆಗೆ, ಸಿಎಂ ಉತ್ತರಿಸದೇ ಮೌನಕ್ಕೆ ಶರಣಾದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ