
ನವದೆಹಲಿ, ಡಿಸೆಂಬರ್ 19: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Case) ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಿ. ನಾಗೇಂದ್ರ (Nagendra) ಅವರ ಸುಮಾರು 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ತಿಳಿಸಿದೆ. ನಾಲ್ಕು ವಸತಿ ಮತ್ತು ವಾಣಿಜ್ಯ ಆಸ್ತಿ, ಒಂದು ಕಟ್ಟಡ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ಸೇರಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್ಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಆಸ್ತಿಗಳನ್ನು PMLA ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಇಡಿ ಕರೆದಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಇಡಿ ತಿಳಿಸಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ, ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮೌಲ್ಯ 8.07 ಕೋಟಿ ರೂ. ಆಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳ ಹಣವನ್ನು ಬೇರೆಡೆಗೆ ತಿರುಗಿಸಿ ‘ನಕಲಿ ಖಾತೆಗಳಿಗೆ’ ವರ್ಗಾವಣೆ ಮಾಡಲಾಗಿತ್ತು. ನಂತರ ಶೆಲ್ ಘಟಕಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆ ಸಂಬಂಧ ಕರ್ನಾಟಕ ಪೊಲೀಸರು ಮತ್ತು ಸಿಬಿಐ ಎಫ್‌ಐಆರ್ ದಾಖಲಿಸಿದ್ದವು. ಅವುಗಳ ತನಿಖೆ ವೇಳೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಉದ್ಭವಿಸಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಕರ್ನಾಟಕದಲ್ಲಿ ಏಕಕಾಲಕ್ಕೆ 8 ಕಡೆ ಇ.ಡಿ ದಾಳಿ
ವಾಲ್ಮೀಕಿ ಅಭಿೃದ್ಧಿ ನಿಗಮ ಹಗರಣದಲ್ಲಿ ಜೈಲು ಪಾಲಾಗಿದ್ದ ಬಿ ನಾಗೇಂದ್ರ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.