AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮ ಹಗರಣ ತನಿಖೆ ಸಿಬಿಐಗೆ ನೀಡಿ ಕೋರ್ಟ್ ಆದೇಶ: ಹಲವರಿಗೆ ಢವ ಢವ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕರ್ನಾಟಕ ಹೈಕೋರ್ಟ್ ಎಸ್​ಐಟಿಗೆ ಆದೇಶಿಸಿದೆ.ಸದ್ಯ ಪ್ರಕರಣದ ತನಿಖೆಯನ್ನು ಎಸ್​ಐಟಿ ಮತ್ತು ಇಡಿ ನಡೆಸುತ್ತಿತ್ತು. ಇದೀಗ, ಹೈಕೋರ್ಟ್​ ಸೂಚನೆ ಮೇರೆಗೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗಲಿದೆ.

ವಾಲ್ಮೀಕಿ ನಿಗಮ ಹಗರಣ ತನಿಖೆ ಸಿಬಿಐಗೆ ನೀಡಿ ಕೋರ್ಟ್ ಆದೇಶ: ಹಲವರಿಗೆ ಢವ ಢವ
ಹೈಕೋರ್ಟ್​, ವಾಲ್ಮೀಕಿ ಅಭಿವೃದ್ಧಿ ನಿಗಮ
Ramesha M
| Updated By: ವಿವೇಕ ಬಿರಾದಾರ|

Updated on:Jul 01, 2025 | 6:22 PM

Share

ಬೆಂಗಳೂರು, ಜುಲೈ 01: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆ (Illegal Money Transfer) ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್​ ಎಸ್​ಐಟಿಗೆ ಸೂಚನೆ ನೀಡಿದೆ. ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಇನ್ನು, ಸಿಬಿಐನಿಂದ ಪ್ರಕರಣದ ತನಿಖೆ ಸಮಗ್ರ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ್​ ಯತ್ನಾಳ್​, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್​ ಬಂಗಾರಪ್ಪ ಅವರು ರಿಟ್​ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಕೋರ್ಟ್​

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಹಣ ದುರುಪಯೋಗದ ಆರೋಪಗಳಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬ್ಯಾಂಕ್ ಮನವಿ ಮಾಡಿತ್ತು. ಆದರೆ, ಹೈಕೋರ್ಟ್​ ಈ ಮನವಿಯನ್ನು ತಿರಸ್ಕರಿಸಿತ್ತು.

ಎಲ್ಲಿಗೆಲ್ಲ ವರ್ಗಾವಣೆಯಾಗಿತ್ತು ಹಣ?

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು. 187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್​ ಬ್ಯಾಂಕ್​ಗೆ ಅಂದರೆ, ಹೈದರಾಬಾದ್​ನ ಫಸ್ಟ್​ ಬ್ಯಾಂಕ್​​ಗೆ ವರ್ಗಾಯಿಸಲಾಗಿತ್ತು. ಫಸ್ಟ್​ ಬ್ಯಾಂಕ್​ನ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಇದೆಲ್ಲವೂ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್​ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆಯಾಗಿತ್ತು.

ಇದನ್ನೂ ಓದಿ
Image
ವಾಲ್ಮೀಕಿ ನಿಗಮ ಹಗರಣ: ಕರ್ನಾಟಕದಲ್ಲಿ ಏಕಕಾಲಕ್ಕೆ 8 ಕಡೆ ಇ.ಡಿ ದಾಳಿ
Image
ವಾಲ್ಮೀಕಿ‌‌‌‌ ನಿಗಮ ಹಗರಣ: ನಾಗೇಂದ್ರನೇ ಪ್ರಮುಖ ಆರೋಪಿ
Image
ವಾಲ್ಮೀಕಿ ನಿಗಮ ಹಗರಣ ಶುರುವಾಗಿದ್ದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ
Image
ವಾಲ್ಮೀಕಿ ನಿಗಮದ ಹಣ ಭ್ರಷ್ಟ ಕುಳಗಳ ಹೊಟ್ಟೆ ಸೇರಿದ ವಿವರ ಇಲ್ಲಿದೆ

ಹೀಗೆ ವರ್ಗಾವಣೆ ಆದ ಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದನು. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್​ ಬ್ಯಾಂಕಿಂಗ್​​, ಆರ್​​ಟಿಜಿಎಸ್, ಫೋನ್​ ಪೇ, ಗೂಗಲ್​ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್​ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ

ಪದ್ಮನಾಭ್​​ಗೆ ಸಿಕ್ಕಿದ್ದು ಭರ್ತಿ ₹5 ಕೋಟಿ ಪಾಲು

ನಿಗಮದ ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂಪಾಯಿ ಪಾಲು ಬಂದಿತ್ತು. ಈ ಹಣದಲ್ಲಿ ಅರ್ಧ ಹಣವನ್ನ ಮಗನ ಸ್ನೇಹಿತನ ಮನೆಯಲ್ಲಿ, ಅಂದರೆ ನೆಲಮಂಗಲದ ಗೋವಿನಹಳ್ಳಿಯ ಕೆಂಪೇಗೌಡ ಮನೆಯಲ್ಲಿದ್ದ ಇಟ್ಟಿದ್ದ. ಕೆಂಪೇಗೌಡ ಮನೆಯಲ್ಲಿ ಎಸ್​ಐಟಿ ಅಧಿಕಾರಿಗಳು 3.64 ಕೋಟಿ ರೂಪಾಯಿ ಹಣವನ್ನ ಸೀಜ್​ ಮಾಡಿದ್ದರು. ಅಲ್ಲದೆ, ಪದ್ಮನಾಭ ಸ್ನೇಹಿತರೊಬ್ಬರ ಕಾರಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂಪಾಯಿ ನಗದು ಕೂಡ ಸೀಜ್ ಆಗಿತ್ತು. ಅಲ್ಲದೆ, ನಾಗೇಂದ್ರ ಆಪ್ತ ಹರೀಶ್​​ಗೆ 25 ಲಕ್ಷ ರೂ., ದದ್ದಲ್​ ಆಪ್ತನಿಗೆ 55 ಲಕ್ಷ ರೂ., ದದ್ದಲ್​ ಆಪ್ತ ಹಂಪಣ್ಣಗೆ 55 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗೆ 94 ಕೋಟಿ ರೂಪಾಯಿ ಹಣವನ್ನ ನೆಕ್ಕಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮಾ ಹಂಚಿಕೆ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Tue, 1 July 25