ಬೆಂಗಳೂರು ಕಾಲ್ತುಳಿತ: ಸಾರ್ವಜನಿಕ ಸಭೆಗಳ ಜನಜಂಗುಳಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ಆರ್ ಸಿಬಿ ವಿಜಯೋತ್ಸವ ವೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, ಇದು ರಾಷ್ಟ್ರಮಟ್ಟದಲ್ಲೂ ಬಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಪೊಲಿಸ್ ಇಲಾಖೆ ಸಹ ಸಾರ್ವಜನಿಕ ಸಭೆಗಳ ಜನಸಂದಣಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಬೆಂಗಳೂರು, (ಜುಲೈ 01): ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯು ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಜನಜಂಗುಳಿ ನಿಯಂತ್ರಣಕ್ಕೆ ಈ ಮಾರ್ಗಸೂಚಿ ಜಾರಿಗೆ ತರಲಾಗಿದ್ದು, ಯಾವುದೇ ಬಹಳಷ್ಟು ಸಂಖ್ಯೆಯಲ್ಲಿ ಜನ ಸೇರುವ ಸಭೆ ಸಮಾರಂಭಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ. ಹಾಗಾದ್ರೆ, ಮಾರ್ಗಸೂಚಿಯಲ್ಲಿ ಏನೆಲ್ಲಾ ಅಂಶಗಳು ಇವೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಹಬ್ಬಗಳು, ಪ್ರತಿಭಟನೆಗಳು, ಮೆರವಣಿಗೆಗಳು ಮತ್ತು ಕ್ರೀಡಾ ಕೂಟಗಳಂತಹ ಬೃಹತ್ ಜನ ಸಮುದಾಯ ಸೇರುವ ಯಾವುದೇ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭದ್ರತೆ, ಕಾನೂನು-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಮಾರ್ಗಸೂಚಿ ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಕಾರ್ಯಕ್ರಮಗಳಿಗೆ ಹೊಸ ಕಾನೂನು:ಸಮಾರಂಭಕ್ಕೆ ಅನುಮತಿ ಪಡೆಯುವುದ್ಹೇಗೆ? ಮಸೂದೆಯಲ್ಲೇನಿದೆ?
ಮಾರ್ಗಸೂಚಿಯಲ್ಲೇನಿದೆ?
Karnataka government releases SOPs for crowd control events and mass gatherings.
The SoPs mention that Police responses must prioritise life safety, protection of rights, prevention of property damage, and de-escalation of potential conflicts. Modern gatherings are often… pic.twitter.com/huDIRBent7
— ANI (@ANI) July 1, 2025
ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಸ್ಥಳದ ಸಂಪೂರ್ಣ ಪರಿಶೀಲನೆ ಮತ್ತು ಕಾರ್ಯಕ್ರಮ ಆಯೋಜಕರ ಸಹಯೋಗದೊಂದಿಗೆ ವಿವರವಾದ ಯೋಜನೆ ರಚಿಸುವುದು ಈಗ ಕಡ್ಡಾಯ. ಕಾರ್ಯಕ್ರಮ ನಡೆಯುವ ಸ್ಥಳದ ಸಾಮರ್ಥ್ಯ, ತುರ್ತು ನಿರ್ಗಮನ ಮಾರ್ಗಗಳ ಲಭ್ಯತೆ ಮತ್ತು ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಪರಿಶೀಲಿಸಲೇಬೇಕು. ಜನಸಂದಣಿ ನಿರ್ವಹಣೆಗೆ ಪೊಲೀಸರ ಹೊಣೆಗಾರಿಕೆಗಳು, ಟ್ರಾಫಿಕ್ ನಿಯಂತ್ರಣ, ವೈದ್ಯಕೀಯ ನೆರವು ಮತ್ತು ಟಿಕೆಟ್ ವ್ಯವಸ್ಥೆಗಳನ್ನು ಮಾಡಲೇಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
- ಸಾರ್ವಜನಿಕರ ಪ್ರವೇಶ ದ್ವಾರಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕು.
- ಜನಸಂದಣಿಯನ್ನು ಸುಗಮಗೊಳಿಸಲು QR ಕೋಡ್ ಅಥವಾ ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆ ಮತ್ತು ವಿಭಿನ್ನ ವರ್ಗಗಳಿಗೆ (ಉದಾಹರಣೆ: ಪುರುಷರು, ಮಹಿಳೆಯರು, ವೃದ್ಧರು, ವಿಶೇಷಚೇತನರು) ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಒದಗಿಸಬೇಕು.
- ತುರ್ತು ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಮತ್ತು ಯಾವುದೇ ಸಂದರ್ಭದಲ್ಲಿಯೂ ಲೌಡ್‌ಸ್ಪೀಕರ್‌ಗಳ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಇರಬೇಕು.
- ಅಲ್ಲದೆ, ತುರ್ತು ವಾಹನಗಳಾದ ಅಂಬುಲೆನ್ಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ನೆರವಿನ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು.
ತುರ್ತು ಪರಿಸ್ಥಿತಿ ನಿರ್ವಹಣೆ
ಪ್ರತಿಭಟನೆ ಅಥವಾ ಹವಾಮಾನ ದುರಂತಗಳಂತಹ ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಯಾರಿ ನಡೆಸಲು ಸಿಮ್ಯುಲೇಷನ್ ಡ್ರಿಲ್‌ಗಳನ್ನು ನಡೆಸುವ ಮೂಲಕ ರಕ್ಷಣಾ ತಂಡಗಳ ಜವಾಬ್ದಾರಿಗಳನ್ನು ಮೊದಲೇ ಗುರುತಿಸಬೇಕು. ಯಾವುದೇ ಘಟನೆಯ ಸಮಯದಲ್ಲಿ, ಪೊಲೀಸರು ಅನಗತ್ಯ ತಕರಾರುಗಳನ್ನು ತಪ್ಪಿಸಿ, ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು ಬಲವನ್ನು ಬಳಸುವ ಅನಿವಾರ್ಯತೆ ಬಂದಾಗ, ಮೂರು ಬಾರಿ ಎಚ್ಚರಿಕೆಗಳನ್ನು ನೀಡಿದ ನಂತರವೇ ಕಾನೂನು ರೀತಿ ನಡೆದಯಕೊಳ್ಳಬೇಕು ಮತ್ತು ಕಾನೂನುಬದ್ಧ ಬಂಧನಕ್ಕೆ ಮುಂದಾಗಬೇಕೆಂದು ಎಂದು ಮಾರ್ಗಸೂಚಿಯಲ್ಲಿದೆ.
ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು. ಕರ್ನಾಟಕ ಪೊಲೀಸ್ ಕಾಯಿದೆ (KP Act) ಮತ್ತು ಬಿಎನ್‌ಎಸ್‌ಎಸ್ (BNSS – CrPC) ಪಾಲನೆಯ ಮೂಲಕ ಸಾರ್ವಜನಿಕ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಮಾನವ ಘನತೆ ಎತ್ತಿಹಿಡಿಯುವ ಗುರಿ ಹೊಂದಿದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Tue, 1 July 25








