ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ: ಇನ್ಮುಂದೆ ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಅಭಿಮಾನಿಗಳು ಕಾಲ್ತುಳಿತದಿಂದ ಮೃತಪಟ್ಟ ಘಟನೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮುಂದಾಗಿದೆ. ಇನ್ಮುಂದೆ ಹೆಚ್ಚಿನ ಜನಸಂದಣಿಯ ಕಾರ್ಯಕ್ರಮಗಳಿಗೆ ಕಡ್ಡಾಯ ಆರೋಗ್ಯ ಇಲಾಖೆ ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯಗಳ ಅನುಮತಿ ಕಡ್ಡಾಯಕ್ಕೆ ಶಿಫಾರಸು ಮಾಡಲು ಸಚಿವರು ಮುಂದಾಗಿದ್ದಾರೆ.

ಬೆಂಗಳೂರು, ಜೂನ್ 10: ಕಾಲ್ತುಳಿತದಲ್ಲಿ ಆರ್ಸಿಬಿ (RCB) ಅಭಿಮಾನಿಗಳ ಸಾವು ಪ್ರಕರಣ ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ವಿಪಕ್ಷಗಳು ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ ನಿಗಿನಿಗಿ ಎನ್ನುತ್ತಿದೆ. ಈ ಮಧ್ಯೆ ದುರಂತದಿಂದ ಎಚ್ಚೆತ್ತ ಆರೋಗ್ಯ ಇಲಾಖೆಯಿಂದ (Health Department) ಹೊಸ ಗೈಡ್ಲೈನ್ ಜಾರಿಗೆ ಮುಂದಾಗಿದೆ. ಇನ್ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಕಡ್ಡಾಯ ಅನುಮತಿಗೆ ಶಿಫಾರಸು ಮಾಡಲು ಸಚಿವರು ಮುಂದಾಗಿದ್ದಾರೆ.
ಲಕ್ಷಾಂತರ ಜನ ಸೇರುವ ಕಾರ್ಯಕ್ರಮದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ವೈದ್ಯರು, ಸಿಬ್ಬಂದಿ ಹಾಗೂ ಐಸಿಯು ಆ್ಯಂಬುಲೆನ್ಸ್ಗಳ ವ್ಯವಸ್ಥೆ ಇರುವಂತೆ ಮಾರ್ಗಸೂಚಿ ನೀಡಲು ಆರೋಗ್ಯ ಇಲಾಖೆಯಿಂದ ಶಿಫಾರಸ್ಸಿಗೆ ಸಚಿವರು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಕೈ ಹೈಕಮಾಂಡ್ ನಿಗಿನಿಗಿ, ಬೆಳ್ಳಂಬೆಳಗ್ಗೆ ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಸಿಎಂ, ಡಿಸಿಎಂ
ಚಿನ್ನಸ್ವಾಮಿ ಮೈದಾನದಲ್ಲಿ 9 ಲಕ್ಷ ಅಭಿಮಾನಿಗಳು ಸೇರಿದರು ಸೂಕ್ತ ವೈದ್ಯರಾಗಲಿ, ಆ್ಯಂಬುಲೆನ್ಸ್ಗಳ ಸೇವೆ ಕೂಡ ಇರಲಿಲ್ಲ. ಎಷ್ಟೋ ಜನರಿಗೆ ನಡು ರಸ್ತೆಯಲ್ಲಿಯೇ ಪಿಸಿಆರ್ ಮಾಡಲಾಗಿದೆ. ಎಷ್ಟೋ ಅಭಿಮಾನಿಗಳು ಉಸಿರಾಟದ ತೊಂದರೆಯಿಂದ ಒದ್ದಾಡಿದ್ದಾರೆ. ಮೈದಾನದಲ್ಲಿ ಸಮರ್ಪಕ ವೈದ್ಯರು ಹಾಗೂ ಆ್ಯಂಬುಲೆನ್ಸ್ ಗಳು ಸ್ಥಳದಲ್ಲಿ ಇದ್ದಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಾಗಿತ್ತು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತುಗೊಂಡಿದ್ದು, ಕಾರ್ಯಕ್ರಮಗಳಿಗೆ ಗೈಡ್ ಲೈನ್ಸ್ ನೀಡಲು ಚಿಂತನೆ ನಡೆಸಿದೆ.
ಇದನ್ನೂ ಓದಿ: ಕಾಲ್ತುಳಿತ: ಐವರು ಪೊಲೀಸ್ ಅಧಿಕಾರಿಗಳ ಅಮಾನತು, ಸಿಎಂಗೆ ಭಾರತೀಯ ಪೊಲೀಸ್ ಒಕ್ಕೂಟ ಖಡಕ್ ಪತ್ರ
ಆರ್ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೂಡ ಕನಿಷ್ಠ ವೈದ್ಯಕೀಯ ಸೇವೆ ಕುರಿತು ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆ್ಯಂಬುಲೆನ್ಸ್, ವೈದ್ಯರು ಅಥವಾ ಚಿಕಿತ್ಸೆ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆ ಇನ್ಮುಂದೆ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯಕ್ಕೆ ಶಿಫಾರಸ್ಸು ಮಾಡಲು ಮುಂದಾಗಿದೆ.
ಇಂದು ವಿಚಾರಣೆ
ಇನ್ನು ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ವಿಚಾರಣೆ ನಡೆಸಲಿದೆ. ನ್ಯಾ.ವಿ.ಕಾಮೇಶ್ವರ ರಾವ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರ ಪೀಠದಲ್ಲಿ ವಿಚಾರಣೆ ನಡೆದಯಲಿದ್ದು, ಹೈಕೋರ್ಟ್ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:40 am, Tue, 10 June 25