ಬೆಂಗಳೂರು ಕಾಲ್ತುಳಿತ ಕೇಸ್: ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
RCB victory parade stampede Case: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತು ಸುದ್ದಿಗೋಷ್ಠಿ ನಡೆಸಿ ಕೆಲವು ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಕೆಲ ದಿಟ್ಟ ಕ್ರಮಗಳನ್ನು ಸಹ ಕೈಗೊಂಡಿರುವ ಬಗ್ಗೆ ತಿಳಿಸಿದ್ದಾರೆ.

ಬೆಂಗಳೂರು, (ಜೂನ್ 05): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಿದ್ದು, ಈ ವಿಜಯೋತ್ಸವದ ವೇಳೆ ಚಿನ್ನಾಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (RCB victory parade stampede Case) 11 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಪ್ರಕರಣದ ತನಿಖೆಯನ್ನು ಸಿಐಡಿಗೆ ಹೆಗಲಿಗೆ ಹಾಕಿದೆ. ಅಲ್ಲದೇ ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳನ್ನೇ ತಲೆದಂಡ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ (Bengaluru City commissioner) ಬಿ.ದಯಾನಂದ್ ಅವರನ್ನು ಅಮಾನತು ಮಾಡಲಾಗಿದ್ದು, ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು ಕರ್ನಾಟಕ ರಾಜ್ಯದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲು.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಂದರೆ ಎಡಿಜಿಪಿ ದರ್ಜೆಯ ಅಧಿಕಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಿ.ದಯಾನಂದ್ ಅವರು ಡಿಜಿ & ಐಜಿಪಿ ಹೊಸ್ತಿಲಲ್ಲಿದ್ದರು. ಆದ್ರೆ, ಈ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ,ದಯಾನಂದ್ ಅವರನ್ನ ಸಸ್ಪೆಂಡ್ ಮಾಡಿದೆ. ಈ ಮೂಲಕ ಡಿಜಿ & ಐಜಿಪಿ ಹೊಸ್ತಿಲಲ್ಲಿದ್ದ ಅಧಿಕಾರಿಯನ್ನು ಅಮಾನತು ಮಾಡಿರುವುದು ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್, ಎಸಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್
ಇನ್ನು ಈ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರ ಜೊತೆ ಇನ್ನಿತರ ಪೊಲೀಸ್ ಅಧಿಕಾರಿಗಳನ್ನು ಸಹ ಸಸ್ಪೆಂಡ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್.ಎ.ಕೆ ಅವರನ್ನೂ ಸಹ ರಾಜ್ಯ ಸರ್ಕಾರ ತಲೆದಂಡ ಮಾಡಿದೆ.
ಕರ್ನಾಟಕದ ಇತಿಹಾಸನದಲ್ಲೇ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಅಮಾನತುಗೊಳಿಸಿರುವ ಉದಾಹರಣೆಗಳೇ ಇಲ್ಲ. ಆದ್ರೆ, ಇದೀಗ ಸಿದ್ದರಾಮಯ್ಯ ಸಿದ್ದರಾಮಯ್ಯ ಸರ್ಕಾರ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದೆ.
ವಿಪಕ್ಷ ನಾಯಕ ಅಶೋಕ್ ಆಕ್ಷೇಪ
ಇನ್ನು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯನವರೇ ರಾಜ್ಯದ ಜನತೆ ನ್ಯಾಯ ಕೇಳುತ್ತಿದ್ದಾರೆ. ಹರಕೆಯ ಕುರಿಗಳನ್ನಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪೊಲೀಸರನ್ನು ಅಮಾನತು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಡಿಸಿದ್ದಾರೆ. ಅಲ್ಲದೇ ಪರೋಕ್ಷವಾಗಿ ಸಂಬಂಧಪಟ್ಟ ಸಚಿವರ ತಲೆದಂಡವಾಗಬೇಕೆನ್ನುವುದು ಅಶೋಕ್ ಅವರ ಒತ್ತಾಯವಾಗಿದೆ.
ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ
ಪೊಲೀಸರ ಅಮಾನತು ಮಾಡಿರುವ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ದಕ್ಷ ಅಧಿಕಾರಿಗಳಿಗೆ ಅಮಾನತ್ತು ಬಳುವಳಿ. ಇದು ಗ್ಯಾರಂಟಿ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ. ಅಂಧೇರ್ ನಗರ್ ಕಾ ಚೌಪಟ್ ರಾಜಾ ನೆನಪಿಗೆ ಬರುತ್ತಿದ್ದಾನೆ. ಪೋಲಿಸ್ ಅಧಿಕಾರಿಗಳ ಸಲಹೆ ತಿರಸ್ಕರಿಸಿ ಹುಚ್ಚು ಪ್ರಚಾರ ಗಿಟ್ಟಿಸಲು ಹೋಗಿ ಅಮಾಯಕರನ್ನು ಬಲಿ ಕೊಟ್ಟ ಆಡಳಿತ ತಾನು ನುಣಿಚಿಕೊಳ್ಳಲು ಇದೀಗ ದಕ್ಷ ಅಧಿಕಾರಿಗಳನ್ನು ಬಲಿ ಕೊಡಹೊರಟಿರುವುದು ದಿವಾಳಿತನದ ಸ್ಪಷ್ಟ ಉದಾಹರಣೆ. ಸರಕಾರದ ಈ ಕೃತ್ಯ ಅಧಿಕಾರಿಗಳ ನೈತಿಕತೆ ಕುಸಿಯುವಂತೆ ಮಾಡುವುದು ಖಚಿತ ಎಂದಿದ್ದಾರೆ.
ಹೊಸ ಕಮಿಷನರ್ ನೇಮಕ
ಇನ್ನು ಕಾಲ್ತುಳಿತ ಪ್ರಕರಣದಲ್ಲಿ ದಯಾನಂದ್ ಅವರು ಸಸ್ಪೆಂಡ್ ಆಗುತ್ತಿದ್ದಂತೆಯೇ ಮುಂದಿನ ಬೆಂಗಳೂರು ಪೊಲೀಸ್ ಆಯುಕ್ತರು ಯಾರು ಎನ್ನುವ ಚರ್ಚೆಗಳು ಶುರುವಾಗಿದ್ದವು. ಪ್ರಮುಖವಾಗಿ ನಾಲ್ಕು ಹೆಸರುಗಳು ಓಡಾಡುತ್ತಿದ್ದವು. ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ, ಸೀಮಂತ್ ಕುಮಾರ್ ಸಿಂಗ್ ಹಾಗೂ ಆರ್.ಹಿತೇಂದ್ರ ಅವರ ಹೆಸರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯ ರೇಸ್‌ನಲ್ಲಿದ್ದವು.
ಆದರೆ ಇವರುಗಳಲ್ಲಿ ಯಾರನ್ನ ಕಮಿಷನರ್ ಆಗಿ ಮಾಡಬೇಕೆನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಮಹತ್ವದ ಮಾತುಕತೆ ನಡೆಸಿದ್ದು, ಅಂತಿಮವಾಗಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಂತಿಮಗೊಳಿಸಿದ್ದು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಬಿಹಾರ್ ಮೂಲದ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.