ಕಾಲ್ತುಳಿತ: ಐವರು ಪೊಲೀಸ್ ಅಧಿಕಾರಿಗಳ ಅಮಾನತು, ಸಿಎಂಗೆ ಭಾರತೀಯ ಪೊಲೀಸ್ ಒಕ್ಕೂಟ ಖಡಕ್ ಪತ್ರ
Bengaluru RCB Victory Celebrations Stampede: ಬುಧವಾರ (ಜೂ.03) ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಟ್ಟಿದ್ದಾರೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ಅವರನ್ನು ಅಮಾನತು ಮಾಡಿದೆ. ಈ ಅಮಾನತು ಹಿಂಪಡೆಯುವಂತೆ ಭಾರತೀಯ ಪೊಲೀಸ್ ಒಕ್ಕೂಟ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ.

ಬೆಂಗಳೂರು, ಜೂನ್ 09: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) ಆರ್ಸಿಬಿಯ 11 ಅಭಿಮಾನಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ತವ್ಯ ಲೋಪದ ಕಾರಣ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ (B. Dayanand) ಸೇರಿಂದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮಾಡಿದ ತಪ್ಪಿಗೆ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿದೆ. ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ, ಭಾರತೀಯ ಪೊಲೀಸ್ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, “ನಗರ ಪೊಲೀಸ್ ಕಮೀಷನರ್ ಸೇರಿದಂತೆ ಐದು ಮಂದಿ ಅಧಿಕಾರಿಗಳ ಅಮಾನತು ಹಿಂಪಡಿಯುವಂತೆ” ಹೇಳಿದೆ.
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ಮಾತ್ರ ಹರಕೆಯ ಕುರಿಗಳನ್ನಾಗಿ ಮಾಡಿದ್ದೀರಿ. ಕಾಲ್ತುಳಿತ ದುರಂತದ ಕುರಿತು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ. ವಿಚಾರಣೆ ಮುಗಿಯುವವರೆಗೆ ಅಮಾನತು ಪೊಲೀಸರನ್ನು ಮರು ನೇಮಿಸಿ. ತನಿಖೆ ನಂತರ ಶಿಸ್ತು ಕ್ರಮ ಅಗತ್ಯವಿದ್ದರೆ, ಕೈಗೊಳ್ಳಿ. ಕಾಲ್ತುಳಿತ ದುರಂತ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸ್ತೇವೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪತ್ರ ಬರೆದಿದೆ.
ಪತ್ರದಲ್ಲಿ ಏನಿದೆ?
ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ವಿಚಾರ ತಿಳಿದು ದುಃಖಿತರಾಗಿದ್ದೇವೆ. ಈ ಕಾಲ್ತುತಿಳಿತದಲ್ಲಿ ಅನೇಕ ಅಮೂಲ್ಯ ಜೀವಗಳು ಬಲಿಯಾದವು. ಕಾಲ್ತುಳಿತ ದುರಂತ ಪ್ರಕರಣಕ್ಕೆ ಭಾರತೀಯ ಪೊಲೀಸ್ ಒಕ್ಕೂಟ ವಿಷಾದ ವ್ಯಕ್ತಪಡಿಸ್ತೇದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಕರ್ನಾಟಕ ಸರ್ಕಾರವು ಘಟನೆಯ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ತಿಳಿದು ನಮಗೆ ಸಂತೋಷವಾಗಿದೆ.
ಆದಾಗ್ಯೂ, ವಿವರವಾದ ತನಿಖೆ ಪೂರ್ಣಗೊಳ್ಳುವ ಮೊದಲೇ ಪೊಲೀಸ್ ಆಯುಕ್ತರು ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ದೇಶಾದ್ಯಂತ ವೃತ್ತಿಪರ ಪೊಲೀಸ್ ಸಮುದಾಯದಲ್ಲಿ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ವೈಯಕ್ತಿಕ ಜವಾಬ್ದಾರಿಯನ್ನು ಸ್ಥಾಪಿಸದೆ ತೆಗೆದುಕೊಳ್ಳುವ ಕ್ರಮಗಳನ್ನು ತತ್ವಬದ್ಧ ಹೊಣೆಗಾರಿಕೆಯ ಬದಲು ಬಲಿಪಶುವಾಗಿ ನೋಡಲಾಗುತ್ತದೆ ಮತ್ತು ಇಡೀ ಪೊಲೀಸ್ ಪಡೆಯ ಮೇಲೆ ನಿರಾಶಾದಾಯಕ ಪರಿಣಾಮ ಬೀರಬಹುದು, ಆದರೆ ಸಾಂಸ್ಥಿಕ ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ.
ಈ ರೀತಿಯ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳು, ವಿಶೇಷವಾಗಿ ಅಂತಹ ಕಡಿಮೆ ಸಮಯದಲ್ಲಿ ಮತ್ತು ಪೂರ್ವಸಿದ್ಧತಾ ಕಾರ್ಯಗಳಿಗೆ ಸಾಕಷ್ಟು ಸಮಯವಿಲ್ಲದೆ ನಡೆದಾಗ, ಬಹು ನಾಗರಿಕ, ಆಡಳಿತ ಮತ್ತು ರಾಜಕೀಯ ಸಂಸ್ಥೆಗಳ ನಡುವೆ ಸಂಘಟಿತ ಪ್ರಯತ್ನಗಳು ಬೇಕಾಗುತ್ತವೆ. ಇತರ ಪಾಲುದಾರರು ಪರಿಶೀಲನೆಯಿಂದ ತಪ್ಪಿಸಿಕೊಳ್ಳುವಾಗ, ಪೊಲೀಸರನ್ನು ಶಿಕ್ಷಾರ್ಹ ಕ್ರಮಕ್ಕಾಗಿ ಪ್ರತ್ಯೇಕಿಸುವುದು, ಹಂಚಿಕೆಯ ಜವಾಬ್ದಾರಿಯ ವಾಸ್ತವತೆಯನ್ನು ವಿರೂಪಗೊಳಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಸಮಗ್ರ ಪಾಠಗಳನ್ನು ಕಲಿಯುವ ಅವಕಾಶವನ್ನು ಕಳೆದುಕೊಳ್ಳುತ್ತದೆ.
ವಿಚಾರಣೆ ಮುಗಿಯುವವರೆಗೂ ಅಮಾನತುಗೊಂಡ ಅಧಿಕಾರಿಗಳನ್ನು ಮತ್ತೆ ನೇಮಿಸುವಂತೆ ಮತ್ತು ತನಿಖೆ ಸಮಂಜಸ ಮತ್ತು ವಿಶ್ವಾಸಾರ್ಹ ಸಮಯದೊಳಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವಂತೆ ನಾವು ಕರ್ನಾಟಕ ಸರ್ಕಾರವನ್ನು ಗೌರವದಿಂದ ಒತ್ತಾಯಿಸುತ್ತೇವೆ. ಶಿಸ್ತು ಕ್ರಮ, ಅಗತ್ಯವಿದ್ದರೆ, ಸಂಶೋಧನೆಗಳ ಆಧಾರದ ಮೇಲೆ ತೆಗೆದುಕೊಳ್ಳಬೇಕು ಮತ್ತು ಅವುಗಳಿಗೆ ಮುಂಚಿತವಾಗಿರಬಾರದು.
ಅಧಿಕಾರಿಗಳ ಅಮಾನತಿಗೆ ಕಾಂಗ್ರೆಸ್ ವಕ್ತಾರ ಸಮರ್ಥನೆ
ಐವರು ಅಧಿಕಾರಿಗಳನ್ನು ಅಮಾನತು ಮಾಡಿದನ್ನು ಕಾಂಗ್ರೆಸ್ನ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರನ್ನು ಅಮಾನತು ಮಾಡಿದ್ದಕ್ಕೆ ಸಾಕಷ್ಟು ವಿಚಾರ ಪ್ರಸ್ತಾಪವಾಗುತ್ತಿವೆ. ಬಿ.ದಯಾನಂದ್ ಅವರು ಈ ಹಿಂದೆ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಕಾಲ್ತುಳಿತ ಸಂಭವಿಸಿದಾಗ ಸಿಎಂಗೆ ಮಾಹಿತಿ ನೀಡುವುದು ವಿಳಂಬವಾಯಿತು. ದಯಾನಂದ್ ಅವರನ್ನು ಸಿಎಂ ಸಿದ್ದರಾಮಯ್ಯನವರೇ ಕಮಿಷನರ್ ಮಾಡಿದ್ದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ದಯಾನಂದ್ರನ್ನು ಮುಂದುವರೆಸಿದರು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಸಮರ್ಥಿಸಿಕೊಂಡರು.
ಇದನ್ನೂ ಓದಿ: RCB ಮಾರ್ಕೆಟಿಂಗ್ ಹೆಡ್ಗೆ ನಿರಾಸೆ, ಇಂದು ಕೋರ್ಟ್ನಲ್ಲಿ ಏನೇನಾಯ್ತು?
ಅಮಾನತಾದ ಐವರು ಅಧಿಕಾರಿಗಳು
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಜೂನ್ 05) ರಾತ್ರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್.ಎ.ಕೆ ಅವರನ್ನು ಅಮಾನತು ಮಾಡಲಾಗಿದೆ.







