ಬೆಂಗಳೂರು ಕಾಲ್ತುಳಿತ: ಕೈ ಹೈಕಮಾಂಡ್ ನಿಗಿನಿಗಿ, ಬೆಳ್ಳಂಬೆಳಗ್ಗೆ ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಸಿಎಂ, ಡಿಸಿಎಂ
ಆರ್‌ಸಿಬಿ ಪಂದ್ಯದ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟ ಘಟನೆಯಿಂದ ಕಾಂಗ್ರೆಸ್ ಹೈಕಮಾಂಡ್ ಆಕ್ರೋಶಗೊಂಡಿದೆ. ದುರಂತದ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿಯೊಂದಿಗೆ ಮಹತ್ವದ ಚರ್ಚೆ ಮಾಡಲಿದ್ದಾರೆ.

ಬೆಂಗಳೂರು, ಜೂನ್ 10: ಕಾಲ್ತುಳಿತ (stampede) ದುರಂತ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿತ್ತು. ಆರ್‌ಸಿಬಿ ಗೆದ್ದ ಸಂಭ್ರಮದಲ್ಲಿ ಬಂದಿದ್ದ ಅಭಿಮಾನಿಗಳ ಪೈಕಿ 11 ಜನ ಉಸಿರು ಗಟ್ಟಿ ಸತ್ತು ಹೋಗಿದ್ದರು. ಇದೇ ಘೋರ, ರಾಜ್ಯ ಸರ್ಕಾರಕ್ಕೆ ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿದೆ. ತನಿಖೆ ನಡೆಯುತ್ತಿರುವ ಹೊತ್ತಲ್ಲೇ ವಿಪಕ್ಷಗಳ ದಾಳಿ ಕೂಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ರಾಷ್ಟ್ರಮಟ್ಟದಲ್ಲೂ ಸರ್ಕಾರಕ್ಕೆ ಆರ್‌ಸಿಬಿ ಕಾಲ್ತುಳಿತ ಕಪ್ಪು ಚುಕ್ಕೆಯಾಗಿದೆ. ಇದೇ ದುರ್ಘಟನೇಗೀಗ ಕೈ ಹೈಕಮಾಂಡ್ (High Command) ಮಧ್ಯಪ್ರವೇಶ ಮಾಡಿದ್ದು, ವರಿಷ್ಠರ ಬುಲಾವ್ ಬೆನ್ನಲ್ಲೇ ಇಂದು ಬೆಳಿಗ್ಗೆ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.
ಒಂದಲ್ಲ, ಎರಡಲ್ಲ ಬರೋಬ್ಬರಿ 11 ಜನ ಜೀವ ಪಡೆದ ಘೋರ ದುರಂತ, ಇಡೀ ದೇಶವನ್ನೇ ಕಂಗೆಡಿಸಿದೆ. ರಾಷ್ಟೀಯ ಮಟ್ಟದಲ್ಲೂ ಕರ್ನಾಟಕ ಸರಕಾರಕ್ಕೆ ಛೀಮಾರಿ ಜೊತೆ ಮುಜುಗರಕ್ಕೂ ಕಾರಣವಾಗಿತ್ತು. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿತ್ತು. ಘಟನೆ ನಡೆದ ದಿನವೇ ಪ್ರಾಥಮಿಕ ಮಾಹಿತಿ ಪಡೆದಿದ್ದ ವರಿಷ್ಠರು, ಈಗ ಸಂಪೂರ್ಣ ವರದಿ ಪಡೆಯಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ರಾಹುಲ್ ಗಾಂಧಿಯನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ವರದಿ ಒಪ್ಪಿಸಲಿರುವ ಸಿಎಂ ಸಿದ್ದರಾಮಯ್ಯ
- ರಾಹುಲ್ ಗಾಂಧಿಗೆ ಕಾಲ್ತುಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
- ಆರ್‌ಸಿಬಿ ಪರೇಡ್, ವಿಧಾನಸೌಧ ಕಾರ್ಯಕ್ರಮ, ಚಿನ್ನಸ್ವಾಮಿ ವಿಜಯೋತ್ಸವದ ಬಗ್ಗೆ ವರದಿ ಸಲ್ಲಿಕೆ.
- ಘೋರ ಕಾಲ್ತುಳಿತದ ಟೈಮ್ ಲೈನ್ ವಿವರಿಸಲಿರುವ ಸಿಎಂ.
- ಕಾಲ್ತುಳಿತಕ್ಕೆ ಕಾರಣವೇನು? ಯಾರ ಲೋಪದೋಷ, ಎಲ್ಲಿ ಎಡವಿದ್ದು? ಕೆಎಸ್ಸಿಎ ಪಾತ್ರವೇನು? ರಾಜ್ಯ ಸರ್ಕಾರದ ಪಾತ್ರದ ಕುರಿತು ವರದಿ ಸಲ್ಲಿಕೆ.
- ಹಾಗೆಯೇ ವಿಜಯೋತ್ಸವದ ಹಿಂದಿನ ದಿನ ಜರುಗಿದ ಪತ್ರದ ವ್ಯವಹಾರ ಬಗ್ಗೆಯೂ ಚರ್ಚೆ.
- ಕಾಲ್ತುಳಿತ ಪ್ರಕರಣವನ್ನು ವಿಪಕ್ಷಗಳು ಅಸ್ತ್ರ ಮಾಡಿಕೊಂಡಿವೆ ಅನ್ನೋದರ ಬಗ್ಗೆ ರಾಹುಲ್ಗೆ ಮನವರಿಕೆ.
- ಈಗಾಗಲೇ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮದ ಬಗ್ಗೆ ಮಾಹಿತಿ.
ಇದಿಷ್ಟೇ ಅಲ್ಲದೇ, ಈಗಾಗಲೇ ಕೆ.ಸಿ ವೇಣುಗೋಪಾಲ್ಗೆ ದೂರವಾಣಿ ಮೂಲಕ ಸಿಎಂ ಮತ್ತು ಡಿಸಿಎಂ ಮಾಹಿತಿ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಲೋಪದೋಷದ ಬಗ್ಗೆಯೂ ಚರ್ಚೆಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ಗೆ ಮುಜುಗರವಾಗಿರುವ ಕಾಲ್ತುಳಿತ ದುರಂತದ ಬಗ್ಗೆ ಖುದ್ದಾಗಿ ರಾಹುಲ್ ಗಾಂಧಿ ವರದಿ ಪಡೆದುಕೊಳ್ಳಲಿದ್ದಾರೆ. ಹಾಗಯೇ ಹೆಚ್ಚುವರಿ ಸಮಯದ ಸಿಕ್ಕರೆ, ಸಂಪುಟ ವಿಸ್ತರಣೆ, ಎಂಎಲ್ಸಿ ಆಯ್ಕೆ ಕುರಿತಂತೆಯೂ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಚ್ಡಿಕೆ ಗಂಭೀರ ಆರೋಪ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಗೋವಿಂದಾ!
ಇದರ ಮಧ್ಯೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 11 ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಸ್ವಯಂ ಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್, ಇಂದು ವಿಚಾರಣೆ ಇರೋದ್ರಿಂದ ನಿನ್ನೆ ಸಿಎಂ ಸಭೆ ಮಾಡಿದ್ದರು. ಕಾನೂನು ಸಚಿವ ಹೆಚ್ಕೆ ಪಾಟೀಲ್ ಜೊತೆ ಕಾನೂನಿನಾತ್ಮಕವಾಗಿ ಏನೆಲ್ಲಾ ಮಾಡಬೇಕು ಎಂದು ಚರ್ಚೆ ಮಾಡಿದ್ದರು. ಸಭೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್, ಸಿಎಸ್ ಶಾಲಿನಿ ರಜನೀಶ್ ಸಹ ಭಾಗಿಯಾಗಿದ್ದರು. ಇದಕ್ಕೂ ಮೊದಲು ಡಿಜಿ ಐಜಿಪಿ ಸಲೀಂ ಕಡೆಯಿಂದಲೂ ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಎಂ ಮಾಹಿತಿ ಪಡೆದುಕೊಂಡಿದ್ದರು. ಸದ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರಿಗೆ ಘೋರ ದುರಂತದ ಬಗ್ಗೆ ಇಂಚಿಂಚು ಮಾಹಿತಿಯಿರುವ ವರದಿ ಸಲ್ಲಿಸಲಿದ್ದಾರೆ.
ವರದಿ: ಪ್ರಮೋದ್ ಶಾಸ್ತ್ರ ಜೊತೆ ಈರಣ್ಣಾ ಬಸವಾ ಟಿವಿನೈನ್ ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 am, Tue, 10 June 25