ಎಚ್ಡಿಕೆ ಗಂಭೀರ ಆರೋಪ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಗೋವಿಂದಾ!
ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದ, ಹಲವರು ಗಾಯಗೊಂಡಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬೊಬ್ಬರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತಿದ್ದಾರೆ. ಈಗಾಗಲೇ ಪೊಲೀಸರನ್ನು ಸಸ್ಪೆಂಡ್ ಮಾಡಿದ ಬೆನ್ನಲ್ಲೇ ಇದೀಗ ತಮ್ಮ ರಾಜಕೀಯ ಕಾರ್ಯದರ್ಶಿಗೂ ಗೇಟ್ ಪಾಸ್ ನೀಡಿದ್ದಾರೆ.

ಬೆಂಗಳೂರು, (ಜೂನ್ 06): ವಿಧಾನಸೌಧದ ಮುಂದೆ ತರಾತುರಿಯ ಸಂಭ್ರಮಾಚರಣೆಯ ಹಿಂದೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು (Govindaraju) ಪಾತ್ರವಿತ್ತು ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ಬಿಡುಗಡೆ ಮಾಡಲಾಗಿದೆ. ಹಾಲಿ ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಗೋವಿಂದರಾಜು , ತರಾತುರಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಕೆಲ ಸಚಿವರು ಗರಂ ಆಗಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಗೋವಿಂದರಾಜು ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜುಗೆ ಗೇಟ್ ಪಾಸ್ ನೀಡಲಾಗಿದೆ.
ಗೋವಿಂದರಾಜು ಒತ್ತಡದಿಂದಲೇ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ ಎಂದು ಗೋವಿಂದರಾಜು ವಿರುದ್ದ ಸಿಎಂ ಆಪ್ತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಇದೇ ಗೋವಿಂದರಾಜು ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಕೇಳಿ: Bangalore Stampede: ಸಿದ್ದರಾಮಯ್ಯ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: ಹೆಚ್ಡಿಕೆ ಆರೋಪ ಯಾರ ಬಗ್ಗೆ!?
ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೂಲಕ ಕಾರ್ಯಕ್ರಮ ಆಯೋಜನೆ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾಗಿರುವ ಸರ್ಕಾರ, ಗೋವಿಂದರಾಜು ಒತ್ತಡದಿಂದಲೇ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ ಎಂದು ಗೋವಿಂದರಾಜು ವಿರುದ್ದ ಸಿಎಂ ಆಪ್ತರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ಸಿಎಂ ಸಿದ್ದರಾಮಯ್ಯ ಅವರು ತೆರವುಗೊಳಿಸಿ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಗೋವಿಂದ ಗೋವಿಂದ ಅಂತ ಭಜನೆ ಮಾಡುವ ವ್ಯಕ್ತಿಯಿಂದಲೇ ವಿಧಾನಸೌದದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಕಾರ್ಯಕ್ರಮ ನಡೆದಿದೆ. ಈ ವ್ಯಕ್ತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಜೂ. 4 ರಂದು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ನೀಡಬೇಕು ಮತ್ತು ಭದ್ರತೆ ನೀಡಬೇಕು ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರಿಗೆ ಕೊಕ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Fri, 6 June 25








