ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತೆ ಕಡ್ಡಾಯ: ಇ-ಖಾತೆ ಹೇಗೆ ಪಡೆಯಬೇಕು? ಇದರ ಪ್ರಯೋಜನೆಗಳೇನು?
ಬೆಂಗಳೂರಿನಲ್ಲಿ ಇನ್ಮುಂದೆ ಕಟ್ಟಡ ನಕ್ಷೆ ಮಂಜೂರಾತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಆಸ್ತಿ ಖರೀದಿ ಮಾಡುವುದು ಅಥವಾ ಮಾರಾಟ ಮಾಡುವುದಕ್ಕೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಇದೀಗ ವಿವಿಧ ಆಸ್ತಿಗಳಿಗೂ ಇ - ಖಾತಾವನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಹಾಗಾದ್ರೆ, ಇ - ಖಾತೆ ಹೇಗೆ-ಎಲ್ಲಿ ಪಡೆಯಬೇಕು? ಇ - ಖಾತೆ ಉಪಯೋಗಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಇನ್ಮುಂದೆ ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತೆ ಕಡ್ಡಾಯಗೊಳಿಸಲಾಗಿದೆ. ಜುಲೈ1 ರಿಂದ ನಕ್ಷೆ ಮುಂಜೂರಾತಿಗೆ ಇ-ಖಾತಾ ಸಲ್ಲಿಕೆ (e khata mandatory) ಕಡ್ಡಾಯ ಮಾಡಿ ಬಿಬಿಎಂಪಿ (BBMP) ಕಮಿಷನರ್ ಮಹೇಶ್ವರ್ ರಾವ್ ಅವರು ಇಂದು (ಜೂನ್ 09) ಅಧಿಕೃತ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇನ್ಮುಂದೆ ಆನ್ ಲೈನ್ ನಂಬಿಕೆನಕ್ಷೆ ಸೇರಿ ಎಲ್ಲಾ ಅರ್ಜಿಗೆ ಇ-ಖಾತಾ ಕಡ್ಡಾಯವಾಗಲಿದೆ.
01-07-2025 ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ.
ಯಾವುದೇ ಆಸ್ತಿಯನ್ನು ಕೊಳ್ಳುವವರು ಇ- ಖಾತೆ ಕಡ್ಡಾಯವಾಗಿ ಮಾಡಿಸಬೇಕಿದೆ. ಮಾರಾಟವಾಗುವ ಪ್ರತಿಯೊಂದು ಆಸ್ತಿಗೂ ನೋಂದಾವಣಿ ಸಂದರ್ಭದಲ್ಲಿ ಇ- ಖಾತೆ ಮಾಡಿಸಬೇಕಿದ್ದು, ಪ್ರತಿಯೊಂದು ಇ-ಖಾತೆಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಆ ಸಂಖ್ಯೆಯನ್ನು ಈಗ ನೋಂದಾವಣಿಯಾಗುತ್ತಿರುವ ಕಾವೇರಿ – 2 ಸಾಫ್ಟ್ ವೇರ್ ಅಡಿಯಲ್ಲೇ ನೀಡಲಾಗುತ್ತದೆ. ಎಲ್ಲಾ ಬಿಡಿಎ, ಎ ಖಾತೆ, ಬಿ ಖಾತ ಸೇರಿದಂತೆ ಎಲ್ಲಾ ರೀತಿಯ ಖಾತೆಗಳಿಗೆ ಇ- ಖಾತೆ ಇನ್ನು ಕಡ್ಡಾಯವಾಗಲಿದೆ. ಇದರ ಜೊತೆಗೆ, ಈವರೆಗೆ ನೀಡಲಾಗುತ್ತಿದ್ದ ಪೇಪರ್ ಖಾತೆಗಳು ಇನ್ನು ಮುಂದೆ ರದ್ದಾಗಲಿವೆ.
ಇ – ಖಾತೆ ಹೇಗೆ-ಎಲ್ಲಿ ಪಡೆಯಬೇಕು?
ಇ – ಖಾತೆಗಳನ್ನು ಮಾಡಿಸಲು ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ, ಅಲ್ಲಿ ಸಕಲ ಕ್ಯಾಟಗರಿಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಇ – ಖಾತೆಯ ಆಯ್ಕೆಯನ್ನು ಆಪ್ಟ್ ಮಾಡಿ ಅಲ್ಲಿ ವಿವರಗಳನ್ನು ನಮೂದಿಸಿ ಇ – ಖಾತೆಗೆ ಅಪ್ಲೈ ಮಾಡಬೇಕು. ಅಪ್ಲೈ ಮಾಡಿದ ನಂತರ ಮೂರರಿಂದ ಐದು ದಿನಗಳಲ್ಲಿ ಖಾತೆ ಸಿದ್ಧವಾಗುತ್ತದೆ. ಆನಂತರ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಇ – ಖಾತೆಯ ಪ್ರಯೋಜನೆಗಳು
ಇ – ಖಾತೆಯಿಂದಾಗುವ ಬಹುಮುಖ ಪ್ರಯೋಜನಗಳೆಂದರೆ, ಬೆಂಗಳೂರಿನಲ್ಲಿ ಆಸ್ತಿ ವಿಚಾರದಲ್ಲಿ ಆಗುವ ಮೋಸಗಳನ್ನು ತಡೆಯುವುದು. ಮೇಲೆ ತಿಳಿಸಿದಂತೆ, ಯಾವುದೇ ಆಸ್ತಿಯ ಇ – ಖಾತೆಯನ್ನು ಮಾಡಿಸಿದಾಗ ಪ್ರತ್ಯೇಕ ನಂಬರ್ ನೀಡಲಾಗುತ್ತದೆ. ಆ ನಂಬರ್ ಅನ್ನು ಕಾವೇರಿ ಸಾಫ್ಟ್ ವೇರ್ ಅಥವಾ ಮತ್ಯಾವುದೇ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಸಾಫ್ಟ್ ವೇರ್ ಗಳಲ್ಲಿ ಹಾಕಿ ನೋಡಿದಾಗ ಆ ಆಸ್ತಿ ಮಾಲೀಕರು ಯಾರು, ಯಾವಾಗ ಅದು ರಿಜಿಸ್ಟ್ರೇಷನ್ ಆಗಿತ್ತು, ತೆರಿಗೆಯನ್ನು ಪೂರ್ತಿಯಾಗಿ ಪಾವತಿಸಲಾಗಿದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ.
ಇ – ಖಾತೆಯ ಮೂಲಕ ಡಬಲ್ ರಿಜಿಸ್ಟ್ರೇಷನ್, ಅಕ್ರಮ ಹಣಕಾಸು ವಹಿವಾಟು ಅಥವಾ ಮತ್ಯಾವುದೇ ಕಳ್ಳಾಟಗಳು ನಡೆದಿರುವುದು ಗೊತ್ತಾಗಲಿದೆ. ಅಲ್ಲದೆ, ಗ್ರಾಹಕರು ಕೊಳ್ಳಲಿರುವ ಸೈಟುಗಳು, ಮನೆಗಳು ಇರುವ ಬಡಾವಣೆಗಳು ಅಕ್ರಮವೋ, ಸಕ್ರಮವೋ ಎಂಬುದೂ ಸಹ ಇದರಲ್ಲಿ ಗೊತ್ತಾಗಲಿದೆ.
ನಿರ್ದಿಷ್ಟ ಆಸ್ತಿಯನ್ನು ಡಬಲ್ ರಿಜಿಸ್ಟ್ರೇಷನ್ ಮಾಡಿಸಲಾಗಿದೆಯೇ, ಮೋಸದ ವ್ಯವಹಾರ ಈ ಹಿಂದೆ ಆಗಿತ್ತೇ ಅಥವಾ ಮತ್ಯಾವುದೇ ಕಳ್ಳ ವ್ಯವಹಾರಗಳು ಆಗಿವೆಯೇ ಎಂಬುದನ್ನು ಅಲ್ಲಿ ತೋರಿಸುತ್ತದೆ. ಅಷ್ಟೇ ಅಲ್ಲದೆ, ಗ್ರಾಹಕರು ಕೊಳ್ಳಲಿರುವ ಸೈಟು ಅಥವಾ ಮನೆಯಿರುವ ಬಡಾವಣೆಯು ಅಧಿಕೃತವೋ, ಅನಧಿಕೃತವೋ ಎಂಬುದೂ ಸಹ ಗೊತ್ತಾಗಲಿದೆ. ಮತ್ತೊಂದು ವಿಚಾರವೇನೆಂದರೆ, ಈ ಮೊದಲು ಬಿಡಿಎ, ಎ – ಖಾತೆ, ಬಿ – ಖಾತೆ.. ಹೀಗೆ ಯಾವುದೇ ಖಾತೆಯಾಗಿದ್ದರೆ ಮಾತ್ರ ಇ – ಖಾತೆಯಾಗುತ್ತದೆ.




