ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮನೆಗೆ ಬೀಗ: ಸೂರು ಇಲ್ಲದೇ ಅಂಗಳದಲ್ಲೇ ವೃದ್ಧ ದಂಪತಿ ಜೀವನ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವೃದ್ಧ ದಂಪತಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರ ಹಾಕಿ, ಬೀಗ ಜಡಿದು ನೋಟಿಸ್ ಅಂಟಿಸಿ ಹೋಗಿದ್ದಾರೆ. ವೃದ್ಧ ದಂಪತಿ ಕಳೆದ ಐದು ತಿಂಗಳಿಂದ ಹಣ ಪಾವತಿಸಲು ವಿಫಲರಾಗಿದ್ದರಿಂದ, ಮನೆಯಿಂದ ಹೊರಗೆ ಹಾಕಲಾಗಿದೆ.ಸರ್ಕಾರದ ಸುಗ್ರೀವಾಜ್ಞೆ ಜಾರಿ ನಂತರವೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆದಿದೆ.

ದಾವಣಗೆರೆ, ಜುಲೈ 01: ಕಳೆದ ಕೆಲ ತಿಂಗಳ ಹಿಂದೆ ಮೈಕ್ರೋ ಫೈನಾನ್ಸ್ (Micro Finance) ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಹಲವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ (Karnataka Government) ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೂ ಕೂಡ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ನಿಲ್ಲುತ್ತಿಲ್ಲ. ದಾವಣಗೆರೆ ಜಿಲ್ಲೆ ಹರಿಹರದ ಹಮಾಲರ ಕಾಲೋನಿಯಲ್ಲಿ ವಾಸವಾಗಿರುವ ವೃದ್ಧ ದಂಪತಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಗೆ ಹಾಕಿ, ಬೀಗ ಜಡಿದು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಅಕ್ಬರ್ ಸಾಬ್ (85), ಫಾತೀಮಾ (65) ದಂಪತಿ ನಾಲ್ಕು ವರ್ಷಗಳ ಹಿಂದೆ ಮೈಕ್ರೋ ಫೈನಾನ್ಸ್ನಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು 18 ಸಾವಿರ ಹಣ ಪಾವತಿಸುತ್ತಿದ್ದರು. ಕಳೆದ ಐದು ತಿಂಗಳಿನಿಂದ ವೃದ್ಧ ದಂಪತಿಗೆ ಹಣ ಕಟ್ಟಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜೂನ್ 2ರಂದು ವೃದ್ಧ ದಂಪತಿಯನ್ನು ಮನೆಯಿಂದ ಹೊರಗೆ ದಬ್ಬಿ, ಬೀಗ ಹಾಕಿಕೊಂಡು ಹೋಗಿದ್ದಾರೆ.
ಇದರಿಂದ, ವೃದ್ಧ ದಂಪತಿ ಕಳೆದ ಒಂದು ತಿಂಗಳಿನಿಂದ ಸೂರು ಇಲ್ಲದೆ ಮನೆಯ ಬಾಗಿಲಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇನ್ನು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಹೆದರಿ ಮಗ ತಂದೆ-ತಾಯಿಯನ್ನು ಬಿಟ್ಟು ಹೋಗಿದ್ದಾನೆ. ಮನೆಯಲ್ಲಿ ವಾಸಿಸಲು ಅವಕಾಶ ನೀಡುವಂತೆ ವೃದ್ಧ ದಂಪತಿ ಮನವಿ ಮಾಡಿದ್ದಾರೆ.
ಮನೆಗೆ ಬಂದು ಗಲಾಟೆ: ಮರ್ಯಾದೆಗೆ ಅಂಜಿ ನೇಣಿಗೆ ಶರಣು
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ವಿಜಯನಗರ ಜಿಲ್ಲೆಯ ಹೂವಿನಗಡಗಲಿ ತಾಲೂಕಿನ ಮೈಲಾರ ಗ್ರಾಮದ ಓರ್ವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದರು. ರತ್ನಮ್ಮ ಎಂಬುವವರು ಕುಟುಂಬಕ್ಕಾಗಿ ಮೈಕ್ರೋ ಫೈನಾನ್ಸ್ಗಳಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ತೀರಿಸುವುದು ತಡವಾಗಿದ್ದಕ್ಕೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ರತ್ನಮ್ಮ, ಮನೆಯಲ್ಲೇ ನೇಣಿಗೆ ಶರಣಾಗಿದ್ದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ಡ್ರಾಫ್ಟ್ ರಾಜ್ಯಪಾಲರಿಗೆ ರವಾನೆ: ಜೈಲು ಶಿಕ್ಷೆಯಲ್ಲಿ ಬದಲಾವಣೆ
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲೂ ಬಡ್ಡಿ ಕಿರಕುಳಕ್ಕೆ ಬೇಸತ್ತು, ಕುಂದಗೋಳ ನಿವಾಸಿ ಸುನಿಲ್ ಆತ್ಮಹತ್ಯೆಗೆ ಯತ್ನಿಸಿದ್ದರು. ಕಾರ್ ವಿಚಾರವಾಗಿ 30 ಸಾವಿರ ರೂ. ಸಾಲ ಪಡೆದಿದ್ದು, ಅದಕ್ಕೆ ಪ್ರತಿಯಾಗಿ ಎರಡೂವರೆ ಲಕ್ಷ ರೂ. ಸಾಲ ಕಟ್ಟಿದ್ದರು. ಇನ್ನೂ ಹಣ ಕಟ್ಟುವಂತೆ ಸಂತು ಎಂಬುವನು ನಿತ್ಯ ಕಿರುಕುಳ ಕೊಡುತ್ತಿದ್ದನಂತೆ. ಇದರಿಂದ ಬೇಸತ್ತ ಸುನೀಲ್, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಸುಗ್ರೀವಾಜ್ಞೆ ಷರತ್ತುಗಳು ಮೀರಿದರೆ ಏನಾಗುತ್ತೆ?
ಸುಗ್ರೀವಾಜ್ಞೆಯ ಕಾನೂನು ಮೀರಿದರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ ವಿಧಿಸಲಾಗುತ್ತೆ. ನೋಂದಣಿ ಆಗದ ಸಂಸ್ಥೆಗಳು ನೀಡುವ ಸಾಲ ಮತ್ತು ಬಡ್ಡಿ ಮನ್ನಾ ಆಗಲಿದೆ. ಸಾಲಗಾರರ ವಿರುದ್ಧ ಯಾವುದೇ ಸಿವಿಲ್ ಕೋರ್ಟ್ನಲ್ಲಿ ಕೇಸ್ ದಾಖಲಿಸಬಹುದು. ಕಿರುಕುಳ ಸಂಬಂಧ ಪೊಲೀಸ್ ಠಾಣೆಗೆ ದೂರುಕೊಡಬಹುದು. DYSP ಶ್ರೇಣಿಗಿಂತ ಮೇಲಿನ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬಹುದು. ವಿವಾದಗಳನ್ನು ಇತ್ಯರ್ಥಪಡಿಸಲು ಒಂಬುಡ್ಸ್ಮೆನ್ ನೇಮಕಕ್ಕೂ ಅವಕಾಶ ನೀಡಲಾಗಿದೆ.







