ಸರ್ಕಾರದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೆಷ್ಟೋ ಜನರು ಬೀದಿಗೆ ಬಿದ್ದಿದ್ದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜನರು ರೋಸಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಹೊರಟಿತ್ತು. ಆದರೆ, ಇದೀಗ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಬೆಂಗಳೂರು, ಫೆಬ್ರವರಿ 07: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ರಾಜ್ಯ ಸರ್ಕಾರದ (Karnataka Government) ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ವಾಪಸ್ ಕಳುಹಿಸಿದ್ದಾರೆ. “ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ” ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
“ಸಾಲ ಪಡೆಯುವವನ ಬಳಿ ಏನೂ ದಾಖಲೆ ತಗೆದುಕೊಳ್ಳಬಾರದು ಎಂದು ಹೇಳಿದ್ದೀರಾ, ಆದರೆ ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಶಿಕ್ಷೆ ಪ್ರಮಾಣ ಹತ್ತು ವರ್ಷ ವಿಧಿಸಲಾಗಿದೆ. ಶಿಕ್ಷೆ ಪ್ರಮಾಣದಲ್ಲಿ ಯಾವುದೇ ಲಾಜಿಕ್ ಇಲ್ಲ. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ ಇದು ಎಫೆಕ್ಟ್ ಆಗಲಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಸಮಸ್ಯೆ ಆಗಲಿದೆ. ಬಜೆಟ್ ಅಧಿವೇಶನದಲ್ಲಿ ಸಾದಕ-ಬಾಧಕ ಚರ್ಚಿಸಿ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಪೊಲೀಸರು ಸರಿಯಾದ ಕ್ರಮಕೈಗೊಳ್ಳದೇ ಇರುವುದರಿಂದ ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ” ಎಂದು ಸುಗ್ರೀವಾಜ್ಞೆ ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಮೈಕ್ರೋಫೈನಾನ್ಸ್ ಕಂಪನಿಗಳು
ಸಾಲ ವಸೂಲಾತಿ ನೆಪದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಗ್ರಾಮಸ್ಥರು ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ರೋಸಿ ಹೋಗಿ ಊರನ್ನೇ ತ್ಯಜಿಸಿದ್ದಾರೆ. ಇನ್ನು ಕೆಲವು ಗ್ರಾಮಗಳಲ್ಲಿ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್ನವರು ರಾತ್ರೋರಾತ್ರಿ ಮನೆ ಕಾಲಿ ಮಾಡಿಸಿದ್ದಾರೆ. ಈ ಕಿರುಕುಳದಿಂದ ಬೇಸತ್ತ ಜನರು ಮೈಕ್ರೋ ಫೈನಾನ್ಸ್ನವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇವೆಲ್ಲವನ್ನು ಕಂಡ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಬ್ರೇಕ್ ಹಾಕಲು ಸುಗ್ರಿವಾಜ್ಞೆ ಮೂಲಕ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಹೊಸ ನಿಮಯಗಳನ್ನು ರಚಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಕರಡನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು ಹಲವು ಸ್ಪಷ್ಟನೆ ಕೇಳಿ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Fri, 7 February 25




