ಸುಗ್ರೀವಾಜ್ಞೆಗಿಲ್ಲ ಕಿಮ್ಮತ್ತು: ಮನೆಗೆ ನುಗ್ಗಿ ಚಿನ್ನದ ಓಲೆ, ಹಣ ತಗೊಂಡು ಹೋದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ತಂದಿದ್ದೇವೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಆದರೆ ಇತ್ತ ರಾಜ್ಯದಲ್ಲಿ ಮಾತ್ರ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮುಂದುವರಿದಿದೆ. ಮನೆಯಲ್ಲಿ ಇಟ್ಟಿದ್ದ 25 ಸಾವಿರ ರೂ ಹಣ ಮತ್ತು ಕಿವಿ ಓಲೈಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕೊಂಡೊಯ್ದ ಆರೋಪ ಮಾಡಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಹಾವೇರಿ, ಮಾರ್ಚ್ 13: ಕರ್ನಾಟಕದಲ್ಲಿ ಸುಗ್ರೀವಾಜ್ಞೆ ಜಾರಿಯಾದರೂ ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ನಿಲ್ಲುತ್ತಿಲ್ಲ. ಕಂತು ವಸೂಲಿಗೆ ಬಂದಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮನೆಯಲ್ಲಿದ್ದ ಚಿನ್ನದ ಓಲೆ, ಹಣ ತೆಗೆದುಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಫೈನಾನ್ಸ್ ಸಿಬ್ಬಂದಿ ವಿರುದ್ಧ ಸಾಲ (loan) ಮಾಡಿದ್ದ ಸಂಪವ್ವ ತಳಗಟ್ಟಿ ದೂರು ನೀಡಿದ್ದು, ರಟ್ಟಿಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಂಪವ್ವ ಕುಟುಂಬ ಫೈನಾನ್ಸ್ ಕಂಪನಿ ಬಳಿ 50 ಸಾವಿರ ರೂ. ಹಣ ಸಾಲ ಪಡೆದುಕೊಂಡಿದ್ದರು. ತಿಂಗಳಿಗೆ ಎರಡು ಕಂತುಗಳಂತೆ 1250 ರೂ ಕಟ್ಟುತ್ತಿದ್ದರು. ಸಂಪವ್ವ ಮತ್ತು ಆಕೆಯ ಮಗಳು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಕಂತು ವಸೂಲಿಗೆ ಫೈನಾನ್ಸ್ ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಇಟ್ಟಿದ್ದ 25 ಸಾವಿರ ರೂ ಹಣ, ಕಿವಿ ಓಲೈ ಕೊಂಡೊಯ್ದಿರುವುದಾಗಿ ಆರೋಪ ಮಾಡಲಾಗಿದೆ.
ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ತಂದಿದ್ದೇವೆ: ಸಚಿವ ಹೆಚ್.ಕೆ.ಪಾಟೀಲ್
ಇನ್ನು ಪರಿಷತ್ನಲ್ಲಿ ಕಿರು ಸಾಲ, ಸಣ್ಣಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ ಬಗ್ಗೆ ಚರ್ಚೆ ಮಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮಕ್ಕೆ ಗ್ರಾಮವೇ ಖಾಲಿಯಾಯ್ತು. ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸುಮಾರು 15 ಮಂದಿ ಆತ್ಮಹತ್ಯೆಗೆ ಶರಣಾದರು. ಜನರ ಮಾನ ಕಳೆಯುವ ಅಮಾನುಷ ರೀತಿ ನೀತಿ ಕಂಡುಬಂತು. ಜನರೂ ಭಯದಲ್ಲಿ ದಿನದೂಡುವಂತಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿವಿ9 ಬಿಗ್ ಇಂಪ್ಯಾಕ್ಟ್: ಸೀಜ್ ಮಾಡಿದ್ದ ಬಾಣಂತಿ ಮನೆ ಓಪನ್ ಮಾಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಸಾಲಕೊಟ್ಟು ಬಳಿಕ ಎಳೆದುಕೊಂಡು ಬಂದು ವಸೂಲಿ ಮಾಡುತ್ತಾರೆ. ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆಯನ್ನು ತಂದಿದ್ದೇವೆ. ಕಿರುಸಾಲ ಹಾಗೂ ಸಣ್ಣ ಸಾಲ ಪ್ರತಿಬಂಧಕ ಸುಗ್ರೀವಾಜ್ಞೆ ತಂದಿದ್ದೇವೆ. ಈ ಬಿಲ್ನಲ್ಲಿ ಕೆಲವು ಸಣ್ಣಪುಟ್ಟ ತಿದ್ದುಪಡಿ ಆಗಿದೆ ಎಂದು ತಿಳಿಸಿದ್ದಾರೆ.
ಮನೆಗೆ ಬಂದು ಗಲಾಟೆ: ಮರ್ಯಾದೆಗೆ ಅಂಜಿ ನೇಣಿಗೆ ಶರಣು
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿಬಂದಿತ್ತು. ವಿಜಯನಗರ ಜಿಲ್ಲೆಯ ಹೂವಿನಗಡಗಲಿ ತಾಲೂಕಿನ ಮೈಲಾರದ ರತ್ನಮ್ಮ ಎಂಬುವವರು ಕುಟುಂಬಕ್ಕಾಗಿ ಮೈಕ್ರೋ ಫೈನಾನ್ಸ್ಗಳಿಂದ 3 ಲಕ್ಷ ರೂ ಸಾಲ ಮಾಡಿದ್ದರು. ಸಾಲ ತೀರಿಸೋದು ತಡವಾಗಿದ್ದಕ್ಕೆ ಮನೆಗೆ ಬಂದು ಗಲಾಟೆ ಮಾಡಿದ್ರಂತೆ. ಇದ್ರಿಂದ ಮನನೊಂದ ರತ್ನಮ್ಮ, ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಕಿರುಕುಳ: ಜ 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲೂ ಬಡ್ಡಿ ಕಿರಕುಳಕ್ಕೆ ಬೇಸತ್ತು, ಕುಂದಗೋಳ ನಿವಾಸಿ ಸುನಿಲ್ ಆತ್ಮಹತ್ಯೆಗೆ ಯತ್ನಿಸಿದ್ದ. ಕಾರ್ ವಿಚಾರವಾಗಿ 30 ಸಾವಿರ ರೂ ಸಾಲ ಪಡೆದಿದ್ದು, ಅದಕ್ಕೆ ಪ್ರತಿಯಾಗಿ ಎರಡೂವರೆ ಲಕ್ಷ ರೂ ಸಾಲ ಕಟ್ಟಿದ್ದರು. ಇನ್ನು ಹಣ ಕಟ್ಟುವಂತೆ ಸಂತು ಅನ್ನೋನು ನಿತ್ಯ ಕಿರುಕುಳ ಕೊಡ್ತಿದ್ನಂತೆ. ಇದ್ರಿಂದ ಬೇಸತ್ತ ಸುನೀಲ್, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.