ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ಡ್ರಾಫ್ಟ್ ರಾಜ್ಯಪಾಲರಿಗೆ ರವಾನೆ: ಜೈಲು ಶಿಕ್ಷೆಯಲ್ಲಿ ಬದಲಾವಣೆ
ಮೈಕ್ರೋ ಫೈನಾನ್ಸ್ನವರ ಅಟ್ಟಹಾಸಕ್ಕೆ ಅಂಕುಶ ಹಾಕಲು, ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿದೆ. ಅದರಂತೆಯೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಿಎಂಗೆ ಡ್ರಾಫ್ಟ್ ಪ್ರತಿ ರವಾನಿಸಿದ್ದರು. ಇದೀಗ ಪರಿಶೀಲಿಸಿದ ಬಳಿಕ ಡ್ರಾಫ್ಟ್ ಪ್ರತಿ ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಈ ಮಧ್ಯೆ ಇಂದು ಒಂದೇ ದಿನ ಐದು ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಾವನ್ನಪ್ಪಿದ್ದಾರೆ.

ಬೆಂಗಳೂರು, ಜನವರಿ 03: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ (micro finance) ಸಿಬ್ಬಂದಿಯ ಕಿರುಕುಳ ತಾರಕಕ್ಕೇರಿದೆ. ಹೀಗಾಗಿ ಫೈನಾನ್ಸ್ ಕಾಟಕ್ಕೆ ಬ್ರೇಕ್ ಹಾಕಲು ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಮುಂದಾಗಿತ್ತು. ಕ್ಯಾಬಿನೆಟ್‌ನಲ್ಲಿ ಅನುಮೋದನೆ, ಕಾನೂನು ವಿಚಾರಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಇದೀಗ ಕರಡು ಪ್ರತಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ. 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆ ಅಂತಾ ಕರಡು ಪ್ರತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಸುಗ್ರೀವಾಜ್ಞೆ ಹೊರಬೀಳಲಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಜಾರಿಗೆ ಗ್ರೀನ್ಸಿಗ್ನಲ್ ಸಿಕ್ಕಿತ್ತು. ಅದರಂತೆಯೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಿಎಂಗೆ ಡ್ರಾಫ್ಟ್ ಪ್ರತಿ ರವಾನೆ ಮಾಡಿದ್ದರು. ಇದೀಗ ಪರಿಶೀಲಿಸಿದ ಬಳಿಕ ಡ್ರಾಫ್ಟ್ ಪ್ರತಿ ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಶಿಕ್ಷೆ ಪ್ರಮಾಣದಲ್ಲಿ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆಗೆ ಒಳಪಡಿಸೋಕೆ ಬದಲಾವಣೆ ಮಾಡಿ ಕರಡು ಪ್ರತಿ ರವಾನೆ ಮಾಡಲಾಗಿದೆ. ಇನ್ನೇನಿದ್ದರೂ ರಾಜ್ಯಪಾಲರ ಅಂಕಿತ ಒಂದೇ ಬಾಕಿ ಇದೆ.
ಫೈನಾನ್ಸ್ ಕಿರುಕುಳಕ್ಕೆ ಇಂದು ಐವರು ಸಾವು
ಸುಗ್ರೀವಾಜ್ಞೆ ಜಾರಿ ಮಾಡುವ ಹೊತ್ತಲ್ಲೂ ಕಿರುಕುಳ ನಿರಂತರವಾಗಿ ಮುಂದುವರೆದಿದ್ದು, ಇಂದು ಕೂಡ ರಾಜ್ಯದಲ್ಲಿ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಜಾರಿ ವಿಳಂಬ ಹಿನ್ನಲೆ ಸಾವಿನ ಸರಣಿ ನಿಲ್ಲುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸಾಲದ ಬಾಧೆಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಕೊರಳೊಡ್ಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್, ಸುಗ್ರೀವಾಜ್ಞೆ ತರಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ
ಗೌರಿಬಿದನೂರು ತಾಲೂಕಿನ ಗ್ರಾಮದ ನರಸಿಂಹಯ್ಯ, ಆಟೋ ಓಡಿಸಿಕೊಂಡು, ಬದುಕಿನ ಬಂಡಿ ಸಾಗಿಸ್ತಿದ್ದ. ಮೂರ್ನಾಲ್ಕು ಮೈಕ್ರೋ ಕಂಪನಿಗಳಲ್ಲಿ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಎರಡ್ಮೂರು ಬಾರಿ ಆಟೋವನ್ನೂ ಅಡವಿಟ್ಟಿದ್ದ. ಕೊನೆಗೆ ಫೈನಾನ್ಸ್ನವರ ಕಿರುಕುಳ ಹೆಚ್ಚಾಗ್ತಿದ್ದಂತೆಯೇ, ರಸ್ತೆ ಬದಿಯೇ ನೇಣಿಗೆ ಶರಣಾಗಿದ್ದಾರೆ.
ಹಾಸನ, ಹಾವೇರಿಯಲ್ಲಿ ಮತ್ತಿಬ್ಬರು ರೈತರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾಗಿದ್ದಾರೆ. ದಾವಣಗೆರೆಯಲ್ಲಿ ಬ್ಯಾಂಕ್ನವರು 2 ಬಾರಿ ನೋಟಿಸ್ ಕೊಟ್ಟಿದ್ದಕ್ಕೆ ಹೆದರಿ, ರೈತ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:01 pm, Mon, 3 February 25