ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್, ಸುಗ್ರೀವಾಜ್ಞೆ ತರಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಜನ ನಲುಗಿ ಹೋಗಿದ್ದಾರೆ. ಸಾವಿನ ಜಾಲ ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪ್ತಿಸುತ್ತಿದೆ. ಇನ್ನೂ ಕೆಲವರು ಆತ್ಮಹತ್ಯೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ. ಅಮಾಯಕರ ಜೀವ ರಕ್ಷಣೆಗೆ ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು, ಫೈನಾನ್ಸ್ಗಳ ಕಡಿವಾಣಕ್ಕೆ ತರಲಿರುವ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಬಳಿ ಅಂಕಿತ ಪಡೆಯಲು ನಿರ್ಧರಿಸಿದೆ.

ಬೆಂಗಳೂರು, (ಜನವರಿ 30): ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದೆ. ಸಿಬ್ಬಂದಿ ಕಿರುಕುಳಕ್ಕೆ ಸಾಲ ಪಡೆದುಕೊಂಡುವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಈ ಮೈಕ್ರೊ ಫೈನಾನ್ಸ್ (Micro Finance) ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕೊನೆಗೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ (Ordinance) ತರಲು ಸಚಿವ ಸಂಪುಟದಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇಂದು (ಜನವರಿ 30) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿಗೆ ತಡೆ ತರುವ ನಿಟ್ಟಿನಲ್ಲಿ ಹೊಸದಾಗಿ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಈಗ ಸುಗ್ರೀವಾಜ್ಞೆಗೆ ರಾಜ್ಯಪಾಲರ ಬಳಿ ಅಂಕಿತ ಪಡೆಯಲು ನಿರ್ಧರಿಸಿದೆ. ಇನ್ನು ಮೈಕ್ರೋಫೈನಾನ್ಸ್ ವಿಚಾರದ ಸುಗ್ರೀವಾಜ್ಞೆಗೆ ಸಂಬಂಧಿಸಿ ಮತ್ತೊಂದು ಹಂತದ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಿಎಂಗೆ ನಿರ್ಣಯ ಕೈಗೊಳ್ಳುವ ಪರಮಾಧಿಕಾರ ನೀಡಿದ್ದು, ಕೆಲವು ಅಂಶಗಳನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕೆ ಚರ್ಚೆಯ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಇದನ್ನೂ ಓದಿ: ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ
ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್, ಫೈನಾನ್ಸ್ಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಅಮಾನವೀಯವಾಗಿ ಮೈಕ್ರೋ ಪೈನಾನ್ಸ್ನಿಂದ ಸಾಲ ವಸೂಲಿ ಆಗುತ್ತಿದೆ. ಇಂದು ಕೂಡ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶ ಚರ್ಚಿಸಿದ್ದೇವೆ. ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಕೆಲವು ಮಹತ್ವದ ವಿಚಾರ ಇರುವುದರಿಂದ ಸಭೆ ಮಾಡುತ್ತಿದ್ದೇವೆ. ಸಂಜೆ 4 ಗಂಟೆಗೆ ಮಸೂದೆಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುಗ್ರೀವಾಜ್ಞೆ ತರಲು ಸಿಎಂಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ. ಸಿಎಂ ಜೊತೆ ಸಭೆಯ ಬಳಿಕ ಕಾನೂನಾತ್ಮಕವಾಗಿ ತಿರ್ಮಾನ ಆಗಲಿದೆ. ಸಂಪುಟ ಸಭೆಯಲ್ಲಿ ಸಂಪೂರ್ಣ ಅಧಿಕಾರ ಸಿಎಂ ಅವರಿಗೆ ನೀಡಲಾಗಿದೆ. ನಮ್ಮಲ್ಲಿರುವ ಕಾನೂನುಗಳು ಕೆಲವು ಪ್ಲಸ್ ಆಗಲಿವೆ. ಕೆಲವು ಮೈನಸ್ ಆಗಲಿವೆ. ಹೀಗಾಗಿ ಕಾನೂನಾತ್ಮಕ ತೀರ್ಮಾನಕ್ಕೆ ಸಂಜೆ ಹಿರಿಯ ಸಚಿವರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇನ್ನು ಈ ಮೈಕ್ರೋ ಫೈನಾನ್ಸ್ ಬಿಲ್ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯನವರು ಇಂದು (ಜನವರಿ 30) ಸಂಜೆ ಹಿರಿಯ ಸಚಿವರ ಸಭೆ ನಡೆಸಲಿದ್ದು, ಯಾವ ಇಲಾಖೆ ಇದರ ಹೊಣೆಗಾರಿಕೆ ಹೊರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. RBI ಕಾನೂನು ಸುಗ್ರೀವಾಜ್ಞೆಗೆ ಸದ್ಯ ಅಡ್ಡಿಯಾಗುತ್ತಿದೆ. ಹೀಗಾಗಿ ಇದನ್ನು ನಿವಾರಿಸಿಕೊಳ್ಳುವುದು ಹೇಗೆ? ಎನ್ನುವ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೇ ಯಾವ ಇಲಾಖೆ ಇದರ ಹೊಣೆಗಾರಿಕೆ ಹೊರಬೇಕು ಎಂಬ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Thu, 30 January 25