Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

Ramesha M
| Updated By: ರಮೇಶ್ ಬಿ. ಜವಳಗೇರಾ

Updated on:Jan 30, 2025 | 4:33 PM

ಮುಡಾ ಹಗರಣ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ. ಬಗೆದಷ್ಟು ಒಂದೊಂದೇ ರಹಸ್ಯ ಬಯಲಾಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳ ತನಿಖೆ ವರದಿ ಸಿದ್ಧವಾಗಿದ್ದು, ಮತ್ತೊಂದೆಡೆ ಹೈಕೋರ್ಟ್​, ಸಿಬಿಐ ತನಿಖೆಗೆ ಕೊಡಬೇಕಾ? ಬೇಡ್ವಾ? ಎನ್ನುವ ಆದೇಶವನ್ನು ಕಾಯ್ದಿರಿಸಿದೆ. ಇದರ ನಡುವೆಯೇ ಇದೀಗ ಹಗರಣದಲ್ಲಿ ಬಿಗ್​ ಡೆವಲಪ್​ಮೆಂಟ್​ ನಡೆದಿದ್ದು, ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎನ್ನುವ ಸ್ಫೋಟಕ ಅಂಶ ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು, (ಜನವರಿ 30):  ರಾಜ್ಯ ರಾಜಕಾರಣದಲ್ಲೇ ಸಂಚಲನ ಸೃಷ್ಟಿಸಿರುವ ಮುಡಾ ಸೈಟ್ ಹಂಚಿಕೆ ಅಕ್ರಮ ಕೇಸ್​ನಲ್ಲಿ ಟಿವಿ9ಗೆ ಮತ್ತೊಂದು ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಮೊನ್ನೆಯಷ್ಟೇ ಸಿಎಂ ಪತ್ನಿ ಪಾರ್ವತಿಗೆ ಸಮನ್ಸ್ ಜಾರಿ ಮಾಡಿದ್ದ ಇಡಿ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಮುಡಾ ಅಕ್ರಮ ವರ್ಗಾವಣೆಯ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಇಡಿ ತತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮುಡಾ ಜಮೀನನನ್ನು 3,24,700 ರೂ. ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ತಪ್ಪು ಮಾಹಿತಿ, ಪ್ರಭಾವ ಆಧರಿಸಿ ಕಾನೂನುಬಾಹಿರ ಡಿನೋಟಿಫಿಕೇಷನ್ ಮಾಡಲಾಗಿದೆ. ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಇದನ್ನು ಕೃಷಿ ಜಮೀನೆಂದು ಖರೀದಿಸಿದ್ದಾರೆ. ಅಷ್ಟರಲ್ಲಾಗಲೇ ಮುಡಾ ಇದನ್ನು ಬಡಾವಣೆಯಾಗಿ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಿತ್ತು, ಇದಕ್ಕೆ ಯಾವುದೇ ತಕರಾರು ಎತ್ತಿರಲಿಲ್ಲ. ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿದ್ದು, ರಾಜಕೀಯ ಪ್ರಭಾವ ಬಳಸಿ ಮುಡಾ ಸೈಟ್​ಗಳನ್ನು ಪಡೆದುಕೊಳ್ಳಲಾಗಿದೆ. 56 ಕೋಟಿ ಮೌಲ್ಯದ ಸೈಟ್​​ಗಳನ್ನು ಪರಿಹಾರವಾಗಿ ಪಡೆದುಕೊಳ್ಳಲಾಗಿದೆ. ಕಾನೂನುಬಾಹಿರವಾಗಿ ಪಡೆದ ಸೈಟ್​ಗಳನ್ನು ಪರಿಹಾರವೆಂದು ಬಿಂಬಿಸಲಾಗಿದೆ. ಹಿಂದಿನ ಮುಡಾ ಆಯುಕ್ತ ನಟೇಶ್ ಶಾಮೀಲಾಗಿ ಈ ಪ್ರಕ್ರಿಯೆ ನಡೆಸಲಾಗಿದೆ. PMLA ಅಡಿ ತನಿಖೆ ಆರಂಭಿಸಿದ ನಂತರ 2024ರ ಅಕ್ಟೋಬರ್ 1ರಂದು ಪಾರ್ವತಿ 14 ಸೈಟ್ ಹಿಂತಿರುಗಿಸಿದ್ದಾರೆ. ಸೈಟ್ ಹಿಂತಿರುಗಿಸಿದ್ದರೂ ಅಕ್ರಮ ಹಣ ವರ್ಗಾವಣೆಯ ಯತ್ನ ಪತ್ತೆಯಾಗಿದೆ.

ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ದೇವರಾಜು ಮುಡಾ ಅಧಿಕಾರಿಗಳು, ವ್ಯವಹಾರಸ್ಥರು, ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇವಲ ಪಾರ್ವತಿಯವರ ಕೇಸ್​ನಲ್ಲಿ ಮಾತ್ರವಲ್ಲ. ಸುಮಾರು 1,095 ಮುಡಾ ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖವಾಗಿದೆ.

ಮುಖ್ಯಮಂದಾಖಲೆ ತಿದ್ದುಪಡಿ, ಸಹಿ ನಕಲು, ಸಾಕ್ಷ್ಯ ನಾಶ ಎಲ್ಲವೂ ತನಿಖೆಯಲ್ಲಿ ಪತ್ತೆಯಾಗಿದೆ. 14 ಸೈಟ್ ಹಂಚಿಕೆಯಾದಾಗ ಡಾ.ಯತೀಂದ್ರ ಮುಡಾ ಸದಸ್ಯರಾಗಿದ್ದರು. ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದು. S.G.ದಿನೇಶ್ ಕುಮಾರ್ @ ಸಿ.ಟಿ.ಕುಮಾರ್ ಆಪ್ತ ಸಹಾಯಕರಾಗಿದ್ದರು. ಸಿ.ಟಿ.ಕುಮಾರ್ ಮುಡಾ ಅಧಿಕಾರಿಗಳ ಮೇಲೆ ಅನುಚಿತ ಪ್ರಭಾವ ಬೀರಿದ್ದರು. ಸಹಿಯನ್ನೇ ನಕಲು ಮಾಡಿ ಸೈಟ್ ಹಂಚಿಕೆಯಾಗುವಂತೆ ನೋಡಿಕೊಂಡಿದ್ದರು ಎಂದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಸಿಎಂ ಹಾಗೂ ಪತ್ನಿ ವಿರುದ್ಧ ಇಡಿ ಪತ್ತೆ ಹಚ್ಚಿರುವ ಅಕ್ರಮಗಳು

ಜಮೀನು ಖರೀದಿಸಿದ 10 ವರ್ಷಗಳ ಬಳಿಕ ಸಿದ್ದರಾಮಯ್ಯ ಸಿಎಂ ಆದಾಗ ಪಾರ್ವತಿ ಅರ್ಜಿ ಸಲ್ಲಿಸಿದ್ದು, ಭೂಸ್ವಾಧೀನ ಮಾಡಿಕೊಳ್ಳದೇ ತಮ್ಮ ಜಮೀನು ಮುಡಾ ಬಳಸಿದೆ ಎಂದು ಸಿಎಂ ಪತ್ನಿ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಆಗ ಜಮೀನು ಮುಡಾ ಸ್ವಾಧೀನದಲ್ಲೇ ಇತ್ತೇ ಹೊರತು ಇವರ ಸ್ವಾಧೀನದಲ್ಲಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದು 13.5.2013 ರಂದು ಪತ್ನಿ ಅರ್ಜಿ ಸಲ್ಲಿಸಿದ್ದು 14.6.2014 ರಂದು ಪತ್ರದಲ್ಲಿನ ಒಂದು ಸಾಲು ಅಳಿಸಲಾಗಿದೆ. ಇದು ದಾಖಲೆ ತಿರುಚಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಇಡಿ ಉಲ್ಲೇಖಿಸಿದೆ.

ಮಾರ್ಚ್ 20, 2021ರ ಮುಡಾ ಸಭೆಯಲ್ಲಿ ಸಿಎಂ ಪುತ್ರ ಯತೀಂದ್ರ ಭಾಗಿಯಾಗಿದ್ದರು/ ಆದರೆ ಸಿಎಂ ಪತ್ನಿ ಅವರ ಮನವಿ ಮೇರೆಗೆ ಸಭೆಯನ್ನು ಮುಂದೂಡಲಾಯಿತು. ಸಿಎಂ ಪತ್ನಿಗೆ ಸೈಟ್ ಹಂಚಿಕೆಯ ಒಂದೇ ಉದ್ದೇಶದಿಂದ ಮುಡಾ ಸಭೆ ನಡೆದಿತ್ತು. ಇದು ಸಿಎಂ ಪತ್ನಿಗೆ ಅಂದಿನ ಮುಡಾ ಆಯುಕ್ತರು ಆದ್ಯತೆ ನೀಡಿದ್ದಕ್ಕೆ ನಿದರ್ಶನ. ಈ ಅಂಶವನ್ನು ಮುಡಾ ಆಯುಕ್ತ ಡಿ.ಬಿ.ನಟೇಶ್ ಇಡಿ ಮುಂದಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿಎಂ ಪತ್ನಿಗೆ ಕೊಡಬೇಕಾದ ಪರಿಹಾರದ ಸೈಟ್ ಗಳನ್ನು ಖುದ್ದು ಮುಡಾ ಆಯುಕ್ತರಿಂದಲೇ ಆಯ್ಕೆಯಾಗಿದೆ. ಸೈಟ್ ಹಂಚಿಕೆ ವಿಭಾಗ ಬಿಟ್ಟು ಸ್ವತಹ ಡಿ.ಬಿ.ನಟೇಶ್ ಪರಿಹಾರದ ಸೈಟ್ ಆಯ್ಕೆ ಮಾಡಿದ್ದರು. ಪರಿಹಾರದ ಸೈಟ್ ಗಳನ್ನು ಅದೇ ಬಡಾವಣೆಯಲ್ಲಿಯೇ ಲಾಟರಿ ಹಂಚಿಕೆ ಮಾಡಬೇಕೆಂಬ ನಿಯಮವಿದೆ. ಆದ್ರೆ, ದೇವನೂರು ಬಡಾವಣೆಯಲ್ಲಿ 352 ಸೈಟ್ ಗಳಿದ್ದರೂ ವಿಜಯನಗರ ಬಡಾವಣೆಯಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ.

ಹರಾಜಿನಲ್ಲಿ ಮಾರಾಟವಾಗಬೇಕಿದ್ದ ಕಮರ್ಷಿಯಲ್ ಸೈಟ್ ಗಳನ್ನೇ ಸಿಎಂ ಪತ್ನಿಗೆ ನೀಡಲಾಗಿತ್ತು. ಪರಿಹಾರದ ಸೈಟ್ ಪಡೆಯಲು ಸಿಎಂ ಪತ್ನಿ ಸಾಮಾನ್ಯ ಪ್ರಕ್ರಿಯೆ ಅನುಸರಿಸಿರಲಿಲ್ಲ. ಸಿಎಂ ಪತ್ನಿ ನಷ್ಟ ಭರ್ತಿ ಬಾಂಡ್ ಪೇಪರ್ ಖರೀದಿಸಿದ್ದು, 2021ರ ನವೆಂಬರ್ 24 ರಂದು. ಆದರೆ ಖರೀದಿಗೆ ಮೊದಲೇ ನವೆಂಬರ್ 23 ರಂದು ಸಹಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಒತ್ತಡದಿಂದ ಸಿಎಂ ಪತ್ನಿಗೆ ಅನುಕೂಲ ಮಾಡಿಕೊಡಲು ದಾಖಲೆಗಳನ್ನು ತಿರುಚಲಾಗಿದೆ ಎಂದು ಇಡಿ ಹೇಳಿದೆ.

ಸಿಎಂ ಪತ್ನಿಗೆ 1991 ರ ನಿಯಮಾವಳಿಯಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ ಆಗ 50 : 50 ನಿಯಮವಿರಲಿಲ್ಲ. ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ.ಕುಮಾರ್ @ ಎಸ್.ಜಿ.ದಿನೇಶ್ ಕುಮಾರ್ ಪ್ರಭಾವ ಬಳಕೆ ಮಾಡಲಾಗಿದೆ. ಸಿಎಂ ಪತ್ನಿ ಪರವಾಗಿ ಸಿ.ಟಿ.ಕುಮಾರ್ ಮುಡಾ ಕಚೇರಿಗೆ ಬಂದು ಪರಿಹಾರದ ಸೈಟ್ ಗಳ ಬಗ್ಗೆ ಚರ್ಚಿಸಿದ್ದರು. ಮುಡಾ ಆಯುಕ್ತರ ಪಿಎಂ ಜೊತೆ ಸಿ.ಟಿ.ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಮುಡಾ ಆಯುಕ್ತರು ನಗರಾಭಿವೃದ್ದಿ ಇಲಾಖೆಗೆ ನೀಡಬೇಕಿದ್ದ ಕರಡು ಪತ್ರ ಸಿ.ಟಿ.ಕುಮಾರ್ ಬಳಿ ಪತ್ತೆ. ಸಿ.ಟಿ.ಕುಮಾರ್ ವಾಟ್ಸ್ ಆಪ್ ಮೆಸೇಜ್ ನಲ್ಲಿ ಪತ್ರ ಪತ್ತೆಯಾಗಿರುವುದು ಈತ ಪ್ರಭಾವಿ ಎಂಬುದಕ್ಕೆ ಸಾಕ್ಷಿ ಎಂದು ಇಡಿ ಆದೇಶದಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖಿಸಲಾಗಿದೆ.

Published on: Jan 30, 2025 04:13 PM