
ಬೆಂಗಳೂರು, ನವೆಂಬರ್ 11: ಬಹು ನಿರೀಕ್ಷಿತ ಯಶವಂತಪುರ–ಮಡಗಾಂವ್–ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (ರೈಲು ಸಂಖ್ಯೆ 26655/26656) ಪ್ರಯಾಣಿಸುವ ಪ್ರಯಾಣಿಕರು ಹೆಚ್ಚುವರಿ ಟಿಕೆಟ್ ದರ ಪಾವತಿಸಬೇಕಾಗುತ್ತದೆ. ಇದೇ ದೂರದ ಇತರ ವಂದೇ ಭಾರತ್ ರೈಲುಗಳಿಗೆ ಹೋಲಿಸಿದರೆ ಚೇರ್ ಕಾರ್ (CC) ಪ್ರಯಾಣಿಕರು ಸುಮಾರು ₹200 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಪ್ರಯಾಣಿಕರು ಸುಮಾರು ₹300ಕ್ಕೂ ಹೆಚ್ಚು ಹೆಚ್ಚುವರಿ ದರ ತೆರಬೇಕಿದೆ.
ಉದಾಹರಣೆಗೆ, ಯಶವಂತಪುರದಿಂದ ಮಡಗಾಂವ್‌ವರೆಗಿನ 670 ಕಿ.ಮೀ. ಪ್ರಯಾಣಕ್ಕೆ ಚೇರ್ ಕಾರ್‌ನ ಮೂಲ ದರ ಸುಮಾರು ₹1,186 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್‌ನ ಮೂಲ ದರ ₹2,444 ಆಗಿರಬೇಕಿತ್ತು. ಆದರೆ, ರೈಲ್ವೆ ಇಲಾಖೆ ಪ್ರಯಾಣದ ದೂರವನ್ನು 844 ಕಿ.ಮೀ. ಎಂದು ಪರಿಗಣಿಸುತ್ತಿರುವುದರಿಂದ ಚೇರ್ ಕಾರ್ ದರ ₹1,369ಕ್ಕೆ ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ದರ ₹2,795ಕ್ಕೆ ಏರಿಕೆಯಾಗಲಿದೆ. ಇದರಿಂದ ಕ್ರಮವಾಗಿ ₹183 ಮತ್ತು ₹351 ಹೆಚ್ಚುವರಿ ಹೊರೆಯಾಗಲಿದೆ.
ಈ ಮೂಲ ದರದಲ್ಲಿ ರಿಸರ್ವೇಶನ್ ಶುಲ್ಕ, ಸೂಪರ್‌ಫಾಸ್ಟ್ ಶುಲ್ಕ ಹಾಗೂ ಜಿಎಸ್‌ಟಿ ಸೇರಿಲ್ಲ. ಚೇರ್ ಕಾರ್‌ಗೆ ₹40 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ ₹60 ರಿಸರ್ವೇಶನ್ ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ ಸೂಪರ್‌ಫಾಸ್ಟ್ ಶುಲ್ಕ ಕ್ರಮವಾಗಿ ₹45 ಮತ್ತು ₹75 ಇರಲಿದೆ. ಈ ಎಲ್ಲಾ ಶುಲ್ಕಗಳ ಮೇಲೆ ಶೇ.5ರಷ್ಟು ಜಿಎಸ್‌ಟಿಯೂ ಅನ್ವಯವಾಗಲಿದೆ. ಪ್ರಯಾಣದ ವೇಳೆ ಆಹಾರ ಸೇವೆ ಆಯ್ಕೆ ಮಾಡಿಕೊಂಡರೆ ಹೆಚ್ಚುವರಿಯಾಗಿ ₹300ರಿಂದ ₹600ರವರೆಗೆ ಕ್ಯಾಟರಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ತನ್ನ ವ್ಯಾಪ್ತಿಯ ರೈಲು ಮಾರ್ಗದಲ್ಲಿ ಪ್ರಯಾಣಿಕರ ಟಿಕೆಟ್ ದರ ಲೆಕ್ಕಾಚಾರಕ್ಕಾಗಿ ವಾಸ್ತವ ದೂರಕ್ಕಿಂತ ಶೇ.40ರಷ್ಟು ಹೆಚ್ಚುವರಿ ದೂರವನ್ನು ಪರಿಗಣಿಸುತ್ತದೆ. ಸರಕು ಸಾಗಣೆಗೆ ಶೇ.50ರಷ್ಟು ಹೆಚ್ಚುವರಿ ದೂರವನ್ನು ಲೆಕ್ಕ ಹಾಕುತ್ತದೆ. ಮಂಗಳೂರು ಸಮೀಪದ ತೋಕೂರು ನಿಲ್ದಾಣದಿಂದ ಮಹಾರಾಷ್ಟ್ರದ ರೋಹಾವರೆಗೆ ಕೊಂಕಣ ರೈಲ್ವೆಯ ಮಾರ್ಗವಿದೆ. ಈ ಮಾರ್ಗದಲ್ಲಿ ತೋಕೂರಿನಿಂದ ಮಡಗಾಂವ್‌ವರೆಗಿನ ಸುಮಾರು 300 ಕಿ.ಮೀ. ದೂರವನ್ನು 416 ಕಿ.ಮೀ. ಎಂದು ಪರಿಗಣಿಸಲಾಗುತ್ತದೆ.
ಇದರ ಜೊತೆಗೆ, ದಕ್ಷಿಣ ಪಶ್ಚಿಮ ರೈಲ್ವೆ (SWR) ವ್ಯಾಪ್ತಿಯ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ. ಘಾಟ್ ಮಾರ್ಗದ ದೂರವನ್ನೂ ಶೇ.100ರಷ್ಟು ಹೆಚ್ಚಿಸಿ 110 ಕಿ.ಮೀ. ಎಂದು ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಯಶವಂತಪುರದಿಂದ ಮಡಗಾಂವ್‌ವರೆಗಿನ ವಾಸ್ತವಿಕ 670 ಕಿ.ಮೀ. ದೂರವು ಟಿಕೆಟ್ ದರ ಲೆಕ್ಕಾಚಾರದಲ್ಲಿ 844 ಕಿ.ಮೀ. ಆಗುತ್ತದೆ. ಘಾಟ್ ಪ್ರದೇಶಗಳಲ್ಲಿ ರೈಲು ಸಂಚಾರ ನಿರ್ವಹಿಸುವುದು ಕಷ್ಟಕರವಾಗಿರುವುದರಿಂದ ಇಂತಹ ಮಾರ್ಗಗಳಲ್ಲಿ ಹೆಚ್ಚುವರಿ ದೂರ ಪರಿಗಣಿಸುವ ಪದ್ಧತಿ ಭಾರತೀಯ ರೈಲ್ವೆಯಲ್ಲಿ ಇದೆ ಎಂದು SWR ಸಮರ್ಥಿಸಿಕೊಂಡಿದೆ.
ಕರ್ನಾಟಕದಲ್ಲಿ ಸಂಚರಿಸುವ ಇತರ ವಂದೇ ಭಾರತ್ ರೈಲುಗಳಲ್ಲಿ ಇದೇ ರೀತಿಯ ದೂರಕ್ಕೆ ಸಾಮಾನ್ಯ ದರ ವಿಧಿಸಲಾಗುತ್ತಿದೆ. 620 ಕಿ.ಮೀ. ದೂರದ ಮಂಗಳೂರು–ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್‌ನಲ್ಲಿ CC ಮತ್ತು EC ಮೂಲ ದರ ಕ್ರಮವಾಗಿ ₹1,131 ಮತ್ತು ₹2,295 ಇದೆ. ಅದೇ ರೀತಿ, 625 ಕಿ.ಮೀ. ದೂರದ ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ಜಂಕ್ಷನ್ ರೈಲಿನಲ್ಲಿ ₹1,159 ಮತ್ತು ₹2,352, 612 ಕಿ.ಮೀ. ದೂರದ ಬೆಂಗಳೂರು–ಬೆಳಗಾವಿ ವಂದೇ ಭಾರತ್‌ನಲ್ಲಿ ₹1,132 ಮತ್ತು ₹2,295 ಮೂಲ ದರ ವಿಧಿಸಲಾಗುತ್ತಿದೆ. ಹೀಗಾಗಿ ಯಶವಂತಪುರ–ಮಡಗಾಂವ್ ವಂದೇ ಭಾರತ್‌ನಲ್ಲಿ ದೂರದ ಲೆಕ್ಕಾಚಾರದಿಂದಾಗಿ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.