ಕೊರೊನಾ ಲಾಕ್​ಡೌನ್​ನಿಂದ ಕುಸಿದು ಬಿತ್ತು ಕೃಷಿ ಉತ್ಪನ್ನಗಳ ಬೆಲೆ; ಕೋಲಾರದ ರೈತರಲ್ಲಿ ಹೆಚ್ಚಿದ ಆತಂಕ

|

Updated on: May 04, 2021 | 7:51 AM

ಲಾಕ್​ಡೌನ್​ನಿಂದ ಕೃಷಿ ಚುಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದ ನಂತರದಲ್ಲಿ ಎಪಿಎಂಸಿಗಳಿಗೆ ಕೇವಲ ಆರು ಗಂಟೆಗಳ ಕಾಲ ಮಾತ್ರ ಅವಕಾಶ ನೀಡಿರುವುದರಿಂದ ಎಪಿಎಂಸಿಗಳಿಗೆ ಬರುವ ಶೇಕಡಾ 60 ರಷ್ಟು ಕೃಷಿ ಉತ್ಪನ್ನಗಳು ಮಾರಾಟವಾಗದೆ ಉಳಿಯುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಕೊರೊನಾ ಲಾಕ್​ಡೌನ್​ನಿಂದ ಕುಸಿದು ಬಿತ್ತು ಕೃಷಿ ಉತ್ಪನ್ನಗಳ ಬೆಲೆ; ಕೋಲಾರದ ರೈತರಲ್ಲಿ ಹೆಚ್ಚಿದ ಆತಂಕ
ಕೋಲಾರದ ಎಪಿಎಂಸಿ ಮಾರುಕಟ್ಟೆ ಮುಂದೆಯೇ ಬೆಳೆದ ಬೆಳೆ ಇಡಲಾಗಿದೆ.
Follow us on

ಕೋಲಾರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದು, ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದರ ಮಧ್ಯೆ ಆಕ್ಸಿಜನ್ ಸಿಗದೆ ಜನರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಿದೆ. ಆದರೆ ಸರ್ಕಾರದ ಈ ನಿರ್ಧಾರದಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಂತಹ ಹಿನ್ನೆಲೆಯಲ್ಲಿ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆ ಹಾಗೂ ತೋಟಗಳಲ್ಲಿಯೇ ರೈತರು ಬೆಳೆಯನ್ನು ಬಿಡುತ್ತಿರುವುದು ಕಂಡುಬಂದಿದೆ.

ಕೋಲಾರ ಜಿಲ್ಲೆಯಲ್ಲಿ ಲಾಕ್​ಡೌನ್​​ನಿಂದಾಗಿ ಹಣ್ಣು-ತರಕಾರಿಗಳ ಬೆಲೆ ಕಡಿಮೆಯಾಗಿರುವುದು ಒಂದೆಡೆಯಾದರೆ, ಎಪಿಎಂಪಿ ಮಾರುಕಟ್ಟೆಗಳು ಬೆಳಗ್ಗೆ 6 ರಿಂದ 12 ರವರೆಗೆ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಆದೇಶಿಸಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಸಮರ್ಪಕವಾಗಿ ಹರಾಜು ಪ್ರಕ್ರಿಯೆ ನಡೆಯದೆ ಲಕ್ಷಾಂತರ ಮೌಲ್ಯದ ಬೆಳೆ ಎಪಿಎಂಸಿಗಳಲ್ಲಿ ಉಳಿಯುವಂತಾಗಿದೆ. ಲಾಕ್​ಡೌನ್​ನಿಂದ ಕೃಷಿ ಚುಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದ ನಂತರದಲ್ಲಿ ಎಪಿಎಂಸಿಗಳಿಗೆ ಕೇವಲ ಆರು ಗಂಟೆಗಳ ಕಾಲ ಮಾತ್ರ ಅವಕಾಶ ನೀಡಿರುವುದರಿಂದ ಎಪಿಎಂಸಿಗಳಿಗೆ ಬರುವ ಶೇಕಡಾ 60 ರಷ್ಟು ಕೃಷಿ ಉತ್ಪನ್ನಗಳು ಮಾರಾಟವಾಗದೆ ಉಳಿಯುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಹಾಕಿದ ಬಂಡವಾಳವೂ ಸಿಗುತ್ತಿಲ್ಲ
ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರೈತರು ಬೆಳೆಯುವಂತಹ ಉತ್ಪನ್ನಗಳ ಬೆಲೆ ದಿಢೀರ್ ಕುಸಿತವಾಗಿದ್ದು, ಕೂಲಿ ಹಾಗೂ ಸಾಗಾಣಿಕೆ ವೆಚ್ಚವೂ ರೈತರಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಮಾರುಕಟ್ಟೆಗೆ ತಂದ ಉತ್ಪನ್ನಗಳನ್ನು ಖರೀದಿಸಲು ವರ್ತಕರು ಮಾರುಕಟ್ಟೆಗಳತ್ತ ಬರುತ್ತಿಲ್ಲ. ಇದರ ಪರಿಣಾಮ ರೈತರು ಮಾರುಕಟ್ಟೆಯಲ್ಲಿಯೇ ತಾವು ತಂದ ಉತ್ಪನ್ನಗಳನ್ನು ಬಿಟ್ಟು ಹೋಗುತ್ತಿದ್ದಾರೆ.

ಬೀದಿಗೆ ಬಿತ್ತು ಹೂವು ಬೆಳೆಗಾರರ ಸ್ಥಿತಿ
ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಜಾತ್ರೆ, ಉತ್ಸವಗಳ ಮೇಲೆ ಈಗಾಗಲೇ ಸರ್ಕಾರ ನಿಷೇದ ಹೇರಿರುವ ಹಿನ್ನೆಲೆಯಲ್ಲಿ, ದೇವಾಲಯಗಳಲ್ಲಿ ನಿತ್ಯ ಸಾಂಕೇತಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಯಾವುದೇ ಸಭೆ-ಸಮಾರಂಭಗಳು ನಡೆಯದ ಪರಿಣಾಮ ಹೂವು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿಯೂ ಹೂವು ಬೆಳೆಗಾರರು ತೀವ್ರ ತೊಂದರೆ ಅನುಭವಿಸಿದ್ದರು, ಇಂದಿಗೂ ಸಾವಿರಾರು ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಇದೀಗ ಮತ್ತೆ ಲಾಕ್​ಡೌನ್​ನಿಂದಾಗಿ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ದೇವಾಲಯಗಳು ಮುಚ್ಚಿದ್ದು, ಮದುವೆ, ಗೃಹಪ್ರವೇಶದಂತಹ ಸಮಾರಂಭಗಳು ನಡೆಯುತ್ತಿಲ್ಲ. ಇನ್ನು ಬೇರೆ ರಾಜ್ಯಗಳ ವರ್ತಕರೂ ಸಹ ಹೂವು ಖರೀದಿಗೆ ರಾಜ್ಯಗಳತ್ತ ಬರುತ್ತಿಲ್ಲ. ಹೀಗಾಗಿ ರೈತರು ಬೆಳೆದ ಹೂ ಬೆಳೆ ತೋಟಗಳಲ್ಲಿಯೇ ಉಳಿಯುತ್ತಿವೆ.

ಹೊಲದಲ್ಲೇ ಇರುವ ಹೂವು

ಟೊಮ್ಯಾಟೊ ಹಣ್ಣನ್ನು ಕೇಳುವವರಿಲ್ಲ, ಬೆಲೆಯೂ ಇಲ್ಲ
ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬೆಳೆಯುವ ಟೊಮ್ಯಾಟೊ ಬೆಲೆ ಕೆಜಿಗೆ ಕೇವಲ 2-3 ರೂಪಾಯಿಗೆ ಆಗಿದೆ. ಮಾರುಕಟ್ಟೆಗೆ ತಂದರೂ ವರ್ತಕರು ಟೊಮ್ಯಾಟೊ ಖರೀದಿಗೆ ಮುಂದಾಗುತ್ತಿಲ್ಲ. ಇದರೊಂದಿಗೆ ಪ್ರಮುಖ ಸಂಸ್ಕರಣಾ ಘಟಕಗಳು ಟೊಮ್ಯಾಟೊ ಖರೀದಿಯನ್ನು ಸ್ಥಗಿತಗೊಳಿಸಿದರಿಂದಾಗಿ ಕೋಲಾರ ಎಪಿಎಂಸಿ ಒಂದರಲ್ಲಿಯೇ ನಿತ್ಯ 15-18 ಸಾವಿರ ಬಾಕ್ಸ್ ಟೊಮ್ಯಾಟೋ ಬೆಳೆಯನ್ನು ಮಾರುಕಟ್ಟೆಯಲ್ಲೇ ಬಿಟ್ಟು ಹೋಗುವಂತ ಸ್ಥಿತಿ ಇದೆ.

ಟೊಮೆಟೊ ಬೆಳೆ

ಹೋಟೆಲ್‌ಗಳು, ಬೀದಿ ಬದಿ ಅಂಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕ್ಯಾಪ್ಸಿಕಂ, ಬಜ್ಜಿ ಮೆಣಸಿನ ಕಾಯಿ ಸೇರಿದಂತೆ ಸೌತೆಕಾಯಿ, ಖರ್ಬೂಜ, ಚಿಕ್ಕಡಿ, ಎಲೆಕೋಸ್, ಕ್ಯಾರೆಟ್, ಸೋರೆಕಾಯಿ, ಬೀಟ್‌ರೂಟ್ ಮತ್ತು ಇತರೆ ಕೃಷಿ ಉತ್ಪನ್ನಗಳು ಹರಾಜಾಗದೆ ಉಳಿಯುತ್ತಿವೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್​ ಹೇಳಿದ್ದಾರೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ದೇಶದ ವಿವಿಧ ರಾಜ್ಯಗಳಿಗೆ ತರಕಾರಿ ಹಾಗೂ ಟೊಮ್ಯಾಟೊ ಸರಬರಾಜು ಮಾಡಲಾಗುತ್ತದೆ. ಆದರೆ ಈಗ ಲಾಕ್​ಡೌನ್​ ಇರುವ ಪರಿಣಾಮ ಹೊರ ರಾಜ್ಯದ ವರ್ತಕರು ಯಾರು ಬರುತ್ತಿಲ್ಲ. ಹಾಗಾಗಿ ಬೇಡಿಕೆ ಕಡಿಮೆಯಾಗಿದೆ ಎಂದು ಮಂಡಿ ಮಾಲೀಕ ಪುಟ್ಟರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ; ಕೋಲಾರದಲ್ಲಿ ಆಲೂಗಡ್ಡೆ ಬೆಳೆದ ರೈತ ಕಂಗಾಲು

ಜನತಾ ಕರ್ಫ್ಯೂ ಬಿಸಿಗೆ ಬಾಡಿಹೋದ ಮಲ್ಲಿಗೆ; ಹೂವಿನ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾದ ಉಡುಪಿ ಬೆಳೆಗಾರರು